ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳಿಗೆ ಕಾದಿರುವ ಪಶು ಪ್ರಯೋಗಾಲಯ

ಕೋಟ್ಯಂತರ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾದರೂ ಕಾರ್ಯಾರಂಭ ಮಾಡಿಲ್ಲ!
Last Updated 23 ನವೆಂಬರ್ 2022, 23:15 IST
ಅಕ್ಷರ ಗಾತ್ರ

ರಾಯಚೂರು: ನಗರದ ಗಂಜ್‌ ವೃತ್ತಕ್ಕೆ ಹೊಂದಿಕೊಂಡಿರುವ ಜಿಲ್ಲಾ ಪಶು ಪಾಲನಾ ಮತ್ತು ಪಶುವೈದ್ಯಕೀಯ ಆವರಣದಲ್ಲಿ ಪಶುರೋಗ ತನಿಖಾ ಪ್ರಯೋಗಾಲಯಕ್ಕಾಗಿ ಕಟ್ಟಡ ನಿರ್ಮಾಣವಾಗಿ ಎರಡು ವರ್ಷಗಳಾದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ!

’ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ರಾಯಚೂರು’ ಎಂದು ಕಟ್ಟಡದ ಮೇಲೆ ಬರೆಯಲಾಗಿದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾದ ಈ ಪ್ರಯೋಗಾಲಯಕ್ಕೆ ಬೀಗ ಜಡಿಯಲಾಗಿದ್ದು, ಕಾರ್ಯಾರಂಭಗೊಳ್ಳುವ ಭಾಗ್ಯ ಇನ್ನೂ ದೊರಕಿಲ್ಲ. ಇದನ್ನು ನಿರ್ಮಾಣ ಮಾಡುವುದಕ್ಕೆ ಇದ್ದ ಕಾಳಜಿ ಅದನ್ನು ಕಾರ್ಯಾರಂಭಗೊಳಿಸುವಲ್ಲಿ ಇಲ್ಲದಾಗಿದೆ.

ಕೃಷಿ ಪ್ರಧಾನವಾಗಿರುವ ರಾಯಚೂರು ಜಿಲ್ಲೆಯಲ್ಲಿ ರೈತರು ಸಾಕಷ್ಟು ಜಾನುವಾರುಗಳನ್ನು ಹೊಂದಿದ್ದಾರೆ. ಆದರೆ, ಪಶುಗಳಿಗೆ ರೋಗ ಆವರಿಸಿಕೊಂಡಾಗ ಅವುಗಳಿಂದ ಸಂಗ್ರಹಿಸುವ ರಕ್ತ ಹಾಗೂ ಇನ್ನಿತರ ಮಾದರಿಗಳನ್ನು ಬೇರೆ ಜಿಲ್ಲೆಗಳಲ್ಲಿರುವ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವರದಿಗಳನ್ನು ಪಡೆದು, ಚಿಕಿತ್ಸೆ ನೀಡುವುದಕ್ಕೆ ಸಾಕಷ್ಟು ವಿಳಂಬವಾಗುತ್ತಿದೆ. ಈ ವಿಳಂಬವನ್ನು ತಪ್ಪಿಸುವ ಉದ್ದೇಶಕ್ಕಾಗಿಯೇ ಈ ಪ್ರಯೋಗಾಲಯ ನಿರ್ಮಾಣ ಮಾಡಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಚರ್ಮಗಂಟು ರೋಗವು ರಾಸುಗಳಿಗೆ ಯಮಪಾಶದಂತೆ ಸುತ್ತಿಕೊಳ್ಳುತ್ತಿದೆ. ಈ ರೋಗದಿಂದ ಜಾನುವಾರುಗಳನ್ನು ಬದುಕಿಸಿಕೊಳ್ಳುವುದು ಪಶುವೈದ್ಯಕೀಯ ಸೇವಾ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಆದರೆ, ರೋಗ ಆವರಿಸಿದ ಜಾನುವಾರುಗಳನ್ನು ಶೀಘ್ರ ಪತ್ತೆ ಹಚ್ಚಿ ಅವುಗಳನ್ನು ಪ್ರತ್ಯೇಕಿಸುವುದರಿಂದ ಇತರೆ ಜಾನುವಾರುಗಳ ಜೀವ ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಪಶುವೈದ್ಯರ ಸಲಹೆ.

ಈ ಹಿಂದೆ ಪಶುಸಂಗೋಪನೆ ಸಚಿವರಾಗಿದ್ದ ವೆಂಕಟರಾವ್‌ ನಾಡಗೌಡ ಅವರು ಈ ಭಾಗದ ಕೃಷಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕಾಗಿಯೆ ರಾಯಚೂರಿನಲ್ಲಿ ಪಶುರೋಗ ತನಿಖಾ ಪ್ರಯೋಗಾಲಯ ಮಾಡುವುದಕ್ಕೆ ಕ್ರಮ ಕೈಗೊಂಡಿದ್ದರು. ಆದರೆ, ಪಶು ವಿಜ್ಞಾನಿಗಳನ್ನು ನೇಮಕಗೊಳಿಸಿ ಪ್ರಯೋಗಾಲಯ ಕಾರ್ಯಾರಂಭ ಮಾಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಜಿಲ್ಲಾ ಪಶುಪಾಲನಾ ಇಲಾಖೆಯಿಂದ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಬಗ್ಗೆ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಕೂಡಾ ಮುತೂವರ್ಜಿ ವಹಿಸಬೇಕಾಗಿತ್ತು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ವಿಶ್ವವಿದ್ಯಾಲಯ ಕೂಡಾ ತನ್ನ ಕಾರ್ಯ ಮಾಡುವಲ್ಲಿ ಅಸಡ್ಡೆ ತೋರಿಸುತ್ತಿದೆ. ಮೂಕ ಪ್ರಾಣಿಗಳು ಅನುಭವಿಸುತ್ತಿರುವ ಸಂಕಷ್ಟಕ್ಕೆ ಯಾರೂ ಕಿವಿಗೊಡುತ್ತಿಲ್ಲ. ಚರ್ಮಗಂಟು ರೋಗವು ಜಿಲ್ಲೆಯಾದ್ಯಂತ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಸುಗಳಿಗೆ ಲಸಿಕೆ ನೀಡುವ ಕಾರ್ಯ ಕೈಗೊಳ್ಳಲಾಗಿದೆ. ಆದರೂ ಲಿಂಗಸುಗೂರು ತಾಲ್ಲೂಕಿನಲ್ಲಿ ಈಗಾಗಲೇ ರಾಸುಗಳು ಚರ್ಮಗಂಟು ರೋಗದಿಂದ ಸಾವನ್ನಪ್ಪುತ್ತಿವೆ.

ಜಾನುವಾರುಗಳಿಗೆ ರೋಗ ಆವರಿಸುವ ಮೊದಲೇ ಚಿಕಿತ್ಸೆ ದೊರಕಿಸುವುದಕ್ಕಾಗಿ ಪಶುಗಳ ರಕ್ತ, ಮೂತ್ರ ಹಾಗೂ ಸಗಣಿಗಳ ಪರೀಕ್ಷೆ ಕೈಗೊಳ್ಳುವುದಕ್ಕೆ ಪ್ರಯೋಗಾಲಯದಲ್ಲಿ ತನಿಖೆ ನಡೆಸುವುದು ತುಂಬಾ ಮುಖ್ಯವಾಗುತ್ತದೆ. ನೂತನವಾಗಿ ನಿರ್ಮಾಣವಾಗಿರುವ ಪ್ರಯೋಗಾಲಯ ಕಟ್ಟಡವು ಸಕಾಲಕ್ಕೆ ಬಳಕೆಯಾಗದ ಕಾರಣ, ಕ್ರಮೇಣ ಶಿಥಿಲಾವಸ್ಥೆಗೆ ಜಾರಿಕೊಳ್ಳಲಿದೆ. ಹಾಲಿ ಇರುವ ಕಟ್ಟಡಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಳ್ಳದ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಈ ನೂತನ ಕಟ್ಟಡವನ್ನು ಸಂರಕ್ಷಿಸಿಕೊಂಡು ಹೋಗುವುದು ಅಸಾಧ್ಯ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎನ್ನುವುದು ರೈತ ಸಮುದಾಯದ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT