ವಿವಿಧ ಬೇಡಿಕೆಗಳು: ಕೆಎಸ್‌ಆರ್‌ಟಿಸಿ ನೌಕರರಿಂದ ಧರಣಿ

7
ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‌ ಜಿಲ್ಲಾ ಘಟಕದಿಂದ ಧರಣಿ

ವಿವಿಧ ಬೇಡಿಕೆಗಳು: ಕೆಎಸ್‌ಆರ್‌ಟಿಸಿ ನೌಕರರಿಂದ ಧರಣಿ

Published:
Updated:
Deccan Herald

ರಾಯಚೂರು: ಬೇರೆ ಬೇರೆ ನಿಗಮಗಳಿಗೆ ವರ್ಗಾವಣೆಯಾದ ಕಾರ್ಮಿಕರನ್ನು ಕೂಡಲೇ ವಿಮುಕ್ತಿಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘಟನೆಯ ಜಿಲ್ಲಾ ಘಟಕದಿಂದ ಶನಿವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.

ಸಾರಿಗೆ ಸಂಸ್ಥೆಯ ನೌಕರರು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ನೌಕರರು ಮಾನಸಿಕ ಒತ್ತಡಕ್ಕೆ ಸಿಲುಕಿ ಕೆಲಸ ಮಾಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಬೇಡಿಕೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಬಿಎಂಟಿಸಿ ಹಾಗೂ ವಾಯವ್ಯ ನಿಗಮಗಳ ನೌಕರರಿಗೆ ಪಾವತಿಸಬೇಕಿರುವ ಎಲ್ಲ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. ವೈದ್ಯಕೀಯ ವೆಚ್ಚಗಳ ಮರುಪಾವತಿ ಹಣವನ್ನು ಕೂಡಲೇ ನೀಡಬೇಕು. ಐಡಿ ಸಂಖ್ಯೆ 148/2005 ತೀರ್ಪನ್ನು ಫೆಡರೇಷನ್ ಜತೆ ಚರ್ಚಿಸಿದ ಬಳಿಕ ಜಾರಿಗೊಳಿಸಬೇಕು. ಸಿಬ್ಬಂದಿಯ ಅನುಪಾತ ಹೆಚ್ಚಿಸಿ ಕಾರ್ಮಿಕರ ಮೇಲಿನ ಹೊರೆ ಕಡಿಮೆ ಮಾಡಬೇಕು. ಹಣ ಪಡೆದಿಲ್ಲ, ಟಿಕೆಟ್ ನೀಡಿಲ್ಲ ಅಥವಾ ಪ್ರಯಾಣಿಕರೇ ಟಿಕೆಟ್ ಕಳೆದುಕೊಂಡಿರುವ ಪ್ರಕರಣಗಳಲ್ಲಿ ನಿರ್ವಾಹಕರನ್ನು ಶಿಕ್ಷೆಗೆ ಗುರಿಪಡಿಸುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳಿಗೆ ಶಾಶ್ವತ ಮೋಟರ್ ವಾಹನ ತೆರಿಗೆ ವಿನಾಯಿತಿ ಕೊಡುವುದು ಹಾಗೂ ಸೆಸ್ ರಹಿತ ಡೀಸೆಲ್ ನೀಡಲು ಅವಶ್ಯ ಕ್ರಮ ಜರುಗಿಸಬೇಕು. ಸಾರಿಗೆ ನಿಗಮಗಳು ಸಾಮಾಜಿಕ ಹೊಣೆಗಾರಿಕೆಯಡಿ ಖರ್ಚು ಮಾಡುತ್ತಿರುವ ಸಂಪೂರ್ಣ ಹಣವನ್ನು ಸರ್ಕಾರಗಳು ಮರುಪಾವತಿ ಮಾಡಬೇಕು. ಈಶಾನ್ಯ ಸಾರಿಗೆ ನಿಗಮಕ್ಕೆ ಪೂರ್ಣಕಾಲದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕು. ಕಾರ್ಮಿಕ ಸಂಘದ ಮಾನ್ಯತೆಗಾಗಿ 1991 ರ ನಿಯಮದಂತೆ ಚುನಾವಣೆ ನಡೆಸಬೇಕು. ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಮಹ್ಮದ್ ಫೈಜರ್‌ರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಕೋರಿದರು.

ಯೂನಿಯನ್ ಉಪಾಧ್ಯಕ್ಷ ಪೀಟರ್ ಆಂಥೋನಿ, ಮುಖ್ಯ ಉಪಾಧ್ಯಕ್ಷ ಎಸ್.ಎಂ.ಪೀರನ್, ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಗುರುರಾಜ್ ಕೆ. ಗುರುನಾಥ ರೆಡ್ಡಿ, ಬಸವರಾಜ್, ತಾಯಣ್ಣ ಧರಣಿಯ ನೇತೃತ್ವ ವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !