ಏಮ್ಸ್ ಬೇಡಿಕೆ; ಶೀಘ್ರದಲ್ಲೇ ಶುಭ ಸುದ್ದಿ: ಸಚಿವ

ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ತಿಳಿಸಿದರು.
ನಗರದ ಜಿಲ್ಲಾ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಏಮ್ಸ್ ಮಂಜೂರಾತಿಗೆ ಒತ್ತಾಯಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಇದೆ. ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವ ಕಾರಣ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಮನವರಿಕೆಯಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರೂ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಶೀಘ್ರವೇ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಶುಭ ಸುದ್ದಿ ಬರಲಿದೆ. ಧಾರವಾಡಕ್ಕೆ ಏಮ್ಸ್ ಮಂಜೂರಾಗುತ್ತಿದೆ ಎನ್ನುವುದು ಸುಳ್ಳು. ಹೋರಾಟಗಾರರು ರಾಜ್ಯ ಸರ್ಕಾರದ ಮೇಲೆ ಭರವಸೆ ಇಡಬೇಕು ಹಾಗೂ ತಾಳ್ಮೆಯಿಂದ ಇರಬೇಕು. ಹೋರಾಟಗಾರರು ಉಪವಾಸ ಸತ್ಯಾಗ್ರಹ ಕೈಬಿಟ್ಟು ಧರಣಿ ಮುಂದುವರೆಸಿ ಎಂದು ಮನವಿ ಮಾಡಿದರು.
ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಬಸವರಾಜ ಕಳಸ ಮಾತನಾಡಿ, ಏಮ್ಸ್ ಮಂಜೂರು ಮಾಡುವಂತೆ 259 ದಿನಗಳಿಂದ ಧರಣಿ ಹಾಗೂ ವಿವಿಧ ಹಂತಗಳ ಹೋರಾಟ ನಡೆದರೂ ರಾಜ್ಯ ಸರ್ಕಾರದಿಂದ ಕೇವಲ ಭರವಸೆ ಸಿಕ್ಕಿದೆ ಹೊರತು ನಿರ್ಧಾರ ಪ್ರಕಟವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡಿದಾಗ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಭರವಸೆ ನೀಡಿದರೂ ಆನಂತರ ಅಧಿವೇಶನದಲ್ಲಿ ಕಾನೂನು ಸಚಿವ ಮಾದುಸ್ವಾಮಿ ಅವರು ಧಾರವಾಡಕ್ಕೆ ಏಮ್ಸ್ ನೀಡಿ ಏಮ್ಸ್ ಮಾದರಿಯ ಸಂಸ್ಥೆ ನಿಡಲಾಗುವುದು ಎಂದು ಹೇಳಿದ್ದು ಖಂಡನೀಯ. ನಮಗೆ ಏಮ್ಸ್ ಮಾದರಿ ಬೇಡ, ಏಮ್ಸ್ ಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೊಂದಲಕ್ಕೆ ತೆರೆ ಎಳೆದು ಕೇಂದ್ರ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ಏಕೈಕ ಹೆಸರು ಶಿಫಾರಸ್ಸು ಮಾಡಬೇಕು. ಶೀಘ್ರವೇ ತಮ್ಮ ನಿರ್ಧಾರ ಪ್ರಕಟಿಸಬೇಕು. ಸಚಿವರು ಬಜೆಟ್ ಅಧಿವೇಶನದ ಪೂರ್ವದಲ್ಲಿ ಕೇಂದ್ರ ಸರ್ಕಾರಕ್ಕೆ ನಿಯೋಗದಿಂದ ಭೇಟಿ ಮಾಡಿಸಬೇಕು ಎಂದು ಮನವಿ ಮಾಡಿದರು.
ಧರಣಿ ಸ್ಥಳಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಭೇಟಿ ನೀಡಿ ಮಾತನಾಡಿ, ರಾಯಚೂರಿನಲ್ಲಿಯೇ ಈ ಹಿಂದೆ ಐಐಟಿ ಸ್ಥಾಪನೆ ಆಗಬೇಕಾಗಿತ್ತು, ಕಾರಣಾಂತರಗಳಿಂದ ಅದು ಆಗಲಿಲ್ಲ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಹೇಳಿದರು .
ಶಾಸಕ ಡಾ. ಶಿವರಾಜ ಪಾಟೀಲ, ಡಾ. ಬಸವರಾಜ್ ಕಳಸ, ಬಶೀರ್ ಅಹಮದ್ ಹೊಸಮನಿ, ಗುರುರಾಜ ಕುಲಕರ್ಣಿ, ಬಸವರಾಜ ಮಿಮಿಕ್ರಿ, ವೀರೇಶ್ ಬಾಬು, ರಮೇಶ ಕಲ್ಲೂರಕರ್, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ನೀಲಕಂಠಪ್ಪ, ಆಂಜನೇಯ ಜಾಲಿಬೆಂಚಿ, ವೆಂಕಟರೆಡ್ಡಿ ದಿನ್ನಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ಜಾನ್ ವೆಸ್ಲಿ, ನರಸಪ್ಪ ಬಾಡಿಯಾಲ, ಮುನಿರಾ ಬೇಗಂ ಹನುಮಾಪುರ್, ಹುಲಿಗೆಪ್ಪ ಜಗಲಿ, ಜೆ .ಆನಂದ ಪಾಟೀಲ, ವಿನಯ್ ಕುಮಾರ್ ಚಿತ್ರಗಾರ, ಶಿವಕುಮಾರ ಮ್ಯಾಗಳಮನಿ, ಮಲ್ಲಿಕಾರ್ಜುನ ರೆಡ್ಡಿ, ಸಲ್ಮಾ ,ಆಯಿಶಾ, ಎಂ.ಆರ್ ಬೇರಿ, ಶ್ರೀನಿವಾಸ ಕಲವಲದೊಡ್ಡಿ , ಸಾದೀಖ್ ಖಾನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.