ಬುಧವಾರ, ನವೆಂಬರ್ 13, 2019
23 °C

ರಾಯಚೂರು| ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿ ಸಾವು

Published:
Updated:
Prajavani

ಕವಿತಾಳ: ವೈದ್ಯರಿಲ್ಲದ ಕಾರಣ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟ ಘಟನೆ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಪಟ್ಟಣದ ನಿವಾಸಿ ರಂಗಪ್ಪ ಉಪ್ಪಾರ (75) ಮೃತ ವ್ಯಕ್ತಿ.

ಉಸಿರಾಟ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ತಡರಾತ್ರಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರು ಲಭ್ಯವಿರಲಿಲ್ಲ ಎನ್ನಲಾಗಿದೆ.

ಆರೋಗ್ಯ ಕೇಂದ್ರದಲ್ಲಿನ ನರ್ಸ್‌ ರೋಗಿಗೆ ಚುಚ್ಚು ಮದ್ದು ನೀಡಿ, ಹೆಚ್ಚಿನ ಚಿಕಿತ್ಸೆಗೆ ಲಿಂಗಸುಗೂರು ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಖಾಸಗಿ ವೈದ್ಯರಿಗೆ ಕರೆ ಮಾಡಿ ರೋಗಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಆಸ್ಪತ್ರೆಗೆ ಬರುವಷ್ಟರಲ್ಲಿಯೇ ರಂಗಪ್ಪ ಅವರು ಮೃತಪಟ್ಟಿದ್ದಾರೆ.

ಸಚಿವರ ಆಪ್ತ ಸಹಾಯಕ ಭೇಟಿ:

ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಬಸವರಾಜ ಹಣಿಗಿ ಬುಧವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಎರವಲು ಸೇವೆಯಲ್ಲಿದ್ದ ಡಾ.ಅಮೃತ ರಾಠೋಡ್‍ ಅವರನ್ನು ಈಚೆಗೆ ಕೇಂದ್ರ ಸ್ಥಾನಕ್ಕೆ ಮರು ನಿಯೋಜನೆ ಮಾಡಲಾಗಿದೆ. 15 ದಿನಗಳ ಹಿಂದೆ ಇಲ್ಲಿಗೆ ವರ್ಗಾವಣೆಯಾಗಿ ಬಂದ ಡಾ.ನಂದಕುಮಾರ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಸಾರ್ವಜನಿಕರು ದೂರಿದರು.

ಪಟ್ಟಣ ಪಂಚಾಯಿತಿ ಸದಸ್ಯ ಎಚ್‍.ಬಸವರಾಜ, ಕಾಜಾಪಾಶಾ ಬ್ಯಾಗವಾಟ್, ಸಂಘಟನೆ ಮುಖಂಡ ರುಕ್ಮುದ್ಧೀನ್‍, ಶ್ರೀಕಾಂತ ಭೋವಿ, ರಫಿ ಒಂಟಿಬಂಡಿ, ಮಕ್ದುಂ ಇದ್ದರು.

ಪ್ರತಿಕ್ರಿಯಿಸಿ (+)