ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ರಂಗಮಂದಿರ ಶಿಥಿಲ: ನೆಲಮಹಡಿಯಲ್ಲಿ ಸಂಗ್ರಹವಾಗುತ್ತಿರುವ ಮಳೆನೀರು

Last Updated 27 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆಗೆ ಉತ್ತಮ ತಾಣವಾಗಿರುವ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರವು ಅವ್ಯವಸ್ಥೆಯ ಆಗರವಾಗಿದೆ!

ಕಟ್ಟಡದ ಮುಂಭಾಗ ಮಾತ್ರ ಹೊಳಪು ಇದೆ. ಒಳಾಂಗಣ ಹಾಗೂ ಹಿಂಭಾಗದಲ್ಲಿ ಶಿಥಿಲಾವಸ್ಥೆಯತ್ತ ಸಾಗುತ್ತಿದೆ. ನಿರ್ವಹಣೆ ಸಮರ್ಪಕವಾಗಿಲ್ಲ. ಅನುದಾನದ ನಿರೀಕ್ಷೆಯಲ್ಲಿ ಪೋಷಣೆ ಆಗುತ್ತಾ ಬಂದಿರುವ ಸಮಸ್ಯೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತಾತ್ಕಾಲಿಕ ದುರಸ್ತಿ ಕ್ರಮವೂ ಆಗದಿರುವುದಕ್ಕೆ ಕಟ್ಟಡದ ಹಿಂಭಾಗದಲ್ಲಿನ ಗೋಡೆಗಳಿಂದ ಸಿಮೆಂಟ್‌ ಉದುರಿಕೊಳ್ಳುತ್ತಿದೆ.

ರಂಗಮಂದಿರ ವೇದಿಕೆಯಡಿ ನಿರ್ಮಿಸಿರುವ ನೆಲಮಹಡಿಗಳ ಉದ್ದೇಶವೇ ಈಡೇರಿಲ್ಲ. ಇದುವರೆಗೂ ಆ ಕೋಣೆಗಳು ಬಳಕೆಗೆ ಯೋಗ್ಯವಿಲ್ಲದೆ ಹಾಳುಬಿದ್ದಿವೆ. ಪ್ರತಿವರ್ಷ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ಕಲಾವಿದರು ತಾಲೀಮು ನಡೆಸುವುದಕ್ಕೆ ಈ ಕೋಣೆಗಳನ್ನು ನಿರ್ಮಿಸಲಾಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ನೆಲಮಹಡಿ ಕೋಣೆಗಳಿಗೆ ಹೋಗುವುದಕ್ಕೆ ಕಟ್ಟಡ ಹಿಂಭಾಗದಲ್ಲಿ ಬಾಗಿಲಿದೆ. ಅದು ಯಾವಾಗಲೂ ಮುಚ್ಚಿಕೊಂಡಿರುತ್ತದೆ.

ನೆಲಮಹಡಿ ಕೋಣೆಯ ಕಿಟಕಿಗಳನ್ನು ಭೂಮಿಗೆ ಸಮತಟ್ಟಾಗಿ ಬಿಡಲಾಗಿದೆ. ಇದರಿಂದ ಮಳೆನೀರು ಸರಾಗವಾಗಿ ಕಿಟಕಿಗಳ ಮೂಲಕ ಭರ್ತಿಯಾಗುತ್ತಿದ್ದು, ಅಲ್ಲಿಂದ ಪಂಪ್‌ಸೆಟ್‌ ಅಳವಡಿಸಿ ಸ್ವಚ್ಛ ಮಾಡಿದರೂ, ಅನುಕೂಲ ಆಗುತ್ತಿಲ್ಲ. ಮೂರು ವರ್ಷಗಳ ಹಿಂದೆ ರಂಗಮಂದಿರ ನವೀಕರಣ ಕಾಮಗಾರಿ ಆಗಿದೆ. ಅಂದು ಅಳವಡಿಸಿದ್ದ ತಾಂತ್ರಿಕ ಸೌಲಭ್ಯಗಳೆಲ್ಲವೂ ಹಾಳು ಬೀಳುತ್ತಿವೆ. ಧ್ವನಿವರ್ಧಕ ವ್ಯವಸ್ಥೆ, ಬೆಳಕಿನ ವ್ಯವಸ್ಥೆಗಳೆಲ್ಲವೂ ಅವ್ಯವಸ್ಥೆಯಿಂದ ಕೂಡಿವೆ. ಆಸನಗಳು ಕಿತ್ತುಹೋಗಿವೆ.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಮಂದಿರ ನಿರ್ವಹಣೆ ಮಾಡುತ್ತಿದೆ. ಬಿಡುವಿಲ್ಲದೆ ಕಾರ್ಯಕ್ರಮಗಳು ಆಯೋಜನೆ ಆಗುತ್ತಿದ್ದರೂ ವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಂದ ಆಗಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರದ್ದು. ಮುಖ್ಯವಾಗಿ ಜಿಲ್ಲೆಯ ರಂಗಭೂಮಿ ಕಲಾವಿದರು, ಸಂಗೀತ ಕಲಾವಿದರು ಬದುಕು ಕಟ್ಟಿಕೊಳ್ಳಲು ಪರೋಕ್ಷವಾಗಿ ಕಾರಣವಾಗಿರುವ ರಂಗಮಂದಿರವು ಅವ್ಯವಸ್ಥೆಯತ್ತ ಸಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಇಲಾಖೆಗೆ ಬರುವ ಪ್ರತಿ ಅಧಿಕಾರಿಗಳಿಗೂ ರಂಗಮಂದಿರ ಅವ್ಯವಸ್ಥೆ ಕುರಿತು ಮನವರಿಕೆ ಮಾಡುತ್ತಾ ಬಂದಿದ್ದೇವೆ. ಬದ್ಧತೆಯಿಂದ ದುರಸ್ತಿ ಕೆಲಸ ಮಾಡಿಸುವುದು ಅವರಿಂದಲೂ ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಕಲಾವಿದರು ಅಸಹಾಯಕರಾಗಿದ್ದೇವೆ. ಕಟ್ಟಡ ಸುಧಾರಣೆಗಾಗಿ ಮತ್ತು ಆವರಣಗೋಡೆ ನಿರ್ಮಿಸುವುದಕ್ಕಾಗಿ ಈ ಹಿಂದೆ ಇದ್ದ ಉಪನಿರ್ದೇಶಕರು ಪ್ರಸ್ತಾವನೆ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದಷ್ಟು ಬೇಗನೆ ದುರಸ್ತಿ ಕೆಲಸ ನಡೆಸಬೇಕು’ ಎಂದು ಹಿರಿಯ ರಂಗಕರ್ಮಿ ವಿ.ಎನ್‌.ಅಕ್ಕಿ ಅವರು ಹೇಳುವ ಮಾತಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT