ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಪುರ ಸ್ಥಳಾಂತರಿಸದಿದ್ದರೆ ಡಿಸಿ ಕಚೇರಿಯಲ್ಲೇ ವಾಸ

ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರಿಂದ ಎಚ್ಚರಿಕೆ
Last Updated 15 ಸೆಪ್ಟೆಂಬರ್ 2022, 13:12 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಸೀದಿಪುರದಲ್ಲಿ ಪರಿಶಿಷ್ಟರ ಮನೆಗಳು ಪ್ರತಿವರ್ಷವೂ ಜಲಾವೃತವಾಗುತ್ತಿದ್ದು, ಗ್ರಾಮದ ಸ್ಥಳಾಂತರಕ್ಕೆ ಕ್ರಮ ವಹಿಸದಿದ್ದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮಸ್ಥರು ವಾಸ್ತವ್ಯ ಉಳಿದು ಪ್ರತಿಭಟನೆ ಆರಂಭಿಸಲಾಗುವುದು ಎಂದು ಗ್ರಾಮಸ್ಥರು ಗುರುವಾರ ಎಚ್ಚರಿಕೆ ನೀಡಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆದಿದೆ. ಆದರೆ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಹೇಳಿದ್ದ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಮುಂಖಡ ಅಂಬಣ್ಣ ಆರೋಲಿಕರ್ ಮಾತನಾಡಿ, ಮಸೀದಿಪುರ ಗ್ರಾಮದಲ್ಲಿ ಸರ್ವೇ ನಂಬರ್ 3 ರಲ್ಲಿ ಲಭ್ಯವಿರುವ ಪ್ರದೇಶಕ್ಕೆ ದಲಿತ ಸಮುದಾಯದ ಕೇರಿಯನ್ನು ಸ್ಥಳಾಂತರ ಮಾಡಬೇಕು ಒತ್ತಾಯಿಸಿದರು.

10 ವರ್ಷದಿಂದ ಪರಿಶಿಷ್ಟ ಜಾತಿ ಜನರು ಮಳೆಗಾಲದಲ್ಲಿ ನರಕಯಾತನೆ ಅನುಭವಿಸಿದ್ದಾರೆ. ಬಡವರ ಕೇರಿಯು ತಗ್ಗು ಪ್ರದೇಶದಲ್ಲಿ ಇದ್ದು ಗ್ರಾಮದ ಎಲ್ಲ ಚರಂಡಿ ನೀರು ಬಂದು ಮನೆಗಳಿಗೆ ನುಗ್ಗಿ ದುರ್ವಾಸನೆ ಬರುತ್ತಿದೆ. 10 ರಿಂದ 15 ಜನರು ವಿವಿಧ ಕಾಯಿಲೆಗೆ ತುತ್ತಾಗಿಗ್ದಾರೆ. ವೈದ್ಯರು ಈ ಪ್ರದೇಶದಲ್ಲಿ ವಾಸಿಸದಂತ ಸಲಹೆ ನೀಡಿದ್ದಾರೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

ಶಾಂತಕುಮಾರ ಹೋನ್ನಟಗಿ ಮಾತನಾಡಿ, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಸತ್ಯಾಗ್ರಹ ಮಾಡುತ್ತೆವೆ ಎಂದು ತಿಳಿಸಿದರು.

ಜಿಲ್ಲಾ ಅಧ್ಯಕ್ಷ ಜೆ.ಅಬ್ರಾಹಂ ಹೊನ್ನಟಗಿ, ಹನುಮಂತಪ್ಪ ಕಾಕರಗಲ್‌, ರಾಘವೇಂದ್ರ ಬೋರೆಡ್ಡಿ, ಅನಿಲಕುಮಾರ, ನಾಗಮ್ಮ, ಚನ್ನಪ್ಪ ಬೂದಿನಾಳ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT