ಭಾನುವಾರ, ಆಗಸ್ಟ್ 14, 2022
21 °C

ಕುರುಬ ಸಮಾಜ ಎಸ್‌ಟಿಗೆ ಸೇರಿಸಲು ಹೋರಾಟ: ವಿರೂಪಕ್ಷಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಪಕ್ಷಾತೀತವಾಗಿ ಸಮಾಜದ ನಾಲ್ಕು ಜನ ಮಠಾಧೀಶರ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗಿದೆ ಎಂದು ಎಸ್‌.ಟಿ. ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಪ್ರಶ್ನಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಅನೇಕ ಹೋರಾಟಗಳು ನಡೆದಿವೆ. ಈಚೆಗೆ ನಡೆದ ಸಮಾವೇಶದಲ್ಲಿಯೂ ಕೂಡ ಸಮಾಜದ ಗುರು ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದರೂ ಕೂಡ ಅವರು ಬರಲಿಲ್ಲ. ಈಶ್ವರಪ್ಪ ಅವರು ಭಾಗವಹಿಸಿದ್ದಾರೆ. ಸಿದ್ದರಾಮಯ್ಯ ಅವರು ಕುರುಬ ಸಮಾಜದ ಮುಂಚೂಣಿ ನಾಯಕ. ಆದರೆ ಹೋರಾಟಕ್ಕೆ ಬಾರದಿರಲು ಒಳಮರ್ಮ ಏನು ಎಂದು ಗೊತ್ತಿಲ್ಲ ಎಂದರು.

1975 ರಲ್ಲಿ ದೇವರಾಜು ಅರಸರ ಆಡಳಿತಾವಧಿಯಲ್ಲಿ ಲಂಬಾಣಿ, ಭೋವಿ, ಕೊರಮ , ಕೊರಚ ಸಮಾಜಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸದೇ ಕೊಡಗು ಜಿಲ್ಲೆಯಲ್ಲಿ ಮಾತ್ರ ಪರಿಶಿಷ್ಠ ಮೀಸಲಾತಿ ನೀಡಲಾಗಿದೆ. ರಾಜ್ಯಕ್ಕೂ ವಿಸ್ತರಿಸಬೇಕಿದೆ ಎಂದು ಹೇಳಿದರು.

ಈಗಾಗಲೇ ಸಮಾಜದ ಜನಪ್ರತಿನಿಧಿಗಳು ಸಮಾಜದ ಗುರುಗಳು, ಮಹಿಳಾ ಮುಖಂಡರು ಸಮಾವೇಶ ಮಾಡಿದ್ದಾರೆ. ಬಿಜೆಪಿ ರಾಷ್ಟ್ರ ಕಾರ್ಯದರ್ಶಿ ಬಿ.ಎಲ್.ಸಂತೋಷ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇದು ಆರ್ ಎಸ್ಎಸ್  ಹೋರಾಟವಲ್ಲ. ಸಮಾಜದ ಹೋರಾಟ ಎಂದು ತಿಳಿಸಿದರು.

ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನವರಿ 2, ಬಳ್ಳಾರಿ ಮತ್ತು ಕೊಪ್ಪಳ ಹಾಗೂ ಜನವರಿ 3 ರಂದು ಕಲಬುರಗಿ, ಯಾದಗಿರಿ ಬೀದರ್ ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಲಾಗುವುದು ಎಂದು ಹೇಳಿದರು.

ಆನಂತರ ಜನವರಿ 15 ರಂದು ಕಾಗಿನೆಲೆ ಕನಕಗುರುಪೀಠದ ನಾಲ್ಕು ಜನ ಶ್ರೀಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾದ ಮೂಲಕ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ 10 ಲಕ್ಷ ಸಮಾಜದ ಜನರನ್ನು ಸೇರಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು. 

ಸಮಾಜದ ಮುಖಂಡ ಎಂ.ಈರಣ್ಣ, ಸಿದ್ಧಯ್ಯ ಗುರುವಿನ ತಾತ, ಕೆ.ಬಸವಂತಪ್ಪ, ಬೀರಪ್ಪ ಕಡದಿನ್ನಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು