ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಲೂಟಿ ಮಾಡಿದ ರಾಯಚೂರು ಶಾಸಕ ಶಿವರಾಜ ಪಾಟೀಲ: ಕುಮಾರಸ್ವಾಮಿ ಆರೋಪ

Last Updated 19 ಆಗಸ್ಟ್ 2022, 7:29 IST
ಅಕ್ಷರ ಗಾತ್ರ

ರಾಯಚೂರು: 'ರಾಯಚೂರು ಶಾಸಕ‌ ಡಾ.ಶಿವರಾಜ ಪಾಟೀಲ ಕ್ಷೇತ್ರಕ್ಕೆ ಕೊಟ್ಟಿರುವ ಅನುದಾನ ಸರಿಯಾಗಿ ಬಳಕೆ ಮಾಡಿಕೊಳ್ಳದೆ, ಅನುದಾನ ಲೂಟಿ ಮಾಡುವ ಕೆಲಸ ಮಾಡಿದ್ದಾರೆ. ತಮ್ಮ ದುರ್ಬಲತೆ ಮುಚ್ಚಿಕೊಳ್ಳಲು ರಾಯಚೂರನ್ನು ತೆಲಂಗಾಣದತ್ತ ತೆಗೆದುಕೊಂಡು ಹೋಗುವ ಪ್ರಸ್ತಾಪ ಮಾಡಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

'ಶಾಸಕರ ಈ ದೌರ್ಬಲ್ಯದ ಹೇಳಿಕೆಯನ್ನು ಅವಕಾಶ ಮಾಡಿಕೊಂಡ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಈಗ ಹೇಳಿಕೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ವಿಷಯ ಮತ್ತೆ ಪ್ರಸ್ತಾಪಿಸಬಾರದು ಎನ್ನುವುದು ನನ್ನ ಮನವಿ. ಪ್ರಾದೇಶಿಕ ಅಸ್ಮಿತೆಯನ್ನು ಆಧಾರವಾಗಿಟ್ಟುಕೊಂಡು ಹೋರಾಟ ಮಾಡಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಸ್ಮಿತೆ ಕಾಪಾಡುವುದಕ್ಕೆ ಜೆಡಿಎಸ್ ಬದ್ಧವಾಗಿದೆ' ಎಂದರು.

'ಎಚ್.ಡಿ.ದೇವೇಗೌಡರ ಕಾಲದಲ್ಲಿ ಬಚಾವತ್ ತೀರ್ಪಿನ‌ ಬಳಿಕ ಆಂಧ್ರಪ್ರದೇಶದಿಂದ ಸಾಕಷ್ಟು ಜನರು ರಾಯಚೂರು ಜಿಲ್ಲೆಯಲ್ಲಿ ಜಮೀನು ಖರೀದಿಸಿ ಕ್ಯಾಂಪ್ ಮಾಡಿಕೊಂಡು ನೆಲೆಸಿದ್ದಾರೆ. ಅವರೆಲ್ಲರೂ ಈಗ ನಮ್ಮವರಾಗಿದ್ದಾರೆ. ಅವರಿಗೆ ಕನ್ನಡಿಗರು ಸಹಕಾರ ನೀಡಿದ್ದಾರೆ. ರಾಯಚೂರಿನಿಂದಲೇ ಕೃಷ್ಣಾ ಮತ್ತು ತುಂಗಭದದ್ರಾ ನದಿಗಳು ಆ ರಾಜ್ಯಗಳಿಗೆ ಹರಿದುಹೋಗುತ್ತವೆ. ಆದರೂ ರಾಯಚೂರಿನಲ್ಲಿ ಬರಡು ಭೂಮಿಗಳಿವೆ. ಈ ಭಾಗದಲ್ಲಿ ಕೃಷ್ಣಾ ನದಿ ಮೂರನೇ ಹಂತದ ಯೋಜನೆಗಳನ್ನು ಜಾರಿಗೊಳಿಸಲು ತೆಲಂಗಾಣದ ಮುಖ್ಯಮಂತ್ರಿ ಕೂಡಾ ಸಹಕಾರ ನೀಡಬೇಕು' ಎಂದು ಕೋರುತ್ತೇನೆ ಎಂದರು.

'ತೆಲಂಗಾಣ ಮುಖ್ಯಮಂತ್ರಿ ನಮ್ಮೊಂದಿಗೆ ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ನೆಲ, ಜಲ ವಿಚಾರದಲ್ಲಿ ಅವರೊಂದಿಗೆ ನಾನು ರಾಜಿ ಕೆಲಸಕ್ಕೆ ಹೋಗುವುದಿಲ್ಲ. ರಾಯಚೂರು ಶಾಸಕರು ದೌರ್ಬಲ್ಯದಿಂದ ನೀಡಿದ ಹೇಳಿಕೆ ಮತ್ತೆ ಪ್ರಸ್ತಾಪಕ್ಕೆ ತರಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT