ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಕಾಯುವುದಕ್ಕೆ ಆದ್ಯತೆ: ಶಾಸಕ ಕೆ.ಶಿವನಗೌಡ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಿಂಗಾರು ಬೀಜ ದಿನೋತ್ಸವ
Last Updated 26 ಸೆಪ್ಟೆಂಬರ್ 2022, 12:58 IST
ಅಕ್ಷರ ಗಾತ್ರ

ರಾಯಚೂರು: ‘ಸರ್ಕಾರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಜನಪ್ರತಿನಿಧಿಗಳೆಲ್ಲರ ಮೊದಲ ಆದ್ಯತೆಯು ರೈತರ ಹಿತ ಕಾಪಾಡುವುದೇ ಆಗಿದೆ‘ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ವ್ಯವಸ್ಥಾಪನಾ ಮಂಡಳಿ ಸದಸ್ಯ ಹಾಗೂ ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕ ಮತ್ತು ಐಸಿಎಆರ್‌–ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ಏರ್ಪಡಿಸಿದ್ದ ಹಿಂಗಾರು ಬೀಜ ದಿನೋತ್ಸವ–2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ಹತ್ತಾರು ಪ್ರಶ್ನೆಗಳನ್ನು ಕೇಳಿದರೂ ಅವರಿಗೆ ಸಮರ್ಪಕ ಉತ್ತರ ನೀಡುವ ಮಾನಸಿಕತೆಯನ್ನು‌ ಕೃಷಿ ವಿಜ್ಞಾನಿಗಳು ಬೆಳೆಸಿಕೊಳ್ಳಬೇಕು. ರೈತರು ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವ ಅವಕಾಶ ನೀಡಬೇಕು. ಬೀಜ ಉತ್ಪಾದಕರಿಗೆ ಮತ್ತು ಬಿತ್ತನೆಬೀಜ ಖರೀದಿಸುವ ರೈತರಿಗೆ ವೈಜ್ಞಾನಿಕ ವಿಷಯಗಳನ್ನು ಮೇಲಿಂದ ಮೇಲೆ ಮನವರಿಕೆ ಮಾಡಬೇಕು ಎಂದು ಹೇಳಿದರು.

ಬೀಜ ಉತ್ಪಾದಕರ ಸಭೆ ಮಾಡಬೇಕು ಎನ್ನುವುದು ರೈತರು ಕೇಳುತ್ತಿರುವುದು ಜ್ವಲಂತವಾಗಿದೆ. ಬೀಜಗಳನ್ನು ಉತ್ಪಾದಿಸಿದ ಬಳಿಕ ಬೀಜಗಳ ಪರೀಕ್ಷೆ ವಿಳಂಬ ಮಾಡುತ್ತಿರುವುದು ಸರಿಯಲ್ಲ.‌ ಬೀಜಗಳ ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಸಂದರ್ಭದಲ್ಲಿ ಬೀಜ ಉತ್ಪಾದಕ ರೈತರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಕಾರ್ಯಕ್ರಮ ಉದ್ಘಾಟನೆ ನೆರವೇರಿದ ಕೂಡಲೇ ಶಾಸಕರ ಎದುರು ಅಹವಾಲುಗಳನ್ನು ಹೇಳಿಕೊಳ್ಳಲಾರಂಭಿಸಿದರು.

ಅಮೀನಗಡ ಗ್ರಾಮದ ರೈತ ಮಾತನಾಡಿ, ‘ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಿಂದ ಗ್ರಾಮದ ಅನೇಕ ರೈತರು ಸೂರ್ಯಕಾಂತಿ ಬೀಜಗಳನ್ನು ಖರೀದಿಸಿದ್ದೇವೆ. ಎಕರೆಗೆ ಕನಿಷ್ಠ ಒಂದು ಚೀಲ ಕೂಡಾ ಬಂದಿಲ್ಲ. ನಂಬಿಕೆಯಿಂದ ಬೀಜ ಖರೀದಿಸಿದ್ದೇವು. ನಮಗೆ ಮೋಸ ಅಗಿದೆ. ಕಂಪೆನಿ ಬೀಜವಾಗಿದ್ದರೆ ಪ‍ರಿಹಾರ ಕೇಳುತ್ತಿದ್ದೇವು. ಇದಕ್ಕೆ ವಿಶ್ವವಿದ್ಯಾಲಯದಿಂದ ಪರಿಹಾರ ಕೊಡಬೇಕು‘ ಎಂದರು.

ಇದಕ್ಕೆ ಉತ್ತರ ನೀಡಿದ ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯದಿಂದ ಸೂರ್ಯಕಾಂತಿ ಎರಡು ತಳಿಗಳನ್ನು ಅಭಿವೃದ್ಧಿ ಮಾಡಿದ್ದೇವು. ಅಮೀನಗಡ ಗ್ರಾಮವೂ ಸೇರಿದಂತೆ ಅನೇಕ ರೈತರಿಗೆ ಸೂರ್ಯಕಾಂತಿ ಬೀಜಗಳನ್ನು ಹಂಚಲಾಗಿದೆ. 63 ರಿಂದ 68 ನೇ ದಿನದಲ್ಲಿ ಸೂರ್ಯಕಾಂತಿಗೆ ಸುಂಕ‌ ಬರುತ್ತದೆ. ಇದೇ‌‌ ಅವಧಿಯಲ್ಲಿ ಅಮೀನಗಡದಲ್ಲಿ ಮೂರು ದಿನಗಳವರೆಗೂ ಸರಾಸರಿ 105 ಮಿಮೀ ಮಳೆಯಾಗಿದೆ. ಸುಂಕ ಕಟ್ಟುವ ಸಮಯದಲ್ಲಿ ಮಳೆಯಾಗಿದ್ದರಿಂದ ಸುಂಕ‌ ಉದುರಿ ಜೊಳ್ಳು ಒಡೆದಿದೆ.

ಸುಮಾರು 25 ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬೇರೆ ಭಾಗಗಳಲ್ಲಿ ಈ ಸಮಸ್ಯೆಯಾಗಿಲ್ಲ. ಯಾವುದೇ ಹೈಬ್ರಿಡ್ ಬೀಜಗಳ ಬಿತ್ತನೆ ಮಾಡಿದರೂ ಸುಂಕ ಕಟ್ಟಿದ ಸಮಯದಲ್ಲಿ ಅತೀಯಾದ ಮಳೆಯಾದರೆ, ಇಳುವರಿ ಬರುವುದಿಲ್ಲ ಎಂದರು.

ರಾಂಪೂರದ ರೈತ ರಾಜಶೇಖರ ಮಾತನಾಡಿ, ಬೀಜ ಉತ್ಪಾದಕ ರೈತರು ಬೆಳೆದ ಉತ್ಪನ್ನವನ್ನೆಲ್ಲ ಖರೀದಿಸುತ್ತಿಲ್ಲ. ಒಂದು ಕ್ವಿಂಟಲ್‌ಗೆ ಒಂದು ಕೆಜಿ ಹೆಚ್ಚುವರಿ ಪಡೆಯುತ್ತಿದ್ದಾರೆ. 100 ಕೆಜಿಗೆ 20ಕೆಜಿ ಗುಣಮಟ್ಟ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ. ಬೀಜ ಉತ್ಪಾದಕ ರೈತರ ಸಭೆಗಳನ್ನು ಮಾಡುತ್ತಿಲ್ಲ ಎಂದು ದೂರಿದರು.

ಕೃಷಿ ವಿಜ್ಞಾನಿಗಳು ಇದಕ್ಕೆ ಉತ್ತರಿಸಿ, ಬೀಜಗಳನ್ನು ಸಂಸ್ಕರಣೆ ಮಾಡುವಾಗ ಗುಣಮಟ್ಟ ಇರುವುದನ್ನು ಮಾತ್ರ ಯಾಂತ್ರಿಕವಾಗಿಯೇ ಆಯ್ಕೆ ಮಾಡಲಾಗುತ್ತದೆ. ಇನ್ನುಳಿದ ಬೀಜಗಳನ್ನು ರೈತರು ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿದೆ. ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಮಾಡುವಾಗ ಸಂಬಂಧಿಸಿದ ರೈತರಿಗೆ ಮೊದಲೇ ತಿಳಿಸಿದರೂ ಹಾಜರಾಗುತ್ತಿಲ್ಲ. ಕ್ವಿಂಟಲ್‌ ಚೀಲದಿಂದ ಸಣ್ಣ ಸಣ್ಣ ಪೊಟ್ಟಣಗಳಾಗಿ ಮಾರ್ಪಡಿಸುವಾಗ ಸ್ವಲ್ಪ ವ್ಯತ್ಯಾಸ ಬರುವುದು ಸಹಜ. ಇದನ್ನು ರೈತರು ಖುದ್ದಾಗಿ ಹಾಜರಾಗಿ ಖಾತರಿಪಡಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಕೊಟ್ರೆಶಪ್ಪ‌ ಬಿ. ಕೋರಿ ಮಾತನಾಡಿದರು.

ಪ್ರಾಸ್ತಾವಿಕ ಡಾ.ಅರುಣಕುಮಾರ ಹೊಸಮನಿ ಮಾತನಾಡಿ, ಎಲ್ಲರಿಗೂ ಗುಣಮಟ್ಟದ ಬೀಜಗಳನ್ನು ಒದಗಿಸುವ ಕೆಲಸವನ್ನು ಕೃಷಿ ವಿಶ್ವವಿದ್ಯಾಲಯ ಮಾಡುತ್ತಿದೆ.

ಬೀಜೋತ್ಪಾದನೆ ವಿಭಾಗದಿಂದ ಬೀಜ ಪಡೆದು ಅತಿಹೆಚ್ಚು ಇಳುವರಿ ಪಡೆಯುವ ರೈತರನ್ನು ಸನ್ಮಾನಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಈ ವರ್ಷ ಸಿರಿಧಾನ್ಯದ ನಾಲ್ಕು ತಳಿಗಳನ್ನು ಅಭಿವೃದ್ಧಿ ‌ಮಾಡಿದ್ದು, ಈ ಬೀಜಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ‌ ವಿತರಿಸುವ ಗುರಿ ಹೊಂದಲಾಗಿದೆ.

ರಾಂಪೂರದ ರೈತ ಸಿದ್ದರಾಮೇಶ್ವರ ಎಕರೆಗೆ 8.5 ಎಕರೆ ಕಡಲೆ ಇಳುವರಿ ತೆಗೆದಿದ್ದಾರೆ. ಸುಧಾರಿತ ಕಡಲೆ ಬಿತ್ತಿದ್ದರು.

ಮಣ್ಣು ವಿಜ್ಞಾನಿ ಡಾ.ಎಸ್.ಎನ್.ಭಟ್, ಕೃಷಿ ವಿಜ್ಞಾನಿಗಳಾದ ಡಾ. ಜಯಪ್ರಕಾಶ್ ನಿಡಗುಂದಿ, ಡಾ.ಅಜಯಕುಮಾರ್ ಎಂ.ವೈ. ವಿಶೇಷ ಉಪನ್ಯಾಸ ನೀಡಿದರು.

ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಧಾ ಮಂಡಲಗಿರಿ, ಗುರುಬಸಯ್ಯ, ಸಂಶೋಧನಾ ಉಪನಿರ್ದೇಶಕ ಡಾ.ಅಶೋಕ ಹೂಗಾರ, ನಿಂಗಪ್ಪ, ಪ್ರಭು, ಸುನೀಲಕುಮಾರ್ ವರ್ಮಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT