ಸೋಮವಾರ, ಜನವರಿ 27, 2020
20 °C

ಪೌರ ಕಾರ್ಮಿಕ ಹುದ್ದೆ ನೇಮಕ; ಮುಂದೂಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳ ನೇಮಕ ಮುಂದೂಡುವಂತೆ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದ ಅವರು, ತಾಲ್ಲೂಕು ಮಟ್ಟದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಮುಗ್ಧ, ಅನಕ್ಷರಸ್ಥ, ಬಡತನಕ್ಕೆ ಸಿಲುಕಿದ ಜನರಾಗಿದ್ದಾರೆ. ನೇಮಕಾತಿ ಪ್ರಕ್ರಿಯೆ ವಿಷಯದಲ್ಲಿ ಅವರನ್ನು ಜಾಗೃತಗೊಳಿಸಬೇಕಾಗಿದೆ. ಒಂದು ವೇಳೆ ಪೌರಕಾರ್ಮಿಕರನ್ನು ನೇಮಕಾತಿ ವಿಷಯದಲ್ಲಿ ಜಾಗೃತಗೊಳಿಸದಿದ್ದರೆ, ರಾಯಚೂರು ನಗರಸಭೆಯಲ್ಲಿ ನಡೆದಂತೆ ಪೌರ ಕಾರ್ಮಿಕರಲ್ಲದವರು ಕಾನೂನು ಬಾಹಿರ ನೇಮಕವಾಗುವ ಸಾಧ್ಯತೆಗಳು ಇವೆ ಎಂದರು.

ಕಳೆದ ಎರಡು ವರ್ಷಗಳಿಂದ ನಗರಸಭೆ ನೇರವೇತನ ಪೌರಕಾರ್ಮಿಕರು ಹಾಗೂ ಗುತ್ತಿಗೆ ಪೌರ ಕಾರ್ಮಿಕರು 115 ಜನರ ಅಕ್ರಮ ನೇಮಕಾತಿ ಆದೇಶವನ್ನು ರದ್ದುಗೊಳಿಸಲು ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ ಬೆಂಗಳೂರಿನ ಪೌರ ನಿರ್ದೇಶನಾಲಯದ ನಿರ್ದೇಶಕರು ಆದೇಶವನ್ನು ರದ್ದುಪಡಿಸಲು ಆದೇಶಿಸಿರುತ್ತಾರೆ. ಹಾಗೂ ಉಪ ಮುಖ್ಯಮಂತ್ರಿಗಳು ದಿ.17–09–2019 ರಂದು ಆದೇಶವನ್ನು ರದ್ದುಪಡಿಸಲು ಆದೇಶಿಸಿರುತ್ತಾರೆ. ಇಷ್ಟಾದರೂ ಜಿಲ್ಲಾಧಿಕಾರಿಗಳು ಇಲ್ಲಿಯವರೆಗೆ ಅಕ್ರಮ ನೇಮಕಾತಿ ಆದೇಶವನ್ನು ರದ್ದುಪಡಿಸಲು ಮೀನಮೇಷ ಎಣಿಸುತ್ತಿದ್ದಾರೆ.

ತಾಲ್ಲೂಕುಗಳಲ್ಲಿ ನೆಲೆಸಿರುವ ಪೌರ ಕಾರ್ಮಿಕರು, ಅನಕ್ಷರಸ್ಥರಾಗಿದ್ದು, ಮಧ್ಯವರ್ತಿಗಳ, ರಾಜಕೀಯ ಹಿನ್ನೆಲೆ ಇರುವವರಿಂದ ನೇಮಕಾತಿ ವಿಷಯದಲ್ಲಿ ಅಕ್ರಮ ಆಗುವ ಸಂಭವ ಇದೆ. ಆದ್ದರಿಂದ ರಾಯಚೂರು ನಗರಸಭೆಯ 115 ಜನ ಅಕ್ರಮ ನೇಮಕಾತಿಯನ್ನು ರದ್ದು ಪಡಿಸಬೇಕು. ತಾಲ್ಲೂಕು ಪೌರ ಕಾರ್ಮಿಕರಿಗೆ ಅವರ ನೇಮಕಾತಿಗೆ ಸಂಬಂಧಿಸಿದಂತೆ ಜಾಗೃತ ಮೂಡಿಸಲು ಕಾಲವಕಾಶ ನೀಡಿ ಮತ್ತು ಈಗ ನಡೆದಿರುವ ನೇಮಕಾತಿ ಪ್ರಕ್ರಿಯೆಯನ್ನು ಮುಂದುಡುವಂತೆ ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮುತ್ತಣ್ಣ ಬೂದೆಪ್ಪ, ಮುಕುಂದಪ್ಪ, ಆರ್.ಹನುಮಂತ, ನರಸಿಂಹಲು, ಮಾರೆಮ್ಮ, ಪದಮ್ಮ, ಮಹಾದೇವಮ್ಮ ಸೇರಿದಂತೆ ಗುತ್ತಿಗೆ ಪೌರ ಸೇವಾ ನೌಕರರು ಇದ್ದರು.

ಪ್ರತಿಕ್ರಿಯಿಸಿ (+)