ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಭೂಮಿ ಪೂಜೆಗೆ ಸಿದ್ಧತೆ

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿ ಪೂರ್ಣ
Last Updated 9 ಏಪ್ರಿಲ್ 2022, 13:07 IST
ಅಕ್ಷರ ಗಾತ್ರ

ರಾಯಚೂರು: ದಶಕಗಳಿಂದ ನನೆಗುದಿಗೆ ಬಿದ್ದಿರುವ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣದ ಕನಸು ನನಸಾಗುವ ಹಂತ ತಲುಪಿದ್ದು, ಬರುವ ಏಪ್ರಿಲ್‌ 26 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಅಧಿಕೃತವಾಗಿ ಮುಖ್ಯಮಂತ್ರಿ ಪ್ರವಾಸದ ವೇಳಾಪಟ್ಟಿ ಬರಬೇಕಿದೆ. ಜಿಲ್ಲಾಡಳಿತ ಮತ್ತು ಆಡಳಿತಾರೂಢ ಪಕ್ಷದ ಶಾಸಕರು ಈಗಾಗಲೇ ಕಾರ್ಯಕ್ರಮದ ಪೂರ್ವಸಿದ್ಧತೆ ಆರಂಭಿಸಿದ್ದು, ಅಂದುಕೊಂಡಂತಾದರೆ ಪೂರ್ಣವಾಗಿರುವ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಕೆಲವು ಪ್ರಮುಖ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ರಾಯಚೂರು ವಿಮಾನ ನಿಲ್ದಾಣವನ್ನು ಜಿಲ್ಲಾ ಖನಿಜ ನಿಧಿ (ಡಿಎಂಎಫ್‌) ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ನಿರ್ಮಿಸುವ ಬಗ್ಗೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆಯೆ ನೂತನ ಹಣಕಾಸು ವರ್ಷ ಆರಂಭವಾಗುತ್ತಿದ್ದಂತೆ ಭೂಮಿಪೂಜೆಗೆ ಸಿದ್ಧತೆ ಮಾಡಿರುವುದು ವಿಶೇಷ.

2021 ಮಾರ್ಚ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರ (ಎಎಐ) ಅಧಿಕಾರಿಗಳು ಕರ್ನಾಟಕ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಕೋರಿಕೆ ಆಧರಿಸಿ ರಾಯಚೂರಿಗೆ ಬಂದು ಪರಿಶೀಲನೆ ಮಾಡಿಕೊಂಡು ಹೋಗಿತ್ತು. ಎಎಐನಿಂದ ತಾಂತ್ರಿಕ ಒಪ್ಪಿಗೆ ಸಿಗುತ್ತಿದಂತೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಡಿಪಿಆರ್‌ ಸಿದ್ಧಪಡಿಸುವುದಕ್ಕೆ ಟೆಂಡರ್‌ ವಹಿಸಲಾಗಿತ್ತು. ಒಂದು ವರ್ಷಾವಧಿಯಲ್ಲಿ ಡಿಪಿಆರ್‌ ಸಿದ್ಧವಾಗಿದೆ.

ಈ ಯೋಜನೆ ಜಾರಿಗಾಗಿ ₹186 ಕೋಟಿ ಮೀಸಲಿಡಲಾಗಿದೆ. ಯರಮರಸ್‌ ಬಳಿ ಮೀಸಲಾಗಿರುವ 402 ಎಕರೆ ವಿಸ್ತಾರದಲ್ಲಿ ಏರ್‌ಸ್ಟ್ರೀಪ್‌ ನಿರ್ಮಿಸಲಾಗುತ್ತಿದೆ. ಡಿಪಿಆರ್‌ ಸಿದ್ಧತೆ ಆರಂಭಿಸಿದ ಬಳಿಕ ವಿಮಾನ ನಿಲ್ದಾಣದ ಭೂ ಗಡಿಗಳನ್ನು ಗುರುತಿಸುವ ಕಾರ್ಯ ಕೈಗೊಳ್ಳಲಾಗಿತ್ತು.

ಗರಿಷ್ಠ 80 ಜನರು ಪ್ರಯಾಣಿಸಲು ಸಾಧ್ಯವಾಗುವ ಎಟಿಆರ್‌–72 ವಿಮಾನಗಳ ಹಾರಾಟ ಸಾಧ್ಯವಾಗುವ ವಿಮಾನ ನಿಲ್ದಾಣ ಇದಾಗಲಿದ್ದು, ಇದಕ್ಕಾಗಿ 1.8 ಕಿಮೀ ಉದ್ದದ ರನ್‌ವೇ ನಿರ್ಮಿಸಲಾಗುತ್ತದೆ ಎಂದು ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಹೋಗಿದ್ದ ತಂಡದ ಅಧಿಕಾರಿಗಳು ತಿಳಿಸಿದ್ದರು.

ಲಕ್ಷ್ಮಣ ಸವದಿ ಒತ್ತಾಸೆ: ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು 2020 ರಲ್ಲಿ ಜಿಲ್ಲೆಯ ಶಾಸಕರೊಂದಿಗೆ ಸ್ಥಳ ಪರಿಶೀಲನೆ ಮಾಡಿ, ಕೂಡಲೇ ಡಿಪಿಆರ್‌ ಸಿದ್ಧಪಡಿಸುವುದಕ್ಕೆ ಸೂಚನೆ ನೀಡಿದ್ದರು. ಅನುದಾನ ಕ್ರೋಢೀಕರಣದ ಬಗ್ಗೆಯೂ ಅವರಿದ್ದಾಗಲೇ ಯೋಜನೆ ಮಾಡಿದ್ದು ವಿಮಾನ ನಿಲ್ದಾಣದ ಕನಸು ನನಸಾಗುವುದಕ್ಕೆ ಒತ್ತಾಸೆ ಆಗುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT