ಸೋಮವಾರ, ಸೆಪ್ಟೆಂಬರ್ 20, 2021
22 °C
ಇಬ್ಬರು ಬಿಜೆಪಿ ಶಾಸಕರು; ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ

ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ಬೇಡಿಕೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯೊಂದಿಗೆ ಪುನರ್‌ ರಚನೆಯಾಗಲಿರುವ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೂ ಪ್ರಾತಿನಿಧ್ಯ ಸಿಗಬೇಕು ಎನ್ನುವ ಬೇಡಿಕೆ ಗರಿಗೆದರಿದೆ.

ಈಗಾಗಲೇ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ರಾಜ್ಯದ ಪಕ್ಷದ ವರಿಷ್ಠರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಯಾವುದೇ ಮಾನದಂಡ ಇಟ್ಟುಕೊಂಡು ಲೆಕ್ಕಾಚಾರ ಮಾಡಿದರೂ ರಾಯಚೂರು ಜಿಲ್ಲೆಗೆ ಸಚಿವಸ್ಥಾನ ಕೊಡುವುದು ನ್ಯಾಯೋಚಿತ ಎಂಬುದನ್ನು ಮನವರಿಕೆ ಮಾಡಲಾಗಿದೆ ಎಂಬುದಾಗಿ ಪದಾಧಿಕಾರಿಗಳು ಹೇಳುತ್ತಿದ್ದಾರೆ.

ಜಿಲ್ಲೆಯಿಂದ ಆಯ್ಕೆಯಾದ ಬಿಜೆಪಿ ಶಾಸಕರಾದ ಶಿವನಗೌಡ ನಾಯಕ ಮತ್ತು ಡಾ.ಶಿವರಾಜ ಪಾಟೀಲ ಅವರು ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಗಳು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ರಾಯಚೂರು ಜಿಲ್ಲೆಯ ಅಭಿವೃದ್ಧಿಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿತ್ತು. ಆದರೆ, ಇಬ್ಬರೂ ಶಾಸಕರನ್ನು ಸಮಾಧಾನ ಮಾಡುವುದಕ್ಕಾಗಿ ನಿಗಮಗಳ ಅಧ್ಯಕ್ಷ ಸ್ಥಾನ ವಹಿಸಲಾಗಿದೆ.

ಹೊಸ ಬೆಳವಣಿಗೆಯಿಂದಾಗಿ ಸಚಿವಸಂಪುಟ ಪುನರ್‌ರಚನೆ ಆಗುವುದು ನಿಶ್ಚಿತ. ಹೊಸ ಮುಖ್ಯಮಂತ್ರಿಯಾದರೂ ಜಿಲ್ಲೆಗೆ ಪ್ರಾತಿನಿಧ್ಯ ದೊರಕಿಸಬಹುದು ಎನ್ನುವ ನಿರೀಕ್ಷೆ ಇಬ್ಬರೂ ಶಾಸಕರ ಬೆಂಬಲಿಗರಲ್ಲಿದೆ. ಅನೇಕ ಜನ ಬೆಂಬಲಿಗರು ಸಚಿವ ಸ್ಥಾನ ವಹಿಸುವಂತೆ ಒತ್ತಾಯ ಆರಂಭಿಸಿದ್ದಾರೆ. ಜಿಲ್ಲೆಯ ಪಕ್ಷದ ಪದಾಧಿಕಾರಿಗಳು ಮತ್ತು ಶಾಸಕರ ಬೆಂಬಲಿಗರ ಒತ್ತಾಸೆಯೆಲ್ಲವೂ ಈ ಸಲ ಒಗ್ಗಟ್ಟಾಗಿರುವುದರಿಂದ ಕನಿಷ್ಠ ಒಬ್ಬರಿಗಾದರೂ ಸಚಿವಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸ ಹೆಚ್ಚಾಗಿದೆ.

ರಾಜಕೀಯ ಅನುಭವದಲ್ಲಿ ಜೇಷ್ಠತೆ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರಿಗಿದೆ. 2009 ರಿಂದ ಬಿಜೆಪಿಯಲ್ಲಿದ್ದು, ದೇವದುರ್ಗ ಕ್ಷೇತ್ರದಲ್ಲಿ ಸಿಹಿ–ಕಹಿಯನ್ನು ಅನುಭವಿಸಿದ್ದಾರೆ. 2009 ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ ಸಚಿವರಾಗಿದ್ದರು. 2013 ಹಾಗೂ 2014 ರಲ್ಲಿ ನಡೆದ ಚುನಾವಣೆಗಳಲ್ಲಿ ಸೋಲು ಅನುಭವಿಸಿದರೂ 2016 ರಲ್ಲಾದ ಉಪಚುನಾವಣೆ ಮೂಲಕ ಮತ್ತೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. 2018 ರಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಮರು ಆಯ್ಕೆಯಾದರೂ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಸಚಿವಸ್ಥಾನ ನೀಡಲಿಲ್ಲ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಶಿವನಗೌಡ ನಾಯಕ ಅವರಿಗೆ ನೂತನ ಸಚಿವ ಸಂಪುಟದಲ್ಲಿಯಾದರೂ ಸ್ಥಾನ ಸಿಗುತ್ತದೆ ಎನ್ನುವ ಲೆಕ್ಕಾಚಾರ ಇದೆ.

ರಾಯಚೂರು ನಗರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಡಾ.ಶಿವರಾಜ ಪಾಟೀಲ್‌ ಅವರಿಗೂ ಸಚಿವಸ್ಥಾನ ಕೊಡಬೇಕು ಎನ್ನುವ ಬೇಡಿಕೆ ಜೋರಾಗಿದೆ. ಎರಡನೇ ಬಾರಿ ಶಾಸಕರಾಗಿದ್ದು, ಅನುಭವದ ಆಧಾರದಲ್ಲಿ ಮತ್ತು ಹಿಂದುಳಿದ ಜಿಲ್ಲೆಯ ಅಭಿವೃದ್ಧಿ ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಅಲ್ಲದೆ, ಅನುಭವಿ ಲಿಂಗಾಯತ ಶಾಸಕ ಎನ್ನುವ ಮನ್ನಣೆ ಕೊಡಬೇಕು ಎನ್ನಲಾಗುತ್ತಿದೆ.

ಜಿಲ್ಲೆಯ ಅಭಿವೃದ್ಧಿಯನ್ನು ಪರಿಗಣಿಸಿ ನೂತನ ಸಚಿವ ಸ‍ಂಪುಟದಲ್ಲಿ ಒಬ್ಬರಿಗಾದರೂ ಸಚಿವಸ್ಥಾನ ಸಿಗುತ್ತದೆ ಎನ್ನುವುದು ಸದ್ಯಕ್ಕೆ ಎಲ್ಲೆಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು