ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಹಳ್ಳಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕಕ್ಕೆ ಒತ್ತಾಯ

ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ
Last Updated 30 ನವೆಂಬರ್ 2021, 3:06 IST
ಅಕ್ಷರ ಗಾತ್ರ

ಜಾಲಹಳ್ಳಿ: ‘ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕು. ಮೂಲ ಸೌಕರ್ಯ ಒದಗಿಸಬೇಕು’ ಎಂದು ಒತ್ತಾಯಿಸಿ ಡಿವೈಎಫ್ಐ ಹಾಗೂ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಾಂತ ರೈತ ಸಂಘದ ಮುಖಂಡ ದುರಗಪ್ಪ ನಾಯಕ ಮಾತನಾಡಿ,‘ಪಟ್ಟಣದಲ್ಲಿ ಹೆಸರಿಗೆ ಮಾತ್ರ ಆಸ್ಪತ್ರೆ ಇದೆ. ತಜ್ಞ ವೈದ್ಯ, ಆಡಳಿತಾಧಿಕಾರಿ ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಜನ ಶಾಪ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

ಚಿಕಿತ್ಸೆ ಪಡೆಯಲು ಜನ ದೂರದ ಊರುಗಳಿಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಎರಡು ವರ್ಷಗಳ ಹಿಂದೆ ನೇಮಕವಾಗಿರುವ ದಂತ ವೈದ್ಯೆ ಇಲ್ಲಿಯವರೆಗೂ ಆಸ್ಪತ್ರೆಗೆ ಕಾಲಿಟ್ಟಿಲ್ಲ. ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಈ ವೇಳೆ
ಪ್ರಶ್ನಿಸಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಬನದೇಶ, ಡಿವೈಎಫ್ಐ ಸಂಘಟನೆಯ ಮುಖಂಡರಾದ ಮಕ್ತೂಮ್ ಪಾರಸಿ, ರಾಜು ನಾಯಕ, ಗುರುನಾಯಕ, ನರಸಣ್ಣ ನಾಯಕ, ಶಬ್ಬೀರ್ , ಹನುಮಂತ ಮಡಿವಾಳ, ಮೌನೇಶ್ ದಾಸರ್, ಬಸವರಾಜ ವಂದಲಿ, ಹನುಮಂತ ಜೆ ಎಸ್, ಬಸವರಾಜ ತೇಕೂರು, ಬಸಪ್ಪ ತವಗ, ಭೀಮಣ್ಣ ಡೆಂಗೆ ಸೇರಿದಂತೆ ಇತರರು ಇದ್ದರು.

ಸಮಸ್ಯೆ ಬಗೆಹರಿಸುವ ಭರವಸೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಮಕೃಷ್ಣ ಅವರು ಭೇಟಿ ನೀಡಿ ಪ್ರತಿಭಟನನಿರತರೊಂದಿಗೆ ಮಾತನಾಡಿದರು.

ಆಸ್ಪತ್ರೆಯಲ್ಲಿ ಸಮಸ್ಯೆಗಳಿರುವುದು ಸತ್ಯ. ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಮುಂದಿನ 15 ದಿನಗಳಲ್ಲಿ ವೈದ್ಯರನ್ನು ನಿಯೋಜನೆ ಮಾಡಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT