ಹಟ್ಟಿಚಿನ್ನದಗಣಿ: ರಾಷ್ಟ್ರೀಯ ಹೆದ್ದಾರಿ-150ಎ ಜೇವರ್ಗಿ– ಚಾಮರಾಜನಗರ ರಸ್ತೆಯ ಮಧ್ಯೆ ಗುರುಗುಂಟಾ ಬಳಿ ಹಾದುಹೋಗುವ ಗೋಲಪಲ್ಲಿ ಸೇತುವೆಯ ತಡೆಗೋಡೆ ಶಿಥಿಲಗೊಂಡಿದ್ದು, ಪ್ರಯಾಣಿಕರು ಆತಂಕದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
‘6 ದಶಕಗಳ ಹಿಂದೆ ನಿರ್ಮಾಣಗೊಂಡ ಸೇತುವೆ ಇದೀಗ ಬೀಳುವ ಸ್ಥಿತಿಗೆ ತಲುಪಿದೆ. ಸೇತುವೆ ಮಧ್ಯೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸೇತುವೆಯ ತಡೆಗೋಡೆಯು ಮುರಿದು ಕಬ್ಬಿಣದ ಸರಳುಗಳು ಕಾಣುತ್ತಿವೆ. ಸೇತುವೆ ಶಿಥಿಲ ಬಗ್ಗೆ ಅಧಿಕಾರಿಗಳಿಗೆ ಹಲವು ಸಲ ಮಾಹಿತಿ ನೀಡಿದರೂ ದುರಸ್ತಿಗೆ ಮುಂದಾಗಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಗೋಲಪಲ್ಲಿ ಸೇತುವೆ ಹತ್ತಿರ ವಾಹನ ದಟ್ಟಣೆ ಹೆಚ್ಚಾಗಿದ್ದು, ಯಾವುದೇ ನಾಮಫಲಕ ಅಥವಾ ಸೂಚನಾ ಫಲಕವಿಲ್ಲ. ಇದರಿಂದ ಈ ಪ್ರದೇಶದಲ್ಲಿಯೇ ಅಪಘಾತಗಳು ಹೆಚ್ಚಾಗಿ ಸಂಭವಿಸಿದ ಉದಾಹರಣೆಗಳು ಇವೆ. ಈ ರಸ್ತೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳ ಸರಕು ಸಾಗಣೆ ಮಾಡುವ ಭಾರಿ ವಾಹನಗಳು ಸಂಚರಿಸುತ್ತವೆ.
ಸೇತುವೆಯ ಎರಡೂ ತುದಿಗಳು ಎತ್ತರ ಪ್ರದೇಶದಲ್ಲಿದ್ದು, ರಸ್ತೆ ತಿರುವಿನಲ್ಲಿದೆ. ಈಗಾಗಲೇ ಇದನ್ನು ಅಪಘಾತ ವಲಯ ಎಂದು ಘೋಷಣೆ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇತುವೆ ದುರಸ್ತಿಗೆ ಮುಂದಾಗದೇ ಇರುವುದು ವಾಹನ ಸಂಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗೋಲಪಲ್ಲಿ ಸೇತುವೆಯು ಸಂಪೂರ್ಣ ಶಿಥಿಲಗೊಂಡಿದೆ. ದುರಸ್ತಿ ಬಗ್ಗೆ ಮನವಿ ಮಾಡಲಾಗಿದೆ. ಅಪಘಾತ ಸಂಭವಿಸುವ ಮುನ್ನ ಅಧಿಕಾರಿಗಳು ಸೇತುವೆ ದುರಸ್ತಿಗೆ ಮುಂದಾಗಬೇಕು.ರಾಜಾ ಸೋಮನಾಥ ನಾಯಕ ಗುರುಗುಂಟಾ ಸಂಸ್ಧಾನ
ಈ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು ದುರಸ್ತಿ ಕಾರ್ಯಕ್ಕಾಗಿ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಆರಂಭದ ಹಂತದಲ್ಲಿದೆ.ವಿಜಯಕುಮಾರ ಜೆಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನಗುಂದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.