ರಾಯಚೂರು: ಲಿಂಗಸುಗೂರು ಮುಖ್ಯ ರಸ್ತೆಯಿಂದ ಯಕ್ಲಾಸಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಡ್ಯಾಡಿ ಕಾಲೊನಿಯ ಚತುಷ್ಪಥ ರಸ್ತೆ ಕಾಮಗಾರಿ ಒಂದು ವರ್ಷದಿಂದ ತೆವಳುತ್ತ ಸಾಗಿದೆ.

ಮಂದಗತಿಯ ಕಾಮಗಾರಿ ವ್ಯಾಪಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ಸಂಕಷ್ಟ ತಂದೊಡ್ಡಿದೆ.

ಚೈತನ್ಯ ಆಸ್ಪತ್ರೆಯಿಂದ ತಿರುವು ಪಡೆದುಕೊಂಡರೆ ಸಾಕು ಸಮಸ್ಯೆಯ ಆಗರವೇ ಕಾಣಿಸಿಕೊಳ್ಳುತ್ತದೆ. ರಸ್ತೆಯ ಒಂದು ಬದಿಯನ್ನು ಪೈಪ್ಲೈನ್ ಅಳವಡಿಸುವ ನೆಪದಲ್ಲಿ ಅಗೆದು ಹಾಕಲಾಗಿದೆ. ಏಳು ಮಕ್ಕಳ ತಾಯಿ ದೇವಿ ಮಂದಿರದ ಕ್ರಾಸ್ ಬಳಿ ಪೈಪ್ಗಳನ್ನು ಸರಿಯಾಗಿಯೂ ಹಾಕಿಲ್ಲ. ಅರ್ಧಮರ್ಧ ಕೆಲಸ ಮಾಡಲಾಗಿದೆ.

ಹೊಸ ವಿದ್ಯುತ್ ಲೈನ್ ಅಳವಡಿಸುವ ಕೆಲಸ ಒಂದು ವರ್ಷದಿಂದ ಸಾಗಿದರೂ ಮುಗಿದಿಲ್ಲ. ಇಲ್ಲಿ ಆಗಾಗ ಲೈನ್ ಕೈಕೊಡುತ್ತಲೇ ಇರುತ್ತದೆ. ರಸ್ತೆಯ ಎಡಬದಿಗೆ ಗ್ಯಾಸ್ ಪೈಪ್ಲೈನ್ ಅಳವಡಿಸಲಾಗಿದೆ. ರಸ್ತೆಯ ಬಲ ಬದಿಗೆ ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾರ್ಯ ನಡೆದಿದ್ದರೂ ಅದು ಸಮರ್ಪಕವಾಗಿಲ್ಲ.

ರಸ್ತೆ ಬದಿ ಅಗೆದು ಗಟಾರದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಗಟಾರಿನಲ್ಲಿ ನೀರು ಹರಿಯುವುದು ನಿಂತಿದೆ. ಡ್ಯಾಡಿ ಕಾಲೊನಿಯ ಈಶ್ವರ ಮಂದಿರದ ತಿರುವಿನಲ್ಲಿ ಮಣ್ಣು ಅಗೆದು ರಸ್ತೆ ಮೇಲೆ ಗುಡ್ಡೆ ಹಾಕಲಾಗಿದೆ. ಇಲ್ಲಿಯ ಜನರು ಕಾರು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಶಾಲಾ ವಾಹನಗಳು ಒಳಗೆ ಬರಲು ಸಾಧ್ಯವಾಗದೇ ಹೊರಗೆ ನಿಲ್ಲುವ ಕಾರಣ ಮಕ್ಕಳು ಬೆಂಕಿ ಬಿಸಿಲಿಗೆ ತೊಂದರೆ ಅನುಭವಿಸಬೇಕಾಗಿದೆ.

ರಸ್ತೆ ಬದಿಯಲ್ಲಿ ಅಗೆದ ಮಣ್ಣು ಬಿಸಿಲಿಗೆ ದೂಳಾಗಿ ಮನೆಗಳನ್ನು ಸೇರಿಕೊಳ್ಳುತ್ತಿದೆ. ಶಾಲೆ, ಆಸ್ಪತ್ರೆ, ಕಿರಾಣಿ ಅಂಗಡಿಗಳು, ಬೇಕರಿ, ರೊಟ್ಟಿ ಕೇಂದ್ರ, ಹೋಟೆಲ್ಗಳಲ್ಲಿ ದೂಳು ಆವರಿಸಿಕೊಳ್ಳುತ್ತಿದೆ. ಹೋಟೆಲ್ ಹಾಗೂ ರೊಟ್ಟಿ ಕೇಂದ್ರಗಳಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.

ಕಳೆದ ವರ್ಷ 20 ವರ್ಷ ಹಳೆಯ ಸುಮಾರು 50 ದೊಡ್ಡ ಮರಗಳನ್ನು ಕಡಿದು ಹಾಕಿದ್ದಾರೆ. ಆದರೆ, ರಸ್ತೆ ಬದಿಗೆ ಒಂದು ಗಿಡವನ್ನೂ ನೆಟ್ಟಿಲ್ಲ. ಬೆಂಕಿ ಬಿಸಿಲಿನಿಂದ ಕಾಂಕ್ರೀಟ್ ಕಟ್ಟಡಗಳು ಕಾದು ಧಗೆ ಹೆಚ್ಚುತ್ತಿದೆ. ನಿಧಾನಗತಿಯ ಕಾಮಗಾರಿಯಿಂದಾಗಿ ವಿದ್ಯುತ್ ಸಹ ಆಗಾಗ ಕೈಕೊಡುತ್ತದೆ. ಇದರಿಂದ ಜನರ ಗೋಳಾಟ ಹೆಚ್ಚಾಗಿದೆ.

‘ಒಂದು ವರ್ಷದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ದೂಳು ಅಂಗಡಿಗಳಲ್ಲಿ ಬಂದು ಬೀಳುತ್ತದೆ. ಅಂಗಡಿ ಹಾಗೂ ಮನೆಗಳಲ್ಲಿ ಕುಳಿತುಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ಕಾಮಗಾರಿ ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ವ್ಯಾಪಾರಿ ವಿಜಯಕುಮಾರ ಮನವಿ ಮಾಡುತ್ತಾರೆ.

‘ಡ್ಯಾಡಿ ಕಾಲೊನಿ ಮಾರ್ಗವಾಗಿ ಯಕ್ಲಾಸಪುರಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗಿರುವುದು ಬಹಳ ಬೇಸರ ತಂದಿದೆ. ರಸ್ತೆ, ಆವರಣ ಗೋಡೆ, ಗ್ಯಾಸ್ ಲೈನ್, ಕುಡಿಯುವ ನೀರಿನ ಪೈಪ್ಲೈನ್, ಒಳ ಚರಂಡಿ ನಿರ್ಮಾಣ ಸೇರಿದಂತೆ ಒಟ್ಟು ₹ 7 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಿಧಾನಗತಿ ಕಾಮಗಾರಿ ಸಾರ್ವಜನಿಕರಿಗೆ ಸಂಕಷ್ಟ ತಂದಿದೆ’ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಬೇಸರ ವ್ಯಕ್ತಪಡಿಸುತ್ತಾರೆ.

‘ಬಸವ ಟಿಫನ್ ಸೆಂಟರ್ನಿಂದ ಮ್ಯಾಕ್ಸ್ವೆಲ್ ಶಾಲೆಯವರೆಗೆ ದೊಡ್ಡದಾಗಿ ಗುಂಡಿ ತೋಡಿ ಬಿಡಲಾಗಿದೆ. ಶಾಲಾ ಬಸ್ಗಳು ಬರಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ದೂಳಿನಲ್ಲಿ ರಸ್ತೆ ಮೇಲೆ ತಂದು ನಿಲ್ಲಿಸಬೇಕಾಗಿದೆ. ದೂಳು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಳೆಗಾಲಕ್ಕೂ ಮೊದಲು ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ವಾರ್ಡ್ ನಂಬರ್–5 ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅಯ್ಯಣ್ಣ ಮಹಾಮನಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.