ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ಕಟ್ಟುವಲ್ಲಿ ರಾಯಚೂರು ಜಿಲ್ಲೆ ಪ್ರಥಮ

ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ ಹೇಳಿಕೆ
Last Updated 28 ಡಿಸೆಂಬರ್ 2018, 14:06 IST
ಅಕ್ಷರ ಗಾತ್ರ

ರಾಯಚೂರು: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೋರಿದ ಮಾಹಿತಿ ನೀಡದೆ ರಾಯಚೂರು ಜಿಲ್ಲೆಯ ಅಧಿಕಾರಿಗಳು ರಾಜ್ಯದಲ್ಲಿ ದಂಡ ಕಟ್ಟುವುದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಎನ್‌.ಪಿ.ರಮೇಶ ಹೇಳಿದರು.

ಜಿಲ್ಲಾ ಪಂಚಾಯಿತಿಯ ಜಲನಿರ್ಮಲ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗದಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಹಕ್ಕು ಪ್ರಕರಣಗಳ ವಿಚಾರಣೆಯಲ್ಲಿ ಮಾತನಾಡಿದರು.

ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿದಾಗ ಸರಿಯಾಗಿ ಮಾಹಿತಿ ನೀಡುವ ಮೂಲಕ ದಂಡ ಹಾಕಿಸಿಕೊಳ್ಳವುದಿರಂದ ತಪ್ಪಿಸಿಕೊಳ್ಳಬೇಕು ಎಂದರು.

ಅಧಿಕಾರಿಗಳು ಸರಿಯಾದ ಮಾಹಿತಿ ನೀಡದಿದ್ದರೆ ಜನರು ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಆಗಲೂ ಮಾಹಿತಿ ನೀಡದೇ ದಂಡ ಹಾಕಿಸಿಕೊಳ್ಳುತ್ತಿದ್ದಾರೆ. ಸುಪ್ರೀಂಕೋರ್ಟಿನ ನಿರ್ದೇಶನದಂತೆ ದಿನಕ್ಕೆ ಕನಿಷ್ಟ ₹250, ಗರಿಷ್ಟ ₹25 ಸಾವಿರ ದಂಡ ಹಾಕಬಹುದಾಗಿದೆ ಎಂದು ತಿಳಿಸಿದರು.

ವೈಯಕ್ತಿಕ ಮಾಹಿತಿ ಕೇಳಿದ್ದರೆ ಕಲಂ 8ರ ಪ್ರಕಾರ ಕೊಡಬಾರದು. ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ದಂಡದಿಂದ ಪಾರಾಗಬೇಕು. ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ದಂಡ ಬಿದ್ದಿದೆ. ಇದು ರಾಜ್ಯದಲ್ಲಿಯೇ ಅಧಿಕವಾಗಿದ್ದು, ಒಬ್ಬ ಅರ್ಜಿದಾರ ಹಲವು ಅರ್ಜಿಗಳನ್ನು ಹಾಕಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಕಾಮಗಾರಿಗಳು ಸರಿಯಾಗಿಲ್ಲ ಎಂಬ ಅರ್ಥ ನೀಡುತ್ತದೆ ಎಂದರು.

ಈ ಕಾಯ್ದೆಯಿಂದ ದೇಶದಲ್ಲಿ ದೊಡ್ಡ ಹಗರಣಗಳಾದ ಬಾಂಬೆ ಆದರ್ಶ, 4ಜಿ, 3ಜಿ ಹಗರಣದಲ್ಲಿ ರಾಷ್ಟ್ರ ಮಟ್ಟದ ನಾಯಕರು ಸಿಕ್ಕಿಹಾಕಿಕೊಂಡಿದ್ದಾರೆ. ಅರ್ಜಿ ಸಲ್ಲಿಸಿದ 30 ದಿನಗಳೊಗಾಗಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮೋಹ್ಮದ್ ಯುಸೂಫ್ ಇದ್ದರು.

ಜಾಗೃತಿ ಮೂಡಿಸಿ:ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳಿದ್ದು, ಮಾಹಿತಿ ಹಕ್ಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆದ್ದರಿಂದ ಒಂದು ಕಾರ್ಯಾಗಾರ ನಡೆಸಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ ಹೇಳಿದರು.

ಕಾಯ್ದೆಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅರ್ಧ ಕೆಲಸ ಮುಗಿಯುತ್ತದೆ. ಮಾಹಿತಿ ಇದ್ದಾಗ 30 ದಿನಗಳೊಳಗಾಗಿ ಮಾಹಿತಿ ನೀಡಬೇಕು. ಇಲ್ಲದಿದ್ದರೆ ವಿನಾಕಾರಣ ದಂಡ ತೆರಬೇಕಾಗುತ್ತದೆ ಎಂದರು.

ದಾಖಲಾತಿ ಕಳೆದುಹೋದರೆ ಕರ್ನಾಟಕ ಪಬ್ಲಿಕ್ ಕಾಯ್ದೆ ಪ್ರಕಾರ 1 ವರ್ಷ ಸಜೆ ಇದೆ. ಬಹಳಷ್ಟು ಇಲಾಖೆಗಳಲ್ಲಿ ಸರಿಯಾಗಿ ದಾಖಲಾತಿಗಳೆ ಇರುವದಿಲ್ಲ. ಮಾಹಿತಿ ಹಕ್ಕಿನ ಕುರಿತು ಸರಿಯಾಗಿ ತಿಳಿದುಕೊಳ್ಳಬೇಕು. ಕರ್ನಾಟಕ ಮಾಹಿತಿ ಕಾಯ್ದೆ ಪ್ರಕಾರ ಒಂದು ವಿಷಯಕ್ಕೆ ಒಂದು ಅರ್ಜಿಯನ್ನು ಕೊಡುವಂತೆ ನಿಯಮ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಬಿ.ಶರತ್, ಐಎಎಸ್ ಪ್ರೊಬೇಷನರಿ ಅಧಿಕಾರಿ ನವಿನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಮಾಲಿಪಾಟೀಲ, ಯೋಜನಾಧಿಕಾರಿ ಈರಣ್ಣ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT