ಶನಿವಾರ, ಡಿಸೆಂಬರ್ 14, 2019
25 °C

ರಾಯಚೂರು ಎಪಿಎಂಸಿ: ಮೂಲ ಸೌಕರ್ಯವಿಲ್ಲದೆ ರೈತರ ಪರದಾಟ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಹೊತ್ತುಕೊಂಡು ನೂರಾರು ವಾಹನಗಳು ಎಪಿಎಂಸಿ ಆವರಣಕ್ಕೆ ಬರುತ್ತಿದ್ದು, ಅಲ್ಲಿ ಹೆದಗೆಟ್ಟಿರುವ ರಸ್ತೆ ಅವ್ಯವಸ್ಥೆಯಿಂದ ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿಶಾಲವಾದ ವ್ಯಾಪ್ತಿ ಇರುವ ಎಪಿಎಂಸಿಯಲ್ಲಿ ಅನೇಕ ಕಡೆಗಳಲ್ಲಿ ಇನ್ನೂ ಕಚ್ಚಾರಸ್ತೆಗಳಿವೆ. ಕೆಲವು ಕಡೆ ಬಿ.ಟಿ. ರಸ್ತೆಗಳನ್ನು ಹಾಗೂ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದರೂ, ಅಲ್ಲಲ್ಲಿ ಕಿತ್ತುಹೋಗಿವೆ. ದುರಸ್ತಿಯಾಗದೆ ವರ್ಷಗಳು ಉರುಳುತ್ತಿವೆ. ಕೋಟಿಗಟ್ಟಲೇ ಎಪಿಎಂಸಿ ಶುಲ್ಕ ಸಂಗ್ರಹ ಆಗುತ್ತಿದ್ದರೂ, ರೈತರಿಗೆ ಅದರಿಂದ ಅನುಕೂಲ ಮಾಡಿಕೊಡುತ್ತಿಲ್ಲ.

ಅಲ್ಲಲ್ಲಿ ಚರಂಡಿಗಳು ಬಾಯ್ತೆರೆದು ಅನೇಕ ವರ್ಷಗಳಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ. ರಾಯಚೂರು ಎಪಿಎಂಸಿ ಅವ್ಯವಸ್ಥೆಯ ಆಗರವಾಗಿದೆ. ಒಂದನೇ ಪ್ಲಾಟ್‌ನಲ್ಲಿ ಮಳೆನೀರು ಸಂಗ್ರಹವಾಗಿ ರೈತರು ನಷ್ಟ ಅನುಭವಿಸುವ ಸಮಸ್ಯೆಗೆ ಇನ್ನೂ ಪರಿಹಾರ ಕಲ್ಪಿಸುತ್ತಿಲ್ಲ. ಮಳೆನೀರು ಹರಿದುಹೋಗುವಂತೆ ಸಮರ್ಪಕವಾದ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ರೈತ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಆಡಳಿತಾಧಿಕಾರಿಗಳು ಕ್ರಮ ವಹಿಸಿಲ್ಲ. ಎಪಿಎಂಸಿಯಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವಂತೆ ರೈತ ಸಂಘಟನೆಗಳು ಮನವಿ ಸಲ್ಲಿಸುತ್ತಲೇ ಇವೆ.

‘ಎಪಿಎಂಸಿಯಲ್ಲಿ ಹೋಟೆಲ್‌ಗಳಿವೆ, ಶುಚಿತ್ವ ಕಾಪಾಡುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಚನೆ ಕೊಡದೆ ಇರುವುದಕ್ಕೆ ಹೋಟೆಲ್‌ಗಳಿಗೆ ಹೋಗಿ ಬರುವ ರೈತರು ಅಲ್ಲಿರುವ ದುರ್ನಾತ ಸಹಿಸಿಕೊಳ್ಳಬೇಕಾಗಿದೆ. ಎಪಿಎಂಸಿ ಆವರಣ ಗೋಡೆ ಕೂಡಾ ಅಲ್ಲಲ್ಲಿ ಕುಸಿದಿದ್ದರೂ ಅಧಿಕಾರಿ ವರ್ಗ ಗಮನಿಸುತ್ತಿಲ್ಲ. ವೈಜ್ಞಾನಿಕವಾಗಿ ಎಪಿಎಂಸಿ ಅಭಿವೃದ್ಧಿಗೊಳಿಸಿ ರೈತರಿಗೆ ಅನುಕೂಲ ಮಾಡಕೊಡಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು’ ಎಂದು ರೈತ ಮುಖಂಡ ಲಕ್ಷ್ಮಣಗೌಡ ಕಡಗಂದೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

‘ಹತ್ತಿ ಹಾಗೂ ಭತ್ತದ ವ್ಯಾಪಾರಕ್ಕೆ ಪ್ರಮುಖ ಕೇಂದ್ರ ರಾಯಚೂರು. ಪ್ರತಿವರ್ಷ ಕನಿಷ್ಠ ₹10 ಕೋಟಿಗಿಂತ ಹೆಚ್ಚು ಶುಲ್ಕ ಸಂಗ್ರಹವಾಗುತ್ತಿದೆ. ಅದರಲ್ಲಿ ಸ್ವಲ್ಪ ಭಾಗವಾದರೂ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಬೇಕು’ ಎನ್ನುತ್ತಾರೆ ರೈತ ಮಲ್ಲೇಶಪ್ಪ ಅವರು.

ರಾಜೇಂದ್ರ ಗಂಜ್‌ ಎಪಿಎಂಸಿ ಒಟ್ಟು ವಿಸ್ತಾರ 95.12 ಹೆಕ್ಟೇರ್‌ ಇದೆ. ರೈತರ ಅನುಕೂಲಕ್ಕಾಗಿ ಕೆಲವು ಮೂಲ ಸೌಕರ್ಯಗಳನ್ನು ಮಾಡಿದ್ದರೂ ನಿರ್ವಹಣೆ ಆಗದೆ ಹಾಳು ಬೀಳುತ್ತಿವೆ. ರಸ್ತೆಗಳು ಹದಗೆಟ್ಟಿದ್ದು, ದೂಳು ಆವರಿಸಿಕೊಳ್ಳುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು