ರಾಯಚೂರು: ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಮೂಲಕ ಖಾಸಗೀಕರಣಕ್ಕೆ ಹುನ್ನಾರ ನಡೆಸಿರುವ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ನೂರಾರು ರೈತರು ಬುಧವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣ, ನಗರಸಭೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ರ‍್ಯಾಲಿ ನಡೆಸಲಾಯಿತು. ರೈತ ಮುಖಂಡರು, ರೈತರು ಹಸಿರು ಧ್ವಜ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಪಡಿಸುವುದಾಗಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಭರವಸೆ ನೀಡಿತ್ತು. ಒಂದು ವರ್ಷ ಕಳೆದರೂ ಹಿಂಪಡೆದಿಲ್ಲ. ಈಗ ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುತ್ತಿದ್ದು, ಪ್ರತ್ಯೇಕ ಮೀಟರ್ ಅಳವಡಿಕೆಗೆ ಮುಂದಾಗಿದೆ. ಇದರಿಂದ ಮೊದಲೇ ಸಂಕಷ್ಟದಲ್ಲಿರುವ ರೈತಾಪಿ ವರ್ಗ ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಲಿದೆ. ಸರ್ಕಾರ ತನ್ನ ನಿರ್ಧಾರ ಕೈ ಬಿಡಬೇಕು. ಇಲ್ಲವಾದರೆ ಹೋರಾಟ ಮುಂದುವರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ, ಹಳ್ಳಿ ಎಂಬ ತಾರತಮ್ಯ ಇಲ್ಲದೇ ಎಲ್ಲರಿಗೂ ಸರಿಯಾಗಿ ವಿದ್ಯುತ್ ನೀಡಬೇಕು. ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡದ ಕಾರಣಕ್ಕೆ ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು ಸುಟ್ಟು ಹೋಗಿವೆ. ಸುಮಾರು ₹2,400 ಕೋಟಿ ಹಣ ದುರಸ್ತಿಗಾಗಿಯೇ ರೈತರು ವಿನಿಯೋಗಿಸುವಂತಾಗಿದೆ. ಫಸಲು ನಷ್ಟ ಅಂದಾಜಿಸಿ ಬೆಳೆಗಳ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿಗೆ ಸಂಬಂಧಿಸಿದ ವಿದ್ಯುತ್ ಪರಿವರ್ತಕಗಳು ಸುಟ್ಟಲ್ಲಿ 24 ಗಂಟೆಯೊಳಗೆ ದುರಸ್ತಿ ಮಾಡಿಸಬೇಕು. ರೈತರ ಜಮೀನುಗಳಿಗೆ ಹೋಗುವ ಮಾರ್ಗದಲ್ಲಿ ಜೋತು ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು. ವಿದ್ಯುತ್ ಸಂಪರ್ಕವೇ ಕಾಣದ ದೊಡ್ಡಿ, ತಾಂಡಾ, ಹಳ್ಳಿಗಳಿಗೆ ಕೂಡಲೇ ಸಂಪರ್ಕ ಕಲ್ಪಿಸಬೇಕು. ವಿದ್ಯುತ್ ವಿಚಾರದಲ್ಲಿ ರೈತರನ್ನು ಅನಗತ್ಯವಾಗಿ ಅಲೆಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಬಸನಗೌಡ ಹಿರೇಹೆಸರೂರು, ಗೌರವಾಧ್ಯಕ್ಷ ಕುಪ್ಪಣ್ಣ ಮಾಲೀಕ್, ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಪ್ಪ ಗೌಡ ನಂದಿಹಾಳ, ತಾಯಪ್ಪ ಮಸ್ಕಿ, ಶರಣರೆಡ್ಡಿ ಹಳ್ಳಿ, ಬಸವರಾಜ ಕುಂಬಾರ, ಹನುಮಗೌಡ ಹಾಗೂ ಮಹಾಂತಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.