ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಮಾಡಿವವರು ದೇಶದ್ರೋಹಿಗಳಾ?: ವಿದ್ಯಾರ್ಥಿ ಸಮ್ಮೇಳನದಲ್ಲಿ ವೈದ್ಯ ಜಯಪ್ರಕಾಶ

Last Updated 20 ಸೆಪ್ಟೆಂಬರ್ 2019, 12:42 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರವನ್ನು ಪ್ರಶ್ನೆ ಮಾಡುವವರನ್ನೆಲ್ಲ ದೇಶದ್ರೋಹಿಗಳು ಎನ್ನುತ್ತಿರುವುದು ಸರಿಯೇ ಎಂದು ವೈದ್ಯ ಜಯಪ್ರಕಾಶ ಬೆಟ್ಟದೂರು ಪ್ರಶ್ನಿಸಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್ ಆರ್ಗನೈಜೇಷನ್‌ನಿಂದ (ಎಐಡಿಎಸ್‌ಒ) ಶುಕ್ರವಾರ ಆಯೋಜಿಸಿದ್ದ 4ನೇ ಜಿಲ್ಲಾಮಟ್ಟದ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸರ್ಕಾರವನ್ನು ಪ್ರಶ್ನೆ ಮಾಡಿದ ಮಾತ್ರಕ್ಕೆ ದೇಶದ್ರೋಹಿಗಳೆಂದು ಬಿಂಬಿಸುವ ತಂತ್ರ ಮಾಡಲಾಗುತ್ತಿದೆ. ಸರ್ಕಾರವನ್ನು ಪ್ರಶ್ನೆ ಮಾಡುವುದು ದೇಶದ್ರೋಹದ ಕೆಲಸವಾದರೆ, ಅನ್ಯಾಯದ ವಿರುದ್ಧ ಹೋರಾಟದ ಮನೋಭಾವ ಬಿಡಬಾರದು ಎಂದು ತಿಳಿಸಿದರು.

ಹೋರಾಟದಿಂದ ಎಲ್ಲ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ಸುತ್ತಮುತ್ತಲಿನ ಜನರಿಗೆ ಆಗುವ ಅನ್ಯಾಯವನ್ನು ತಡೆಯುವ ಸಲುವಾಗಿಯಾದರೂ ಧ್ವನಿಯೆತ್ತಬೇಕು. ದೇಶದಲ್ಲಿ ಸಂವಿಧಾನ ತಿರುಚುವ ಕೆಲಸ ನಡೆದಿದ್ದು, ಅಸಮಾನತೆಯನ್ನು ಸರಿದೂಗಿಸಲು ಸಮಾನತೆಗಾಗಿ ಹೋರಾಡಬೇಕು ಎಂದರು.

ಜಗತ್ತಿನ ಯಾವ ದೇಶದಲ್ಲೂ ಸಮಾನತೆ ಮತ್ತು ಸಮಾನ ಅವಕಾಶಗಳು ಇಲ್ಲ. ಯಾರೂ ಕೂಡ ಅರ್ಹತೆಯಿದೆ ಎಂದು ಕರೆದು ಅವಕಾಶ ನೀಡುವುದಿಲ್ಲ. ಆದ್ದರಿಂದ ಅವಕಾಶವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಪ್ರಚಲಿತ ವಿದ್ಯಾಮಾನ ಜ್ಞಾನ ಸಂಪಾದಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಷಯಗಳ ಸತ್ಯಾಸತ್ಯತೆ ಅರಿತುಕೊಳ್ಳಬೇಕು ಎಂದು ನುಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬಹಳಷ್ಟು ಕಷ್ಟಪಟ್ಟು ಅಧ್ಯಯನ ಮಾಡಿ, ದೇಶದ ಸಂವಿಧಾನ ರಚನೆ ಮಾಡುವ ಮಟ್ಟಕ್ಕೆ ಬೆಳೆದರು. ಅವರಂತೆ ನಾವೆಲ್ಲರೂ ಶ್ರಮದಿಂದ ಮೇಲೆ ಬರಬೇಕು ಎಂದರು.

ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯ ಎಚ್‌.ವಿ.ದಿವಾಕರ ಮಾತನಾಡಿ, ಪೊಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಐದು ವರ್ಷ ಆಡಳಿತ ನಡೆಸಿದರೂ, ಯಾವುದೇ ಭರವಸೆ ಈಡೇರಿಸಿಲ್ಲ. ಆದರೆ, ಯುವಕರು ಕುರುಡಾಗಿ ಮೋದಿ ಬಗ್ಗೆ ಪ್ರಶಂಸೆ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿದೇಶದಲ್ಲಿನ ಕಪ್ಪು ಹಣವನ್ನು ವಾಪಸ್ ತಂದು ಜನರ ಖಾತೆಗೆ ಹಾಕಿಲ್ಲ. ರೈತರಿಗೆ ಬೆಂಬಲ ಬೆಲೆ ದೊರಕಿಸಿಲ್ಲ. ಉದ್ಯೋಗ ಸೃಷ್ಟಿಯೂ ಮಾಡಲಿಲ್ಲ. ಆದರೆ, ಕೇವಲ ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡಬೇಕು ಎಂದರು.

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ರೈತರು ಹಾಗೂ ಕಾರ್ಮಿಕರು ದಿವಾಳಿಯಾಗುತ್ತಿದ್ದಾರೆ. ಕೆಲವೇ ಜನರು ಉದ್ಧಾರವಾಗುತ್ತಿದ್ದಾರೆ. ಬಂಡವಾಳ ಶಾಹಿಗಳನ್ನು ದೇಶದಿಂದ ತೊಲಗಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ ಕಾಮತ್, ಜಿಲ್ಲಾ ಅಧ್ಯಕ್ಷ ಮಹೇಶ ಚೀಕಲಪರ್ವಿ, ಕಾರ್ಯದರ್ಶಿ ಜಿ.ಪ್ರಮೋದ ಕುಮಾರ, ಚಂದ್ರಗಿರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT