ರಾಯಚೂರು ಕೃಷಿ ವಿವಿ 9ನೇ ಘಟಿಕೋತ್ಸವ ನಾಳೆ

ಮಂಗಳವಾರ, ಜೂಲೈ 16, 2019
25 °C

ರಾಯಚೂರು ಕೃಷಿ ವಿವಿ 9ನೇ ಘಟಿಕೋತ್ಸವ ನಾಳೆ

Published:
Updated:
Prajavani

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಜೂನ್ 26ರಂದು ಬೆಳಿಗ್ಗೆ 11ಗಂಟೆಗೆ ನಡೆಯಲಿದ್ದು, 24 ವಿದ್ಯಾರ್ಥಿಗಳಿಗೆ ಡಾಕ್ಟರೇಟ್, 164 ಸ್ನಾತಕೋತ್ತರ ಹಾಗೂ 270 ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಡಾ. ಕೆ.ಎನ್.ಕಟ್ಟಿಮನಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾಕ್ಟರೇಟ್‌ ಪದವಿಯಲ್ಲಿ 5, ಸ್ನಾತಕೋತ್ತರದಲ್ಲಿ 16 ಹಾಗೂ ಸ್ನಾತಕ ಪದವಿಯಲ್ಲಿ 19 ಚಿನ್ನದ ಪದಕಗಳು ಪ್ರದಾನ ಮಾಡಲಾಗುತ್ತದೆ ಎಂದರು.

ರಾಷ್ಟ್ರೀಯ ಮಳೆಯಾಶ್ರಿತ ಕ್ಷೇತ್ರ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ದಳವಾಯಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಭಾಗವಹಿಸಲಿದ್ದಾರೆ. ದೇಶದ 900 ವಿಶ್ವವಿದ್ಯಾಲಯಗಳಲ್ಲಿ ರಾಯಚೂರು ಕೃಷಿ ವಿವಿಗೆ 28ನೇ ಸ್ಥಾನ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

2017–18ನೇ ಸಾಲಿನಲ್ಲಿ ಸ್ನಾತಕ ಪದವಿಗೆ 1206, ಸ್ನಾತಕೋತ್ತರ ಪದವಿಗೆ 448, ಡಿಪ್ಲೋಮಾಗೆ 246 ಅಭ್ಯಾಸ ಮಾಡುತ್ತಿದ್ದಾರೆ. ಪಿಎಚ್‌ಡಿಗೆ 39 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ರಾಷ್ಟ್ರೀಯ ಮಟ್ಟದ ಶಿಷ್ಯ ವೇತನವನ್ನು ವಿವಿಯ ವಿದ್ಯಾರ್ಥಿಗಳು ಪಡೆದಿದ್ದಾರೆ. 11 ಆವರಣ ಸಂದರ್ಶನದಲ್ಲಿ 120 ವಿದ್ಯಾರ್ಥಿಗಳು ನೇಮಕಾತಿ ಹೊಂದಿದ್ದಾರೆ ಎಂದರು.

ಅತ್ಯುತ್ತಮ ಬೀಜ: ಹಿಂಗಾರು ಜೋಳ ಜಿಎಸ್‌–23, ಮೆಕ್ಕೆಜೋಳ ಆರ್‌ಸಿಆರ್‌ಎಂಎಚ್‌–2, ನವಣೆ ಎಚ್‌ಎನ್‌–46 ತಳಿಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ನೀಡಲಾಗಿದೆ. ಶೇಂಗಾ ಕೆಡಿಜಿ–128 ತಳಿ ಅಳವಡಿಕೆ ಮಾಡಿಕೊಳ್ಳಲಾಗಿದೆ. ಬೆಳೆ ಉತ್ಪಾದನೆಯಲ್ಲಿ 8 ಮತ್ತು ಸಂರಕ್ಷಣೆಯಲ್ಲಿ 12 ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. 22,516 ಕ್ವಿಂಟಲ್ ಬೀಜ ಉತ್ಪಾದಿಸಿ ಬೀಜ ಘಟಕ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಬೀಜ ಉತ್ಪಾದನೆ ಘಟಕವೆಂದು ಪರಿಗಣಿತವಾಗಿದೆ ಎಂದು ತಿಳಿಸಿದರು.

ರೈತರ ಪ್ರಶ್ನೆಗಳಿಗೆ ಶುಲ್ಕ ರಹಿತ ಸಹಾಯವಾಣಿ ಆರಂಭಿಸಲು ಯೋಚಿಸಲಾಗಿದೆ. ರೈತರ ಅನುಕೂಲಕ್ಕಾಗಿ ಪ್ರತ್ಯೇಕ ರೈತರ ಜಾಲತಾಣ ಅಭಿವೃದ್ಧಿ ಪಡಿಸಲಾಗುತ್ತದೆ. ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಸ್ವಚ್ಛ ಹಸಿರು ಮತ್ತು ರೈತರ ವಿಶ್ವವಿದ್ಯಾಲಯವಾಗಿ ರೂಪಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಿರ್ದೇಶಕರಾದ ಎಸ್.ಕೆ.ಮೇಟಿ, ಚಂದರಗಿ, ಎಂ.ಜಿ.ಪಾಟೀಲ, ಚಿತಾಪುರ, ಪ್ರಮೋದ ಕಟ್ಟಿ, ಶಂಕರೇಗೌಡ, ವೀರನಗೌಡ, ಭೀಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !