ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟ ತೊಲಗಿಸಲು ಲಾಕ್‌ಡೌನ್‌ ಕ್ರಮ

Last Updated 28 ಏಪ್ರಿಲ್ 2021, 16:12 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್‌ ಎರಡನೇ ಅಲೆ ತಡೆಯುವುದಕ್ಕಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಾದ್ಯಂತ ಬಿಗಿಯಾಗಿ ಜಾರಿಗೊಳಿಸಲಾಗಿದ್ದು, ನಿತ್ಯ ಜನಜೀವನ ಸ್ತಬ್ಧಗೊಂಡಿದೆ.

ನಿತ್ಯವೂ ಜನಜಂಗುಳಿ, ವಾಹನಗಳ ದಟ್ಟಣೆಯಿಂದ ಕೂಡಿರುತ್ತಿದ್ದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿಂದ ಹಿಡಿದು ಬಡಾವಣೆಯ ರಸ್ತೆಗಳು, ವ್ಯಾಪಾರಿ ಮಳಿಗೆಗಳು, ಸರ್ಕಾರಿ ಕಚೇರಿಗಳು, ಮೈದಾನಗಳು, ಉದ್ಯಾನಗಳು, ಹೋಟೆಲ್‌, ರೆಸ್ಟೊರೆಂಟ್‌ಗಳು, ಬೀದಿಬದಿ ವ್ಯಾಪಾರ, ತರಕಾರಿ ಮಾರುಕಟ್ಟೆಗಳು, ಬಸ್‌ ನಿಲ್ದಾಣಗಳೆಲ್ಲವೂ ಬಿಕೋ ಎನ್ನುತ್ತಿವೆ.

ರಸ್ತೆಗಳ ತಿರುವು ಹಾಗೂ ವೃತ್ತಗಳಲ್ಲಿ ಬ್ಯಾರಿಕೇಡ್‌ ಬೇಲಿ ಹಾಕಿಕೊಂಡು ನಿಂತಿರುವ ಪೊಲೀಸರು ಅನಗತ್ಯ ಸಂಚಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿದ್ದ ಬೆಳಗಿನ 10 ಗಂಟೆ ಮುಗಿಯುತ್ತಿದ್ದಂತೆ ಪೊಲೀಸರು ಬುಧವಾರ ಎಲ್ಲೆಡೆಯಲ್ಲೂ ಗಸ್ತು ಆರಂಭಿಸಿದರು. 11 ಗಂಟೆ ನಂತರ ಲಾಠಿ ಹಿಡಿದು ವೃತ್ತಗಳಲ್ಲಿ ನಿಂತುಕೊಂಡು ಪ್ರತಿಯೊಬ್ಬರನ್ನು ವಿಚಾರಿಸುವ ಕಾರ್ಯ ಕೈಗೊಂಡರು.

ಡಾ. ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಅನಗತ್ಯ ಸಂಚಾರಿಗಳನ್ನು ಸರದಿಯಲ್ಲಿ ನಿಲ್ಲಿಸಲಾಗಿತ್ತು. ಎಲ್ಲರಿಗೂ ದಂಡ ವಿಧಿಸುವುದು, ಬೈಕ್‌ ಜಪ್ತಿ ಮಾಡಿಕೊಳ್ಳುವ ಕೆಲಸ ನಡೆದಿತ್ತು. ಆಸ್ಪತ್ರೆ ಹಾಗೂ ಇತರೆ ತುರ್ತು ಕೆಲಸಗಳಿಗೆ ತೆರಳುವವರು, ಸರ್ಕಾರಿ ನೌಕರರು ಹಾಗೂ ಸರಕು ವಾಹನಗಳಿಗೆ ಅವಕಾಶ ನೀಡಲಾಗಿತ್ತು.

ತಗ್ಗಿದ ಜನಸಂದಣಿ: ವಿವಿಧ ತುರ್ತು ಕಾರ್ಯಕ್ಕೆ ಪಾಸ್‌ಗಳನ್ನು ಕೇಳಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುಗಿಬೀಳುತ್ತಿದ್ದ ಕಳೆದ ವರ್ಷದ ಲಾಕ್‌ಡೌನ್‌ ದಿನಗಳಲ್ಲಿ ಕಾಣುತ್ತಿದ್ದ ದೃಶ್ಯ ಈಗ ಕಾಣುತ್ತಿಲ್ಲ. ಲಾಕ್‌ಡೌನ್‌ ಹೇಗಿರುತ್ತದೆ ಎನ್ನುವುದು ಜನರಿಗೆ ಈಗಾಗಲೇ ಪರಿಚಯ ಆಗಿರುವುದು ಈ ಬದಲಾವಣೆಗೆ ಕಾರಣ ಇರಬಹುದು. ಕೋವಿಡ್‌ ಹರಡುವಿಕೆ ಆತಂಕವೂ ಇರಬಹುದು.

ಕೋವಿಡ್‌ ಎರಡನೇ ಆತಂಕ ಇದ್ದರೂ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬೀಳುತ್ತಿರುವುದು ಅಂತ್ಯವಾಗುತ್ತಿಲ್ಲ. ಬೆಳಗಿನ 10 ಗಂಟೆವರೆಗೂ ಜನಸಂಚಾರ ಎಂದಿನಂತೆಯೇ ಏರ್ಪಡುತ್ತಿದೆ. ಜನಸಂದಣಿ ತಪ್ಪಿಸುವುದಕ್ಕಾಗಿ ರಾಯಚೂರು ನಗರದ ವಿವಿಧ ಕಡೆಗಳಲ್ಲಿ ತರಕಾರಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೂ ಜನರು ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT