ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ರಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ

ಗ್ರಾಮೀಣ ಭಾಗದ ಸ್ಪರ್ಧೆಗಳ ಆಯೋಜನೆ, ನಾಡಿನ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗಿ
Last Updated 7 ಜೂನ್ 2019, 12:39 IST
ಅಕ್ಷರ ಗಾತ್ರ

ರಾಯಚೂರು:ಮುನ್ನೂರು ಕಾಪು(ಬಲಿಜ) ಸಮಾಜದಿಂದ ಪ್ರತಿವರ್ಷದಂತೆ ಈ ವರ್ಷವೂ ಜೂನ್ 16 ರಿಂದ 18 ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿದೆ ಎಂದು ಮುನ್ನೂರು ಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ರೈತರ ಹಬ್ಬವನ್ನಾಗಿ 19 ವರ್ಷಗಳಿಂದ ಆಚರಿಸುತ್ತಾ ಬರಲಾಗಿದೆ. ಗ್ರಾಮೀಣ ಭಾಗದ ಕ್ರೀಡೆಗಳಾದ ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆ, ಕುಸ್ತಿ, ಉಸುಕಿನ ಚೀಲದ ಭಾರ ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಜೂನ್ 16 ರಂದು ಬೆಳಿಗ್ಗೆ 8 ಗಂಟೆಗೆ ಒಂದೂವರೆ ಟನ್ ತೂಕದ ಕಲ್ಲಿನ ಭಾರವನ್ನು ಎತ್ತುಗಳಿಂದ ಎಳೆಯುವ ಸ್ಫರ್ಧೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಉದ್ಘಾಟಿಸುವರು. ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ಹೇಳಿದರು.‌

ಈ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನಕ್ಕೆ ₹ 45 ಸಾವಿರ, ಎರಡನೇ ಸ್ಥಾನಕ್ಕೆ ₹ 35 ಸಾವಿರ, ಮೂರನೇ ಸ್ಥಾನಕ್ಕೆ ₹25 ಸಾವಿರ, ನಾಲ್ಕನೇ ಸ್ಥಾನಕ್ಕೆ ₹15 ಸಾವಿರ, ಐದನೇ ಸ್ಥಾನಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

17 ರಂದು ಅಖಿಲ ಭಾರತ ಮಟ್ಟದಲ್ಲಿ ಎರಡು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯುವುದು. ನೂತನ ಸಂಸದ ರಾಜಾ ಅಮರೇಶ್ವರ ನಾಯಕ ಚಾಲನೆ ನೀಡುವರು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ₹ 60 ಸಾವಿರ, ಎರಡನೇ ಸ್ಥಾನಕ್ಕೆ ₹45 ಸಾವಿರ, ಮೂರನೇ ಸ್ಥಾನಕ್ಕೆ ₹35 ಸಾವಿರ, ನಾಲ್ಕನೇ ಸ್ಥಾನಕ್ಕೆ ₹25 ಸಾವಿರ, ಐದನೇ ಸ್ಥಾನಕ್ಕೆ ₹20 ಸಾವಿರ, ಆರನೇ ಸ್ಥಾನಕ್ಕೆ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

18 ರಂದು 2.5 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯು ಅಖಿಲ ಭಾರತ ಮಟ್ಟದಲ್ಲಿ ಜರುಗಲಿದ್ದು, ಇದರಲ್ಲಿ ಕ್ರಮವಾಗಿ ₹70 ಸಾವಿರ, ₹55 ಸಾವಿರ, ₹45 ಸಾವಿರ, ₹35 ಸಾವಿರ, ₹25 ಸಾವಿರ,₹ 15 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಮುನ್ನೂರು ಕಾಪು ಸಮಾಜದ ಮುಖಂಡರಾದ ರಾಳ್ಳ ತಿಮ್ಮಾರೆಡ್ಡಿ, ಎಂ.ನಾಗರೆಡ್ಡಿ, ಜಿ.ಬಸವರಾಜ ರೆಡ್ಡಿ, ಪುಂಡ್ಲ ನರಸರೆಡ್ಡಿ, ನಿಂಬೆಕಾಯಿ ಶೇಖರರೆಡ್ಡಿ, ದೊಡ್ಡ ಮಲ್ಲೇಶಪ್ಪ, ಕೃಷ್ಣಾ ರೆಡ್ಡಿ, ಬಂಗಿ ನರಸರೆಡ್ಡಿ, ಪ್ರತಾಪರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಗುಡ್ಸಿ ನರಸರೆಡ್ಡಿ, ಕೆ. ರವಿ, ಮಹೇಂದ್ರರೆಡ್ಡಿ ಪತ್ರಿಕಾಗೋಷ್ಠಿ ಇದ್ದರು.

ಉಚಿತ ಸಾಮೂಹಿಕ ವಿವಾಹ, ಸಾಂಸ್ಕೃತಿಕ ಕಾರ್ಯಕ್ರಮ

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಜೂನ್ 13 ರಂದು ಲಕ್ಷ್ಮಮ್ಮದೇವಿ ದೇವಸ್ಥಾನದಲ್ಲಿ 25 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಮುನ್ನೂರು ಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ತಿಳಿಸಿದರು.

ಜೂನ್ 14ರಂದು ನಾಡಿನಾದ್ಯಂತ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿ ಸಮಾಜದ ಕುಲದೇವತೆ ಲಕ್ಷ್ಮಮ್ಮದೇವಿ ದೇವಸ್ಥಾನದಲ್ಲಿ ಹೋಮ ಕಾರ್ಯಕ್ರಮವನ್ನು ನಡೆಸಲಾಗುವುದು.

16ರಿಂದ ನಡೆಯಲಿರುವ ಮುಂಗಾರು ಸಾಂಸ್ಕೃತಿಕ ಹಬ್ಬದ ಅಂಗವಾಗಿ ದೇಶದ ವಿವಿಧ ಭಾಗಗಳಿಂದ 45 ಕಲಾ ತಂಡಗಳು ಭಾಗವಹಿಸಲಿವೆ. 17 ರಂದು ಸಂಜೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯುವುದು. ಅಲಂಕೃತಗೊಂಡ ಎತ್ತುಗಳ ಜೋಡಿಗಳು, ಗ್ರಾಮೀಣ ಶೈಲಿಯಲ್ಲಿ ಕಲಾರೂಪಕ, ವೀರಗಾಸೆ, ಕತ್ತಿವರೆಸೆ, ಡೊಳ್ಳು ಕುಣಿತ, ಕರಡಿ ಮಜಲು, ಜಗ್ಗುಳಿಗೆ ಮಜಲು, ನಾದಸ್ವರ ವಾದನ, ನಂದಿ ಧ್ವಜ, ಕಹಳೆ ವಾದನ, ಕೀಲುಕುದುರೆ ಕುಣಿತ, ಪಟ ಕುಣಿತ, ಪೂಜಾ ಕುಣಿತ, ಗಾರುಡಿಗೊಂಬೆ, ವೀರಭದ್ರ

18 ರಂದು ಮಧ್ಯಾಹ್ನ 3 ಗಂಟೆಗೆ ಲಕ್ಷ್ಮಮ್ಮ ದೇವಸ್ಥಾನದಲ್ಲಿ ಕಲ್ಲು ಗುಂಡು, ಉಸುಕನ ಚೀಲ ಎತ್ತುವ ಸ್ಪರ್ಧೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆಗೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಕುಸ್ತಿ ಬಲ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗುವುದು. ದೆಹಲಿ, ಪಂಜಾಬ್, ಆಂಧ್ರ-ಕರ್ನಾಟಕದ ಪೈಲ್ವಾನರು ಪಾಲ್ಗೊಳ್ಳುವರು.

ನೃತ್ಯ ರೂಪಕ: ಹಬ್ಬದ ಮೂರು ದಿನಗಳ ಸಂಜೆ ಸಮಯದಲ್ಲಿ ನೃತ್ಯ ರೂಪಕ ಹಮ್ಮಿಕೊಳ್ಳಲಾಗಿದೆ. ಜೂನ್‌ 16 ಮತ್ತು 17 ರಂದು ಸಂಜೆ 6 ಗಂಟೆಗೆ ನಗರದ ಮಹಿಳಾ ಸಮಾಜದ ಆವರಣದಲ್ಲಿ, ಜೂನ್‌ 18 ರಂದು ಸಂಜೆ 6 ಕ್ಕೆ ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಗಳು ನಡೆಯಲಿದೆ.

ಮೊದಲ ದಿನದ ನೃತ್ಯ ರೂಪಕವನ್ನು ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT