ಜಾಲಹಳ್ಳಿ: ಮುಕ್ಕನಾಳ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶ್ರೀನಿವಾಸ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಲೆಯ ಮುಂದೆ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಿದ್ದಣ್ಣ ನೇತೃತ್ವದಲ್ಲಿ ಪಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಾಂತ ರೈತ ಸಂಘದ ಮುಖಂಡ ಮುಕ್ಕನ ಗೌಡ ಮಾತನಾಡಿ, ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬಾರದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ ಶಾಲೆ ಇದ್ದು, 230 ವಿದ್ಯಾರ್ಥಿಗಳಿದ್ದಾರೆ. ಎಂಟು ಶಿಕ್ಷಕರ ಹುದ್ದೆಯಲ್ಲಿ ಮೂವರು ಮಾತ್ರ ಕಾಯಂ ಇದ್ದಾರೆ. ಪ್ರಭಾರ ಮುಖ್ಯ ಶಿಕ್ಷಕರು ಮಂಗಳವಾರ ಮಧ್ಯಾಹ್ನ 12 ಗಂಟೆಯಾದರೂ ಶಾಲೆಗೆ ಬಂದಿಲ್ಲ. ಉಳಿದ ಇಬ್ಬರು ಶಿಕ್ಷಕರು ವೈಯಕ್ತಿಕ ಕಾರಣದಿಂದ ರಜೆ ಪಡೆದು ಗೈರಾಗಿದ್ದಾರೆ. ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಸುವಂತಾಗಿದೆ ಎಂದು ದೂರಿದರು.
ಶಾಲೆ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಶ್ರೀನಿವಾಸ ಅವರು 7ನೇ ತರಗತಿಯ ಮಕ್ಕಳಿಗೆ ಒಂದು ದಿನವೂ ಪಾಠ ಮಾಡಿಲ್ಲ. ಇಂತಹ ಬೇಜಬ್ದಾರಿ ಶಿಕ್ಷಕರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವೇ ಎಂದು ತರಾಟೆಗೆ ತೆಗೆದು ಕೊಂಡರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಭಾರ ಮುಖ್ಯ ಶಿಕ್ಷಕನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಭೇಟಿ: ಪ್ರತಿಭಟನ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎಂ.ವಿ ಕವಡಿಮಟ್ಟಿ, ಮಹಾದೇವಪ್ಪ, ಶಶಿಧರ್, ಪ್ರಭುಲಿಂಗ ಚರ್ಚೆ ನಡೆಸಿದರು.
ಮುಖ್ಯ ಶಿಕ್ಷಕನನ್ನು ವಿಚಾರಣೆ ನಡೆಸಿದ ತಂಡವು ಶಿಕ್ಷಕನಿಂದ ತಪ್ಪೊಪ್ಪಿಗೆ ಬರೆಸಿಕೊಂಡರು. ಮೇಲಧಿಕಾರಿಗಳಿಗೆ ಈ ಶಾಲೆಯ ಸಮಸ್ಯೆ ಬಗ್ಗೆ ವರದಿ ನೀಡಿ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಹೇಳುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಮಕ್ಕಳನ್ನು ಶಾಲೆಗೆ ಕಳಿಸಿದರು.