ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜೆಡಿಎಸ್‌ ಪದಾಧಿಕಾರಿಗಳಿಂದ ಸೌಟು, ತಟ್ಟೆ ವಾದನ!

Last Updated 10 ಸೆಪ್ಟೆಂಬರ್ 2020, 8:32 IST
ಅಕ್ಷರ ಗಾತ್ರ

ರಾಯಚೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ‌ ವಿಪರೀತವಾಗಿದ್ದು, ಎಲ್ಲರಿಗೂ ಉದ್ಯೋಗ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಘಟಕ ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಸೌಟು ಹಿಡಿದು ತಟ್ಟೆಗಳನ್ನು ವಾದ್ಯಗಳಂತೆ ನುಡಿಸುತ್ತಾ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ವಿನೂತನವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಜಿಲ್ಲಾ ಜೆಡಿಎಸ್‌ ಕಚೇರಿಯಿಂದ ಶುರುವಾರ ತಟ್ಟೆವಾದನ ಜಿಲ್ಲಾಧಿಕಾರಿ ಕಚೇರಿವರೆಗೂ ಮುಂದುವರಿಯಿತು. ಮಾರ್ಗದಲ್ಲಿ ಜನರು ಬೆರಗಿನಿಂದ ನೋಡುತ್ತ ನಿಂತಿದ್ದರು. ‘ಮನದ ಮಾತು ಸಾಕು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ’ ಎನ್ನುವ ಘೋಷಣೆಗಳನ್ನು ಮೊಳಗಿಸಿದರು.

ಜೆಡಿಎಸ್ ವಿದ್ಯಾರ್ಥಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಉಮೇಶಗೌಡ ಮಾತನಾಡಿ, ದೇಶದ ಜಿಡಿಪಿ ಮೈನಸ್ ಆಗಿದೆ. ಆಡಳಿತ ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಫಲವಾಗಿದ್ದಾರೆ. ಆರ್ಥಿಕ ಸಮಸ್ಯೆ, ಜಿಡಿಪಿ‌ ಕುಸಿತಕ್ಕೆ ದೇವರೇ ಕಾರಣ ಎಂದು ಸಚಿವೆ ನಿರ್ಮಾಲ ಸಿತಾರಾಮನ್ ಅವರು ಹೇಳಿಕೆ ಕೊಡುವ ಮೂಲಕ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ‌ ಎಂದು ಆರೋಪಿಸಿದರು.

ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ , ದೇಶದ ನಾಗರಿಕರ ಖಾತೆಗೆ ₹15 ಲಕ್ಷ ಜಮಾ ಮಾಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಉದ್ಯೋಗವಿಲ್ಲದೆ ಪಿಎಚ್‌ಡಿ, ಎಂಎ, ಎಂಜಿನಿಯರಿಂಗ್ ಶಿಕ್ಷಣ ಪಡೆದವರು ಬೀದಿವ್ಯಾಪಾರಿಗಳಾಗುವ ಪರಿಸ್ಥಿತಿ ತಲೆದೋರಿದೆ ಎಂದರು.

ಕೇಂದ್ರವು ಹಲವಾರು ಸರ್ಕಾರಿ ಕಂಪನಿಗಳನ್ನು ಖಾಸಗೀಕರಣ ಮಾಡುವ ಮೂಲಕ‌ ಇರುವ ಹುದ್ದೆಗಳನ್ನು ಕಿತ್ತು ಹಾಕುವ ಹುನ್ನಾರ ನಡೆಸಿದೆ. ಈಗಾಗಲೇ ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವ ಪರಿಸ್ಥಿತಿ ಬಂದಿದ್ದು‌ ರೈಲ್ವೆ, ಖಾಸಗಿಕರಣ ಮಾಡುವ ಮೂಲಕ ಉದ್ಯೋಗವಿಲ್ಲದಂತೆ ಮಾಡಲಾಗುತ್ತಿದೆ. ಅನೆಕ ಸಣ್ಣ ಕಂಪನಿಗಳು ‌ಖಾಸಗೀಕರಣ ಹಾಗೂ‌ ಜಿಎಸ್‌ಟಿ ಹೊಡೆತದಿಂದ ಮುಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು ರವಾನಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಿ, ಕಾರ್ಯಾಧ್ಯಕ್ಷ ಶಿವಶಂಕರ ವಕೀಲ, ಕುಮಾರ ಸ್ವಾಮಿ, ಪಿ.ಯಲ್ಲಪ್ಪ, ನರಸಿಂಹಲು, ವಿಶ್ವನಾಥ ಪಟ್ಟಿ, ಖಲೀಲ್ ಪಾಷಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT