ರಾಯಚೂರು: ನಾರದರು ಯಾರು ಎನ್ನುವುದು ಪುರಾಣ ಬಲ್ಲವರಿಗೆ ಗೊತ್ತಿದೆ. ಆದರೆ, ತ್ರಿಲೋಕ ಸಂಚಾರಿ ಧ್ಯಾನಕ್ಕಾಗಿಯೇ ಇಲ್ಲಿಗೆ ಬಂದಿದ್ದರು ಎನ್ನುವುದು ಮಾತ್ರ ಬಹಳ ಜನರಿಗೆ ತಿಳಿದಿಲ್ಲ. ಹೌದು! ನಾರದ ಮುನಿ ರಾಯಚೂರು ಜಿಲ್ಲೆಯಲ್ಲಿ ಹರಿದಿರುವ ಕೃಷ್ಣೆಯ ಒಡಲಲ್ಲಿ ಇರುವ ನಡುಗಡ್ಡೆಯಲ್ಲಿ ತಪಸ್ಸು ಮಾಡಿ ಹೋಗಿರುವ ಕುರುಹು ‘ನಾರದಗಡ್ಡೆ’ ಸ್ವರೂಪದಲ್ಲಿ ನಮ್ಮ ಮಧ್ಯೆ ಉಳಿದುಕೊಂಡಿದೆ.

ಈ ನಾರದಗಡ್ಡೆ ಇರುವುದು ರಾಯಚೂರು ಜಿಲ್ಲಾ ಕೇಂದ್ರದಿಂದ 35 ಕಿಲೋಮೀಟರ್ ಅಂತರದಲ್ಲಿರುವ ಬುರ್ದಿಪಾಡ ಸಮೀಪ. ತೆಲಂಗಾಣದ ಮುಕ್ತಲ್ ತಾಲ್ಲೂಕು ಕೇಂದ್ರದಿಂದಲೂ 30 ಕಿ.ಮೀ ಅಂತರದಲ್ಲಿ ಇದೆ. ಇಲ್ಲಿಗೆ ಬಂದು ಹೋಗಲು ರಾಯಚೂರಿನಿಂದ ಸಾರಿಗೆ ಬಸ್ ಸೌಕರ್ಯವಿದೆ. ಅಲ್ಲಿಂದ ಕೃಷ್ಣಾನದಿಯ ದಡಕ್ಕೆ ಬಂದು ದೋಣಿ ಮೂಲಕ ನಡುಗಡ್ಡೆ ತಲುಪಬಹುದಾಗಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲೂ ನಾರದಮುನಿಯ ದೇವಸ್ಥಾನ ಇದೆ. ಆದರೆ, ರಾಯಚೂರಿನ ನಾರದಗಡ್ಡೆಯಲ್ಲಿ ನಾರದರ ಮೂರ್ತಿ ಇಲ್ಲ. ಇತ್ತೀಚೆಗೆ ಅಳವಡಿಸಿದ ಭಾವಚಿತ್ರವಿದೆ. ನಾರದರು ಪ್ರತಿಷ್ಠಾಪಿಸಿದರೆನ್ನಲಾದ ಶಿವಲಿಂಗ ಹಾಗೂ ಧ್ಯಾನ ಮಾಡಿದ ಸ್ಥಳ ಇದೆ.

ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದ್ದಾಗ ಎಂಜಿನ್ ಬೋಟ್ ಹಾಗೂ ನೀರಿನ ಪ್ರವಾಹ ಕಡಿಮೆ ಇರುವಾಗ ತೆಪ್ಪ ಬಳಸಿ ಭಕ್ತರು ನಡುಗಡ್ಡೆಗೆ ಹೋಗಿ ಬರುತ್ತಾರೆ. ನಾವಿಕರು ಆಚೆ ದಡ ತಲುಪಿಸಲು ಹಾಗೂ ಅಲ್ಲಿಂದ ಮರಳಿ ಕರೆತರಲು ಪ್ರತಿಯೊಬ್ಬರಿಂದ ₹100 ಪಡೆಯುತ್ತಾರೆ.

ದೋಣಿಯಲ್ಲಿ ಸಾಗಿ ನದಿ ತೀರ ತಲುಪಿದ ಮೇಲೆ ಐದು ನಿಮಿಷ ಕಾಲ್ನಡಿಗೆಯಲ್ಲಿ ಸಾಗಿದರೆ ಶಿಲಾಮಂಟಪದ ಅವವೇಷ ಕಾಣಸಿಗುತ್ತದೆ. ಸ್ವಲ್ಪ ಒಳಗೆ ಹೋದರೆ ನಾರದಗಡ್ಡೆಯ ಶ್ರೀ ಚೆನ್ನಬಸವೇಶ್ವರ ದೇವಾಲಯವೂ ಕಾಣ ಸಿಗುತ್ತದೆ. ನೆರೆಯ ತೆಲಂಗಾಣದ ಭಕ್ತರು ಸಹ ಗಾಲದ ನೆಂಟಂಪಾಡು, ತೆಲಂಗಾಣದ ಮಕ್ತಲ್ ತಾಲ್ಲೂಕಿನ ಮಕ್ಕಲದ ಮುಸಲಾಯಿಪಲ್ಲಿಯ ಮಾರ್ಗವಾಗಿ ಬಸ್ನಲ್ಲಿ ಬಂದು ಅವರೂ ಸಹ ನಮ್ಮಂತೆ ಆಕಡೆಯಿಂದ ಬೋಟ್ನಲ್ಲಿ ದೇವಾಲಯ ಇರುವ ಸ್ಥಳಕ್ಕೆ ತಲುಪುತ್ತಾರೆ.

ಮೊಸಳೆಗಳ ತಾಣ, ಪಕ್ಷಿಧಾಮ: ಕೃಷ್ಣಾ ನದಿಗೆ ತೆಲಂಗಾಣದಲ್ಲಿ ಕಟ್ಟಿರುವ ಜುರಾಲಾ ಜಲಾಶಯದ ಹಿನ್ನೀರು ದ್ವೀಪವನ್ನು ಆವರಿಸಿಕೊಂಡಿದೆ. ಪ್ರಸ್ತುತ ಈ ದ್ವೀಪ ಪ್ರದೇಶದಲ್ಲಿ ಫ್ಲೆಮಿಂಗೊ, ಕೊಕ್ಕರೆ, ನೀರು ಕಾಗೆ, ಬೆಳ್ಳಕ್ಕಿ ಸೇರಿದಂತೆ ಅನೇಕ ಬಗೆಯ ಹಕ್ಕಿಗಳು ಬೀಡು ಬಿಟ್ಟಿವೆ. ದೋಣಿಯಲ್ಲಿ ಸಾಗುವಾಗ ಬಂಡೆಗಳ ಮೇಲೆ ಕುಳಿತು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಒಂದೊಮ್ಮೆ ಗರಿ ಬಿಚ್ಚಿಕೊಂಡು ಆಕಾಶದಲ್ಲಿ ಹಾರಾಡಿ ಇನ್ನಷ್ಟು ಖುಷಿ ಕೊಡುತ್ತವೆ. ಒಟ್ಟಾರೆ ನಾರದಗಡ್ಡೆ ಮನ ಅರಳಿಸುವ ತಾಣವೂ ಆಗಿದೆ.

ನಾರದ ಗಡ್ಡೆಯ ಸುತ್ತಮುತ್ತ ಸಾಕಷ್ಟು ಮೊಸಳೆಗಳಿವೆ. ದೋಣಿಯಲ್ಲಿ ಸಾಗುವಾಗ ಸಹಜವಾಗಿಯೇ ಕಾಣುತ್ತವೆ. ದೋಣಿಯಲ್ಲಿ ಕುಳಿತಾಗ ನೀರಿನಲ್ಲಿ ಕೈಹಾಕಿ ಕುಳಿತುಕೊಳ್ಳುವುದು ಹೆಚ್ಚು ಅಪಾಯಕಾರಿ. ಇಲ್ಲಿಗೆ ಬರುವ ಭಕ್ತರು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ದೋಣಿಯಲ್ಲಿ ದಡ ಸೇರುತ್ತಾರೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾದ ಪ್ರವಾಸಿಗರು ಪ್ರತಿ ಶನಿವಾರ, ಭಾನುವಾರ ತಂಡಗಳಲ್ಲಿ ಆಗಮಿಸುತ್ತಾರೆ. ಇಲ್ಲಿ ಸರಿಯಾದ ಮೂಲಸೌಕರ್ಯ ಇರದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸುತ್ತಾರೆ.

ಬುರ್ದಿಪಾಡ ಗ್ರಾಮದಿಂದ ನಾರದಗಡ್ಡೆಗೆ ಸುಲಭವಾಗಿ ಹೋಗಲು ಸೇತುವೆಯೊಂದು ನಿರ್ಮಾಣವಾಗಬೇಕಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕ್ಷೇತ್ರ ಅಭಿವೃದ್ಧಿ ಆಗಬೇಕಿದೆ. ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಜನ ಸ್ಥಳದ ಮಹಿಮೆ ಅರಿತುಕೊಳ್ಳಲು ಸಾಧ್ಯವಾಗಲಿದೆ.

ಸರ್ಕಾರ ಏಕೆ ಸುಮ್ಮನಿದೆ?: ‘ಇತಿಹಾಸ ಪರಿಚಯಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಇದನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಬೇಕಿತ್ತು. ಕನಿಷ್ಠಪಕ್ಷ ನಾರದಗಡ್ಡೆಯಲ್ಲಿ ಮೂಲಸೌಕರ್ಯವನ್ನಾದರೂ ಒದಗಿಸುವ ಕೆಲಸ ಮಾಡಬೇಕು’ ಎಂದು ಡಿ.ರಾಮಪುರದ ಸಾಮಾಜಿಕ ಕಾರ್ಯಕರ್ತ ಕೆ.ರಂಗನಾಥ ಪೊಲೀಸ್ ಪಾಟೀಲ ಒತ್ತಾಯಿಸುತ್ತಾರೆ.

‘ನಾರದಗಡ್ಡೆ ಬಹಳ ಸುಂದರವಾದ ಪ್ರದೇಶವಾಗಿದೆ. ಕೇಂದ್ರ ಸರ್ಕಾರವಾದರೂ ಮುತುವರ್ಜಿ ವಹಿಸಿ ನಡುಗಡ್ಡೆಯನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಮಹಾರಾಷ್ಟ್ರದ ಸೋಲಾಪುರ, ತೆಲಂಗಾಣದ ರಾಜಮಂಡ್ರಿಯಿಂದ ಹಳೆಯ ವಿದ್ಯಾರ್ಥಿನಿಯರ ತಂಡದೊಂದಿಗೆ ಬಂದಿದ್ದ ಕಲಬುರಗಿಯ ಡಾ.ನೀಲಾವತಿ ಮನವಿ ಮಾಡುತ್ತಾರೆ.

‘ಇಷ್ಟು ವರ್ಷ ರಾಜ್ಯ ಸರ್ಕಾರ ಯಾಕೆ ಸುಮ್ಮನೆ ಕುಳಿತಿದೆ ಗೊತ್ತಾಗುತ್ತಿಲ್ಲ. ನಡುಗಡ್ಡೆಯಲ್ಲಿ ಉದ್ಯಾನ ನಿರ್ಮಿಸಬೇಕು. ಆಧುನಿಕವಾಗಿ ನಡುಗಡ್ಡೆಯನ್ನು ಅಭಿವೃದ್ಧಿಪಡಿಸಬೇಕು. ದ್ವೀಪ ಪ್ರದೇಶಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು‘ ಎಂದು ನಾರದಗಡ್ಡೆ ವೀಕ್ಷಿಸಿದ ತೆಲಂಗಾಣದ ರಾಜಮಂಡ್ರಿಯ ವೆಂಕಟಸತ್ಯವಲ್ಲಿ ಹೇಳುತ್ತಾರೆ.

‘ನಾರದಗಡ್ಡೆ ಸುತ್ತಮುತ್ತ ಇರುವ ಗ್ರಾಮಗಳ ಮುಖಂಡರು ರಾಯಚೂರಲ್ಲಿ ಕಾರ್ಯನಿರ್ವಹಿಸಿದ 10 ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಕೊಟ್ಟಿದ್ದೇವೆ. ಬೇಡಿಕೆಗೆ ಒತ್ತಾಯಿಸುತ್ತ 30 ವರ್ಷ ಕಳೆದಿವೆ. ಆದರೆ, ಜನಪ್ರತಿನಿಧಿಗಳ ಸ್ಪಂದನೆಯೂ ಇಲ್ಲ. ಹೀಗಾಗಿ ಧಾರ್ಮಿಕ ಪ್ರವಾಸಿ ತಾಣದ ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬಿದ್ದಿದ್ದೇವೆ‘ ಎಂದು ಬುರ್ದಿಪಾಡದ ಸಾಮಾಜಿಕ ಕಾರ್ಯಕರ್ತ ವೆಂಕಟರಾಮ ರೆಡ್ಡಿ ಬೇಸರ ವ್ಯಕ್ತಪಡಿಸುತ್ತಾರೆ.

‘ನಾರದಗಡ್ಡೆಗೆ ರಜಾ ದಿನಗಳಲ್ಲಿ ಕನಿಷ್ಠ 500ರಿಂದ ಸಾವಿರ ಜನ ಬಂದು ಹೋಗುತ್ತಾರೆ. ಇಲ್ಲಿಗೆ ಬಂದು ಹೋಗಲು ಬುರ್ದಿಪಾಡ ದಿಂದ ಸರಿಯಾದ ರಸ್ತೆ, ದಾರಿ ದೀಪಗಳಿಲ್ಲ. ನಾರದ ಮುನಿಗಳು ಹಾಗೂ ಶ್ರೀ ಚನ್ನಬಸವೇಶ್ವರ ಸ್ವಾಮಿಗಳ ಪಾದಸ್ಪರ್ಶದಿಂದ ಪಾವನವಾದ ನಡುಗಡ್ಡೆಯ ಅಭಿವೃದ್ದಿಗೆ ಒತ್ತುಕೊಡಬೇಕಿದೆ‘ ಎಂದು ನಾರಗದಡ್ಡೆಯ ಅರ್ಚಕ ಶೇಖರಯ್ಯ ಸ್ವಾಮಿ ಮನವಿ ಮಾಡುತ್ತಾರೆ

‘ಜುರಾಲಾ ಜಲಾಶಯದ ಹಿನ್ನೀರಲ್ಲೇ ನಾರದಗಡ್ಡೆ ಇರುವ ಕಾರಣ ಸ್ವಾಭಾವಿಕವಾಗಿ ಮೊಸಳೆಗಳು ನಡುಗಡ್ಡೆಗೆ ಬರುತ್ತವೆ. ಅಲ್ಲಿ ತಂತಿಬೇಲಿ ಹಾಕಲು, ಪ್ರವಾಸಿಗರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಪಾದಚಾರಿ ರಸ್ತೆ ನಿರ್ಮಿಸುವ ಪ್ರಸ್ತಾವ ಇದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ನಜೀರ್ಅಹಮ್ಮದ್ ಹೇಳುತ್ತಾರೆ.

ನಾರದಗಡ್ಡೆಯಲ್ಲಿ ಆಗಬೇಕಿರುವ ಕೆಲಸಗಳು

l ನಾರದ ಮುನಿಗಳ ಮೂರ್ತಿ ಪ್ರತಿಷ್ಠಾಪನೆ

l ಇತಿಹಾಸ ಬಿಂಬಿಸುವ ಪ್ರತಿಕೃತಿಗಳ ರಚನೆ

l ನಡುಗಡ್ಡೆ ಮಧ್ಯೆ ವೀಕ್ಷಣಾ ಗೋಪುರ ನಿರ್ಮಾಣ

l ಸರ್ಕಾರಿ ಜಾಗದಲ್ಲಿ ಉದ್ಯಾನ ನಿರ್ಮಿಸಬೇಕು.

l ಪ್ರವಾಸಿಗರ ಅನುಕೂಲಕ್ಕೆ ತೆರೆಯಬೇಕು ಉಪಾಹಾರ ಕೇಂದ್ರ

l ಮೊಸರು, ಮಜ್ಜಿಗೆ ಮಾರಾಟಕ್ಕೆ ವ್ಯವಸ್ಥೆ

l ನದಿ ತೀರದಿಂದ ದೇವಸ್ಥಾನದ ವರೆಗೆ ಅಚ್ಚುಕಟ್ಟಾದ ವಾಕಿಂಗ್ ಪಾತ್

l ವಾಕಿಂಗ್ ಪಾತ್ ಸುತ್ತ ವಿದ್ಯುತ್ ದೀಪಗಳ ಅಳವಡಿಕೆ

l ವಿದೇಶಿ ಹಕ್ಕಿಗಳ ವೀಕ್ಷಣೆಗೆ ಸುಸಜ್ಜಿತ ವ್ಯವಸ್ಥೆ

l ನಡುಗಡ್ಡೆಯಲ್ಲಿ ಪ್ಲಾಸ್ಟಿಕ್, ಜಾನುವಾರುಗಳ ನಿಷೇಧ

l 108 ಎಕರೆ ಪ್ರದೇಶದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಬೇಕು

ಪ್ರಾಯಶ್ಚಿತ್ತಕ್ಕೆ ಬಂದ ನಾರದರು

ಶಿವ, ಪಾರ್ವತಿಯರು ಆಯೋಜಿಸಿದ್ದ ಕೋಟಿ ಜಪ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾರದಮುನಿ ತೆರಳಿದ್ದಾಗ ಶಿವಭಕ್ತರೊಬ್ಬರಿಗೆ ಪಾದ ತಾಗಿತು. ನಾರದಮುನಿಯು ಕ್ಷಮೆಯಾಚಿಸದೇ ಮುಂದೆ ಸಾಗಿದಾಗ ಶಿವಭಕ್ತನೊಬ್ಬ ನಾರದಮುನಿಗೆ ಶಾಪ ಕೊಟ್ಟ. ನಾರದರು ಇದರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನದಿ ಮಧ್ಯೆ ಇರುವ ದ್ವೀಪದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಪಾಪದಿಂದ ವಿಮುಕ್ತರಾದರು ಎಂದು ನಾರದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ

ನಾರದಗಡ್ಡೆಯಲ್ಲಿ ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಾದ ಐದು ದಿನಗಳ ನಂತರ ರಥೋತ್ಸವ ನಡೆಯುತ್ತದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಚನ್ನಬಸವೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇದೇ ಸಂದರ್ಭದಲ್ಲಿ ನಾರದ ಮುನಿಗಳಿಗೂ ಪೂಜೆ ಸಲ್ಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.