ರಾಯಚೂರು: ನರೇಗಾದಲ್ಲಿ ಕಳಪೆ ಕಾಮಗಾರಿ ಕೈಗೊಂಡು, ಕೆಲವು ಕಡೆ ಕಾಮಗಾರಿ ಮಾಡದೇ ಹಣ ಎತ್ತಿದ ಆರೋಪದ ಮೇಲೆ 33 ಗ್ರಾ.ಪಂ ಪಿಡಿಒಗಳು ಅಮಾನತುಗೊಂಡ ಪ್ರಕರಣ ಇನ್ನೂ ಮಾಸಿಲ್ಲ. ಜಿ.ಪಂ ಅಧಿಕಾರಿಗಳು ನರೇಗಾ ಕಾಮಗಾರಿ ಸ್ಥಳದಲ್ಲಿ ಸರಿಯಾಗಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡದಿರುವುದು ಬಡ ಕೂಲಿ ಕಾರ್ಮಿಕರನ್ನು ಮೃತ್ಯುಕೂಪಕ್ಕೆ ತಳ್ಳುವಂತೆ ಮಾಡಿದೆ.

ಹವಾನಿಯಂತ್ರಿಕ ಕೊಠಡಿಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ಕೆಲಸದ ಸಮಯ ಬದಲಾಗಿದೆ. ಆದರೆ, ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಬಿರು ಬಿಸಿಲಲ್ಲಿ ಕೆಲಸ ಮಾಡಿ ದೈಹಿಕವಾಗಿ ಬಳಲುತ್ತಿದ್ದರೂ ಸಮಯ ಬದಲಾಗಿಲ್ಲ.

ಜಿಲ್ಲೆಯಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶವಿದ್ದರೂ ಎಲ್ಲಿಯೂ ಜಿ.ಪಂ ಅಧಿಕಾರಿಗಳು ನೆರಳಿನ ವ್ಯವಸ್ಥೆಗೆ ಕ್ರಮಕೈಗೊಂಡಿಲ್ಲ. ಎಲ್ಲದಕ್ಕೂ ಪಿಡಿಒಗಳತ್ತ ಬೊಟ್ಟು ಮಾಡುತ್ತಿದ್ದಾರೆ. ನರೇಗಾ ಕೆಲಸ ಮಾಡುವಾಗಲೇ ಬಿಸಿಲಿನಲ್ಲಿ ಕುಸಿದು ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡರೂ ಅಧಿಕಾರಿಗಳು ಗಂಭೀರವಾಗಿಲ್ಲ.

ಜಿಲ್ಲಾಡಳಿತ ಹಾಗೂ ಜಿ.ಪಂ ಮಧ್ಯೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾಧಿಕಾರಿ ಅವರು ಸಾರ್ವಜನಿಕರು ಸುಡು ಬಿಸಿಲಿನಿಂದ ರಕ್ಷಣೆ ಪಡೆಯಲು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ರವರೆಗೆ ಮನೆಯಿಂದ ಹೊರಗೆ ಬರದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಆದೇಶಕ್ಕೆ ಬೆಲೆ ಕೊಡದೇ ಕೂಲಿಕಾರ್ಮಿಕರನ್ನು ಬಿಸಿಲಲ್ಲಿ ದುಡಿಸಿಕೊಳ್ಳುತ್ತಿದ್ದಾರೆ.

‘ನರೇಗಾ ಕಾರ್ಮಿಕರು ನೆರಳು ಹಾಗೂ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಕಾರ್ಮಿಕರು ಮನವಿ ಮಾಡಿದರೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ನರೇಗಾ ಕಾಮಗಾರಿಯ ಮೇಲ್ವಿಚಾರಣೆಯೂ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಬಡ ಕೂಲಿಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಉಪಾಧ್ಯಕ್ಷ ರಂಗಪ್ಪ ಯಾಪಲದಿನ್ನಿ ಬೇಸರ ವ್ಯಕ್ತಪಡಿಸುತ್ತಾರೆ.

ಮಸ್ಕಿ ತಾಲ್ಲೂಕಿನ ವಟಗಲ್ ಹಾಗೂ ಅಮಿನಗಡದಲ್ಲಿ ಅಧಿಕಾರಿಗಳು ನೆರಳಿನ ವ್ಯವಸ್ಥೆ ಮಾಡದ್ದಕ್ಕೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಆದರೆ, ಅಧಿಕಾರಿಗಳು ಗ್ರಾಮಸ್ಥರು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಸೌಲಭ್ಯ ಕೇಳಿದವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾರ್ಮಿಕರ ಧ್ವನಿ ಹತ್ತಿಕ್ಕುವ ಕೆಲಸ ಮಾಡಿದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಿಸಲು ಸೂಚನೆ

‘ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಪಂಚಾಯಿತಿಯಿಂದ ಕಡ್ಡಾಯವಾಗಿ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಹೇಳುತ್ತಾರೆ.

ಅಧಿಕಾರಿಗಳು ಕೊಡುವ ಹೇಳಿಕೆಗೂ, ವಾಸ್ತವ ಅಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಿಸಿಲಿನಿಂದ ಪ್ರಾಣ ಕಳೆದುಕೊಂಡ ಕೂಲಿಯವರ ವಿಷಯದಲ್ಲಿ ಮಾನವ ಹಕ್ಕುಗಳ ಆಯೋಗವಾದರೂ ಗಂಭೀರವಾಗಿದೆಯೇ ಎಂದು ನರೇಗಾ ಕೂಲಿಕಾರ್ಮಿಕರು ಪಶ್ನಿಸಿದ್ದಾರೆ.

ನಾಗರಾಜ ಗೊರೆಬಾಳ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ, ಪ್ರಕಾಶ ಮಸ್ಕಿ, ಕೃಷ್ಣಾ ಸಿರವಾರ, ಶರಣಪ್ಪ ಆನೆಹೊಸೂರ, ಮಂಜುನಾಥ ಬಳ್ಳಾರಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-32-522800052

‘ಬಡ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲ’

ರಾಯಚೂರು ಜಿಲ್ಲೆಯಲ್ಲಿ ಬಡ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಇಬ್ಬರು ನರೇಗಾ ಕೂಲಿಕಾರ್ಮಿಕರು ಮೃತಪಟ್ಟರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಗಂಭೀರವಾಗಿಲ್ಲ. ಇನ್ನೂ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ಬಿಸಿಲಲ್ಲಿ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿಸಬೇಕಾದರೆ ಹಲವು ಮಗ್ಗಲುಗಳಲ್ಲಿ ಪರೀಕ್ಷೆ ಹಾಗೂ ವಿಚಾರಣೆ ನಡೆಸಬೇಕಾಗುತ್ತದೆ. ವರದಿ ಏನೇ ಬಂದರೂ ಸುಲಭವಾಗಿ ಒಪ್ಪಿಕೊಳ್ಳಲಾಗದು ಎಂದು ಕೆಲವರು ಮೃತರ ಕುಟುಂಬದವರ ದಾರಿ ತಪ್ಪಿಸಿದ್ದಾರೆ. ಹೀಗಾಗಿ ಕುಟುಂಬದ ಸದಸ್ಯರು ಮೃತರ ಮರಣೋತ್ತರ ಪರೀಕ್ಷೆಗೆ ಅವಕಾಶ ಕೊಡಲಿಲ್ಲ. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರಿಗಳು ತಮ್ಮನ್ನು ತಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾಪಲದಿನ್ನಿ ಗ್ರಾಮಸ್ಥರು ದೂರುತ್ತಾರೆ.

‘ಬಿಸಿಲಲ್ಲಿ ವಿಶ್ರಾಂತಿಗೆ ಅವಕಾಶ ಇಲ್ಲ’

ಮಾನ್ವಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಾಲಾ ಹೂಳೆತ್ತುವ, ಕೆರೆಯ ಹೂಳೆತ್ತುವ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಕಾಮಗಾರಿ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಮಾಡಿಲ್ಲ ಎಂದು ಕೂಲಿಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂಬಳತ್ತಿ ಗ್ರಾಮದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಮಾಡಿಲ್ಲ. ಕೆಲಸದ ಮಧ್ಯೆ ಆಯಾಸವಾದಾಗ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೂಲಿಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಕುಡಿಯುವ ನೀರು ಪೂರೈಸಲು ಕ್ಯಾನ್ಗಳನ್ನು ಮೇಟಿಗಳಿಗೆ ಒದಗಿಸಲಾಗಿದೆ. ಇನ್ನು ಮುಂದೆ ಬೆಳಿಗ್ಗೆ 6ಗಂಟೆಯಿಂದ ಕಾಮಗಾರಿ ಕೆಲಸ ಆರಂಭಿಸಲು ಸೂಚಿಸಲಾಗುವುದು’ ಎಂದು ತಾ.ಪಂ ಇಒ ಖಾಲೀದ್ ಅಹ್ಮದ್ ಹೇಳುತ್ತಾರೆ.

‘ಕಾರ್ಮಿಕರ ಕೈಗೆ ಖಾಲಿ ಕ್ಯಾನ್’

ಲಿಂಗಸುಗೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕೆಲಸಗಳು ನಡೆದಿವೆ. ಕಳೆದ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾಡಿದ ಕೆಲಸದ ಬಾಕಿ ವೇತನ ಈಗ ಬಿಡುಗಡೆಯಾಗುತ್ತಿದೆ.

‘ಬೇಸಿಗೆ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಇರುವಂತೆ ನರೇಗಾ ಕಾರ್ಮಿಕರ ಕೆಲಸದ ಸಮಯ ಬದಲಾಗಬೇಕು. ಕೆಲಸದ ಸ್ಥಳದಲ್ಲಿ ಯಾವುದೇ ನೆರಳಿನ ವ್ಯವಸ್ಥೆ ಮಾಡಿಲ್ಲ, ಪಂಚಾಯಿತಿಯವರು ನೀರಿನ ಖಾಲಿ ಕ್ಯಾನ್ ನೀಡಿದ್ದಾರೆ. ನಾವೇ ಮನೆಯಿಂದ ನೀರು ಹೊತ್ತ ತರುತ್ತೇವೆ’ ಎಂದು ಲಿಂಗಸುಗೂರು ತಾಲ್ಲೂಕಿನ ಐದನಾಳ ಗ್ರಾಮದ ಕೂಲಿ ಕೆಲಸಗಾರ್ತಿ ರಾಧಾ ಹೇಳುತ್ತಾರೆ.

‘ಹಲ್ಕಾವಟಗಿ ಹಾಗೂ ಚಿತ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನರೇಗಾ ಕೆಲಸಗಳು ನಡೆದಿವೆ. ಬೇಸಿಗೆ ಹಿನ್ನೆಲೆ ಕೆಲಸದ ಸಮಯ ಬದಲಾವಣೆ ಆದೇಶ ಇನ್ನೂ ನಮಗೆ ಬಂದಿಲ್ಲ. ಮೇಲಧಿಕಾರಿಗಳ ಆದೇಶ ಬಂದರೆ ತಕ್ಷಣ ಪರಿಪಾಲನೆ ಮಾಡುತ್ತೇವೆ ’ ಎನ್ನುತ್ತಾರೆ ಪಿಡಿಒ ಶಶಿಕಲಾ ಪಾಟೀಲ.

ಸಿಂಧನೂರು ತಾಲ್ಲೂಕಿನ ಚೆನ್ನಳ್ಳಿ ಪಂಚಾಯಿತಿಯ ಚೆನ್ನಳ್ಳಿ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಮಳೆ ನೀರು ಇಂಗುವ ಉದ್ದೇಶದಿಂದ ಅಲ್ಲಲ್ಲಿ ಉದ್ದನೆಯ ಗುಂಡಿಗಳನ್ನು ತೋಡಲಾಗುತ್ತಿದೆ, ಇಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಗುಡ್ಡದ ಝಳದಲ್ಲಿ ಕೆಲಸ ಮಾಡಬೇಕಾಗಿದೆ. ಕಾರ್ಮಿಕರು ನೀರು, ನೆಳಿನ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಇತ್ತ ಕಿಂಚಿತ್ತೂ ಗಮನಹರಿಸಿಲ್ಲ.

‘ಸರ್ಕಾರದ ತಾರತಮ್ಯ ನೀತಿ’

ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಯಾವುದೇ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಮಾಡಿರುವುದು ಕಂಡುಬಂದಿಲ್ಲ. ಕುಡಿಯುವ ನೀರು ವ್ಯವಸ್ಥೆ ಅಲ್ಲಲ್ಲಿ ಮಾಡಿದ್ದಾರೆ. ಆದರೆ, ಅದು ಸಾಕಾಗದ ಹಿನ್ನೆಲೆ ಕಾರ್ಮಿಕರು ಬಾಟಲ್ ಮತ್ತು ತಾವೇ 20 ಲೀಟರ್ ಕ್ಯಾನ್ಗಳಲ್ಲಿ ಸ್ವತ ಕಾರ್ಮಿಕರೇ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.

‘ಅತಿಯಾದ ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಉತ್ತರ ಕರ್ನಾಟಕದ ಸರ್ಕಾರಿ ನೌಕರರ ಸೇವೆ ಸಮಯ ಬದಲಾವಣೆ ಮಾಡಿದ ಸರ್ಕಾರಕ್ಕೆ 43 ಡಿಗ್ರಿ ಬಿಸಿಲಿನ ತಾಪಮಾನದಲ್ಲಿ ಕೆಲಸ ಮಾಡುವ ನರೇಗಾ ಕೂಲಿ ಕಾರ್ಮಿಕರು ಕಾಣುತ್ತಿಲ್ಲ’ ಎಂದು ಕೂಲಿ ಕಾರ್ಮಿಕ ಮೌಲಾಲಿ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.