ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆಯಲ್ಲೂ ನವರಾತ್ರಿ ಸಂಭ್ರಮ ಇಂದಿನಿಂದ

ನಾಡದೇವಿ ಆರಾಧನೆಗೆ ಭಕ್ತರಿಂದ ಪೂರ್ವ ತಯಾರಿ
Last Updated 6 ಅಕ್ಟೋಬರ್ 2021, 13:49 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ದೇವಿ ಆರಾಧನೆಗೆ ಪೂರ್ವಸಿದ್ದತೆ ಮಾಡಿಕೊಂಡಿರುವ ಭಕ್ತರು ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ವೇದಿಕೆಗಳು ಸಜ್ಜಾಗಿವೆ.

ಅಂಭಾಭವಾನಿ, ಭುವನೇಶ್ವರಿ, ದುರ್ಗಾದೇವಿ, ಮಾರಿಕಾಂಬಾ ದೇವಿ ಸೇರಿದಂತೆ ಶಕ್ತಿದೇವತೆಗಳಿರುವ ದೇವಸ್ಥಾನಗಳಲ್ಲಿ ನವರಾತ್ರಿಯುದ್ದಕ್ಕೂ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುವುದು ಸಂಪ್ರದಾಯ. ಅಲ್ಲದೆ, ಕೆಲವು ಬಡಾವಣೆ ಪ್ರಮುಖ ಮಾರ್ಗಗಳಲ್ಲಿ ನಾಡದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸುವುದಕ್ಕಾಗಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ವಿದ್ಯುತ್‌ ದೀಪಾಲಂಕಾರವೂ ಗಮನ ಸೆಳೆಯುತ್ತಿದೆ. ಅಕ್ಟೋಬರ್‌ 7 ರಂದು ನಾಡದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.

ಕೋವಿಡ್‌ ಮಹಾಮಾರಿ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನವರಾತ್ರಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಇದೀಗ ಕೋವಿಡ್‌ ಮಾರ್ಗಸೂಚಿ ಜಾರಿಯಲ್ಲಿದ್ದರೂ ಧಾರ್ಮಿಕ ಕ್ರಿಯೆಗಳನ್ನು ಆಚರಿಸುವುದಕ್ಕೆ ಸಡಿಲಿಕೆ ನೀಡಲಾಗಿದೆ. ಹೀಗಾಗಿ ಮಹಾನವಮಿ ಹಬ್ಬದ ನಿಮಿತ್ತ ಎಲ್ಲೆಡೆಯಲ್ಲೂ ಸಂತಸ, ಸಂಭ್ರಮದ ವಾತಾವರಣ ಕಂಡುಬರುತ್ತಿದೆ.

ಮುಖ್ಯವಾಗಿ ಈ ವರ್ಷ ಮುಂಗಾರು ಮಳೆ ಸಮರ್ಪಕವಾಗಿ ಸುರಿದಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ಕೋವಿಡ್‌ ಸಂಕಷ್ಟದಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ. ಮುಂಗಾರು ಬೆಳೆಗಳು ಚೆನ್ನಾಗಿ ಬೆಳೆದು ಉತ್ತಮ ಫಸಲು ಕೈಸೇರುತ್ತದೆ ಎನ್ನುವ ನಿರೀಕ್ಷೆಯಿಂದ ಎಲ್ಲರೂ ಹಬ್ಬವನ್ನು ಉಲ್ಲಾಸದಿಂದ ಆಚರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಹಬ್ಬದ ಸಂತೆಗಾಗಿ ನಗರ ಹಾಗೂ ಪಟ್ಟಣಗಳಲ್ಲಿ ಮುಗಿಬೀಳುತ್ತರುವ ದೃಶ್ಯ ಸಾಮಾನ್ಯವಾಗಿದೆ. ಬಟ್ಟೆ ಅಂಗಡಿಗಳು, ಆಭರಣದ ಮಳಿಗೆಗಳು, ವಾಹನಗಳ ಮಳಿಗೆ, ಎಲೆಕ್ಟ್ರಾನಿಕ್‌ ಉಪಕರಣಗಳ ಮಳಿಗೆ ಹಾಗೂ ಮಾಲ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ.

ವೇದಿಕೆಗಳು ನಿರ್ಮಾಣ: ರಾಯಚೂರು ನಗರದ ಶಕ್ತಿದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆಚರಿಸುವುದಕ್ಕೆ ವೇದಿಕೆಗಳನ್ನು ಸಿದ್ಧಗೊಳಿಸುತ್ತಿರುವುದು ಬುಧವಾರ ಕಂಡುಬಂತು.

ಟ್ಯಾಂಕ್‌ಬಂಡ್‌ ಮಾರ್ಗದಲ್ಲಿರುವ ಲಕ್ಷ್ಮೀ ದೇವಸ್ಥಾನ, ಅಂಬಾಭವಾನಿ ದೇವಸ್ಥಾ, ಸಿಟಿ ಟಾಕೀಸ್‌ ಪಕ್ಕದ ಮಾರೆಮ್ಮ ದೇವಸ್ಥಾನ, ಜವಾಹರ ನಗರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಉಪ್ಪಾರವಾಡಿ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ ಬಳಿ ಶಾಮಿಯಾನ್‌ ಹಾಕಲಾಗಿದೆ. ವರ್ಣವೈವಿಧ್ಯ ವಿದ್ಯುತ್‌ ದೀಪಗಳಿಂದ ದೇವಸ್ಥಾನಗಳಿಗೆ ಅಲಂಕಾರ ಮಾಡಲಾಗಿದೆ. ನವರಾತ್ರಿಯುದ್ದಕ್ಕೂ ಹಲವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಗಳು ನಡೆಯಲಿವೆ.

ಮುಂಗಲಿಪ್ರಾಣದೇವರ ದೇವಸ್ಥಾನದ ಮಾರ್ಗದಲ್ಲಿ, ಭಂಗಿಕುಂಟಾ, ಸಿಟಿ ಸಾಕೀಜ್‌, ಜ್ಯೋತಿ ಕಾಲೋನಿಗಳಲ್ಲಿ ದೇವಿಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT