ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ತಾರಾನಾಥರಿಂದ ರಾಯಚೂರಿಗೆ ಹೊಸ ಆಯಾಮ'

ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆ
Last Updated 25 ಜನವರಿ 2020, 12:05 IST
ಅಕ್ಷರ ಗಾತ್ರ

ರಾಯಚೂರು: ಹೈದರಾಬಾದ್‌ ರಾಜ್ಯವೆಂದರೆ ನಾಲ್ಕು ಗೋಡೆಗಳ ಮಧ್ಯೆ ಇರುವಂತಹ ಹೊರಗಿನ, ಒಳಗಿನ ವಾತಾವರಣ ಹಾಗೂ ಹೊಸ ವಿಚಾರಗಳಿಲ್ಲದ ಮನೆಯಾಗಿತ್ತು. ಆದರೆ, ಪಂಡಿತ್‌ ತಾರಾನಾಥ ಅವರು ಹಮ್‌ದರ್ದ್ ಶಾಲೆ ಸ್ಥಾಪಿಸುವುದರ ಮುಖಾಂತರ ಈ ರಾಯಚೂರಿಗೆ ಹೊಸ ಆಯಾಮವನ್ನೇ ನೀಡಿದ್ದಾರೆ ಎಂದರೆ ಅದು ಅತಿಶಯೋಕ್ತಿ ಆಗಲಾರದು ಎಂದು ರಾಜ್ಯ ಉಚ್ಚನ್ಯಾಯಾಲಯ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅಭಿಪ್ರಾಯಪಟ್ಟರು.

ನಗರದ ಎಸ್.ಎಸ್.ಆರ್.ಜಿ ಮಹಿಳಾ ವಿದ್ಯಾಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಹೇಳಿದ ಹಾಗೆ ಪುರುಷನಿಗೆ ಶಿಕ್ಷಣ ನೀಡಿದರೆ, ಅದು ಕೇವಲ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಈಡೀ ನಾಗರಿಕತೆಗೆ ಶಿಕ್ಷಣ ನೀಡಿದಂತೆ. ಈ ನಿಟ್ಟಿನಲ್ಲಿ ರಾಯಚೂರಿನ ತಾರಾನಾಥ ಶಿಕ್ಷಣ ಸಂಸ್ಥೆ ಅವರು ಈ ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಕಾಲೇಜನ್ನು ಐದು ದಶಕಗಳ ಹಿಂದೆಯೇ ಸ್ಥಾಪಿಸಿ ಗಾಂಧೀಜಿ ಅವರ ಮಾತನ್ನು ಸಾಕಾರಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವಿದ್ಯಾಲಯದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತಸ್ಥಾನ ಅಲಂಕರಿಸಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡಲು ಇನ್ನೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ತೋರಿಸಿ ಅವರನ್ನು ಒಂದು ಹಾದಿಯಲ್ಲಿ ತರಬೇಕು. ಈ ನಿಟ್ಟಿನಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯು ಶಿಕ್ಷಣ ನೀಡಿ ಹಲವಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ ಎಂದರು.

ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಡಾ.ಸಬೀಹಾ ಭೂಮಿಗೌಡ ಮಾತನಾಡಿ, ಬಿತ್ತಿದ ಬೀಜ ಹುಸಿಯಾಗದೆ ಮೊಳಕೆ ಒಡೆದು ಸಸಿಯಾಗಿ, ಮರವಾಗಿ ಟಿಸಿಲು ಒಡೆದು ಹೂ, ಕಾಯಿ, ಹಣ್ಣು ಕೊಡುವ ಧನ್ಯತಾಭಾವ ಅನುಭವಿಸಿದವರಿಗೆ ಗೊತ್ತು ಎಂದರು.

ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಿರಬೇಕು. ಸಮಾಜದ ಋಣ ತೀರಿಸಬೇಕು. ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಆಗಲೇ ಬದುಕು ಸುಂದರವಾಗಿರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಲಿಂಗ ಭೇದವನ್ನು ನಿವಾರಿಸಲು ಶ್ರಮಿಸಬೇಕು. ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಹಿಳೆಯರ ಲಿಂಗಾನುಪಾತ ನಗರ ಮತ್ತು ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಗರದಲ್ಲಿ ಕಡಿಮೆ ಏಕೆ ಎನ್ನುವುದನ್ನು ಕಂಡುಹಿಡಿಯಲು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಬೇಕು ಎಂದರು.

ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಮುಂದಿನ ವರ್ಷದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಬೇಕು. ಉಪನ್ಯಾಸಕರಿಗೆ ಗೌರವಯುತ ಸಂಬಳ ಕೊಡಬೇಕು. ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಗಳನ್ನು ನಿರಂತರವಾಗಿ ನಡೆಯುತ್ತಿರಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಹುಮನಾಬಾದ್ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಮಾತನಾಡಿ, ಗುಣಮಟ್ಟದ ಶಿಕ್ಷಣವನ್ನು ತಾರಾನಾಥ ಶಿಕ್ಷಣ ಸಂಸ್ಥೆ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಸಂಸ್ಥೆಯ ನಿವೃತ್ತ ಉಪನ್ಯಾಸಕರನ್ನು ಹಾಗೂ ರ್‍ಯಾಂಕ್ ವಿಜೇತರನ್ನು ಸನ್ಮಾನಿಸಲಾಯಿತು.

ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ, ಧವಲ್ ಜೋಬನ್ ಪುತ್ರ, ಮಲ್ಲಿಕಾರ್ಜುನ, ಪ್ರಾಚಾರ್ಯೆ ಗೀತಾ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT