ಅಮೆರಿಕದಲ್ಲಿ ರಾಯಚೂರಿನ ವೈದ್ಯ ಸಾವು

ಬುಧವಾರ, ಜೂನ್ 26, 2019
28 °C
ಮೂರು ವರ್ಷಗಳಿಂದ ನ್ಯೂ ಜೇರ್ಸಿಯ ಸಂಬಂಧಿಗಳ ಮನೆಯಲ್ಲಿ ವಾಸ

ಅಮೆರಿಕದಲ್ಲಿ ರಾಯಚೂರಿನ ವೈದ್ಯ ಸಾವು

Published:
Updated:
Prajavani

ರಾಯಚೂರು: ಅಮೆರಿಕದ ನ್ಯೂ ಜೇರ್ಸಿಯಲ್ಲಿದ್ದ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಗಾಂಧಿನಗರ ಗ್ರಾಮದ ನಂದಿಗಮ್‌ ಮಣಿದೀಪ್‌ (28 ಅವರು) ಆಸ್ಪತ್ರೆ ಕ್ಯಾಂಪಸ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅಲ್ಲಿರುವ ಕುಟುಂಬದ ಸಂಬಂಧಿಗಳು ಪಾಲಕರಿಗೆ ಗುರುವಾರ ಮಾಹಿತಿ ನೀಡಿದ್ದಾರೆ.

ಆತಂಕಕ್ಕೊಳಗಾಗಿರುವ ಮೃತ ವೈದ್ಯರ ತಂದೆ ಶ್ರೀನಿವಾಸ ಹಾಗೂ ತಾಯಿ ಪದ್ಮಾ ಅವರು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದು, ನೆರವು ಕೋರಿದ್ದಾರೆ. ಆದರೆ ಸಾವಿಗೆ ಕಾರಣ ಗೊತ್ತಾಗಿಲ್ಲ. ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಬಹುದು.

ನ್ಯೂ ಜೇರ್ಸಿಯಲ್ಲಿ ಸಾಪ್ಟ್‌ವೇರ್‌ ಎಂಜಿನಿಯರ್‌ ಸಂಬಂಧಿಯೊಬ್ಬರ ಮನೆಯಲ್ಲಿ ಮಣದೀಪ್‌ ಇದ್ದರು. ಗುರುವಾರ ಎಂದಿನಂತೆ ಮನೆಯಿಂದ ಆಸ್ಪತ್ರೆಯ ಕ್ಯಾಂಪಸ್‌ಗೆ ಹೋಗಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಪಾಲಕರಿಗೆ ಸಂಬಂಧಿಗಳು ಮಾಹಿತಿ ಕೊಟ್ಟಿದ್ದಾರೆ.

ಮಂಗಳೂರಿನ ಮಣಿಪಾಲ ಕಸ್ತೂರಿಬಾ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಓದಿದ್ದ ಮಣಿದೀಪ್‌ ಅವರು ಸ್ನಾತಕೋತ್ತರ ಓದುವುದಕ್ಕಾಗಿ ಮೂರು ವರ್ಷಗಳ ಹಿಂದೆ ನ್ಯೂ ಜೇರ್ಸಿಯ ಸೇಂಟ್‌ ಪೀಟರ್ಸ್‌ ಯುನಿವರ್‌ಸಿಟಿ ಆಸ್ಪತ್ರೆಗೆ ಸೇರಿದ್ದರು. ಓದಿನ ಕೊನೆ ವರ್ಷ ವೈದ್ಯಕೀಯ ವೃತ್ತಿ ಮಾಡಲಾರಂಭಿಸಿದ್ದರು.

ತಂದೆ ಶ್ರೀನಿವಾಸ ಅವರು ಕೃಷಿಕರಾಗಿದ್ದಾರೆ. ಇಬ್ಬರು ಪುತ್ರರಲ್ಲಿ ಇನ್ನೊಬ್ಬರು ಎಂಜಿನಿಯರಿಂಗ್‌ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಗಾಂಧಿನಗರದ ತೋಟ ಮನೆಗೆ ನೆಂಟರು ಬರುತ್ತಿದ್ದು, ಪಾಲಕರ ರೋದನ ಮನಕಲಕುವಂತಿತ್ತು.

 ‘ಅಮೆರಿಕದಲ್ಲಿ ತೆಲುಗು ಭಾಷಿಗರ ಒಕ್ಕೂಟವಿದೆ. ಇಂತಹ ಘಟನೆಗಳು ನಡೆದಾಗ ಒಕ್ಕೂಟದಿಂದ ಆಡಳಿತಾತ್ಮಕವಾಗಿ ಸಹಾಯ ಮಾಡುತ್ತಾರೆ. ಈಗಾಗಲೇ ಅಲ್ಲಿಗೆ ಮಾತನಾಡಲಾಗಿದೆ. ಶವ ಇನ್ನೂ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಮುಗಿಸಲು ಅಲ್ಲಿರುವ ವೈದ್ಯರಿಗೆ 24 ಗಂಟೆ ಬೇಕಾಗುತ್ತದೆ ಎಂದಿದ್ದಾರೆ. ಶನಿವಾರ ಮತ್ತು ಭಾನುವಾರ ರಜೆ ಇದೆ. ಮಂಗಳವಾರ ಶವ ಒಪ್ಪಿಸಿದರೆ, ಗುರುವಾರ ಸಿಂಧನೂರಿಗೆ ಬರಬಹುದು ಎನ್ನುತ್ತಿದ್ದಾರೆ’ ಎಂದು ಮೃತನ ಚಿಕ್ಕಪ್ಪ ಸುಬ್ಬರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣಿದೀಪ್‌ ಓದಿನಲ್ಲಿ ತುಂಬಾ ಜಾಣನಿದ್ದ. ಬೌದ್ಧಿಕವಾಗಿ ದೃಢವಾಗಿದ್ದ. ಎಂಬಿಬಿಎಸ್‌ನಲ್ಲಿಯೂ ರ‍್ಯಾಂಕ್‌ ಪಡೆದುಕೊಂಡಿದ್ದ. ಆದರೆ, ಸಾವು ಹೇಗಾಗಿದೆ, ಏನಾಯಿತು ಎಂಬುದು ತಿಳಿದಿಲ್ಲ. ಅಮೆರಿಕದ ಪೊಲೀಸರು ತಕ್ಷಣ ಮಾಹಿತಿ ಕೊಡುವುದಿಲ್ಲ’ ಎಂದು ಅಳಲು ತೋಡಿಕೊಂಡರು.

‘ಅಗತ್ಯ ನೆರವು’

‘ನ್ಯೂ ಜೆರ್ಸಿಯಲ್ಲಿ ಮಣಿದೀಪ್‌ ಹೆಸರಿನ ವೈದ್ಯರೊಬ್ಬರು ಮೃತಪಟ್ಟಿರುವ ವಿಷಯವನ್ನು ಸಿಂಧನೂರು ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಾಲಕರು ಪೊಲೀಸರಿಗೆ ಮೊದಲು  ಮಾಹಿತಿ ಕೊಟ್ಟಿದ್ದಾರೆ. ಸ್ಥಳೀಯ ಪೊಲೀಸ್‌ ಅಧಿಕಾರಿಯೊಬ್ಬರು ‍ಕುಟುಂಬದ ಸಂಪರ್ಕದಲ್ಲಿದ್ದಾರೆ. ಶವ ಪಡೆಯುವುದಕ್ಕೆ ಪಾಲಕರು ನೆರವು ಕೋರಿದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !