ರಾಯಚೂರು: ಶ್ರೀಮಂತರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿ ಆರಾಮಾಗಿ ಜೀವನ ಕಳಿಯಲು ನಿರ್ಧರಿಸಿ ಅಪರಾಧ ಲೋಕಕ್ಕೆ ಇಳಿದ ಇಬ್ಬರು ಮೊದಲ ಹಂತದಲ್ಲೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ರಾಯಚೂರಿನಿಂದಲೇ ವೃತ್ತಿ ಆರಂಭಿಸಲು ತೀರ್ಮಾನಿಸಿ ಬೆಟ್ಟದೂರ ಆಸ್ಪತ್ರೆ ವೈದ್ಯ ಡಾ.ಜಯಪ್ರಕಾಶ ಪಾಟೀಲ ಮೇಲೆ ಗುಂಡಿನ ದಾಳಿ ನಡೆಸಿ ಇದೀಗ ಜೈಲು ಸೇರಿದ್ದಾರೆ.
ರಾಯಚೂರಿನ ಆಸ್ಪತ್ರೆಯಿಂದ ಮಾನ್ವಿಗೆ ಕಾರಿನಲ್ಲಿ ಹೊರಟಿದ್ದ ಡಾ.ಜಯಪ್ರಕಾಶ ಪಾಟೀಲ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳಾದ ಕಲಬುರಗಿ ಮೂಲದ ಶರ್ಪುದ್ದಿನ್ ಮಿಸ್ಟರಿ ಹಾಗೂ ಮಹಮ್ಮದ್ ಕಮರುದ್ದಿನ್ ಎನ್ನುವರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ ಎಂದು ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶಕುಮಾರ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿತರಿಂದ ಪಿಸ್ತೂಲ್, ಮೋಟಾರ್ ಬೈಕ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು.
ಶರ್ಪುದ್ದಿನ್ ಮಿಸ್ಟರಿಗೆ ಸಾಮಾಜಿಕ ಜಾಲತಾಣದ ಬಗ್ಗೆ ಅರಿವಿದೆ. ಶ್ರೀಮಂತರಿಂದ ಹಣ ವಸೂಲಿ ಮಾಡುವ ದಂಧೆ ನಡೆಸಲು ಜಾಲತಾಣಗಳಲ್ಲಿ ಶೋಧ ನಡೆಸುತ್ತಿದ್ದ. ಡಾ.ಜಯಪ್ರಕಾಶ ಪಾಟೀಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಅವರ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಕೊಂಡು ಹಣ ವಸೂಲಿಗೆ ರೂಪರೇಷೆ ಸಿದ್ಧಪಡಿಸಿದ್ದ. ಇನ್ನೊಬ್ಬ ಆರೋಪಿ ಮಹಮ್ಮದ್ ಕಮರುದ್ದಿನ್ ಮುಖ್ಯ ಆರೋಪಿಗೆ ಸಾಥ್ ನೀಡಿದ್ದ ಎಂದು ತಿಳಿಸಿದರು.
ಆರೋಪಿಗಳು ಪಲ್ಸರ್ ಮೋಟರ್ ಸೈಕಲ್ ಮೇಲೆ ವೈದ್ಯರನ್ನು ಹಿಂಬಾಲಿಸಿಕೊಂಡು ಹೋಗಿ ಆಗಸ್ಟ್ 31ರಂದು ಮಧ್ಯಾಹ್ನ ಸಾತ್‌ಮೈಲ್ ಕ್ರಾಸ್ ಹತ್ತಿರ ಕಾರು ಅಡ್ಡಗಟ್ಟಿ ವೈದ್ಯರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.
ಅಪರಾಧ ಕೃತ್ಯಕ್ಕೆಂದೆ ಆರೋಪಿಗಳು ಪಿಸ್ತೂಲ್ ಖರೀದಿಸಿರುವುದು ವಿಚಾರಣೆ ಸಮಯದಲ್ಲಿ ಬೆಳಕಿಗೆ ಬಂದಿದೆ. ತನಿಖೆಗೆ ತೊಡಕಾಗುವ ಕಾರಣ ಈ ವಿಷಯವನ್ನು ಬಹಿರಂಗ ಪಡಿಸಲು ಆಗದು. ಕಲಬುರಗಿ ಜಿಲ್ಲೆಯಲ್ಲಿ ಅನೇಕ ರೌಡಿಶೀಟರ್‌ಗಳು ಇದ್ದಾರೆ. ಅಲ್ಲಿ ಇಂತಹ ವ್ಯವಹಾರ ಆರಂಭಿಸುವುದು ಕಷ್ಟು ಎನ್ನುವುದು ಮನವರಿಕೆ ಮಾಡಿಕೊಂಡಿದ್ದರು. ರಾಯಚೂರಿನಲ್ಲಿ 20 ವರ್ಷಗಳಲ್ಲಿ ಇಂತಹ ಯಾವುದೇ ಕೃತ್ಯ ನಡೆದಿಲ್ಲ. ಹೀಗಾಗಿ ರಾಯಚೂರನ್ನು ಕೇಂದ್ರ ಮಾಡಿಕೊಳ್ಳಲು ಸ್ಕೆಚ್ ಹಾಕಿದ್ದರು ಎಂದು ವಿವರಿಸಿದರು.
ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಡಾ.ಜಯಪ್ರಕಾಶ ಪಾಟೀಲ ಅವರ ಪ್ರೊಫೈಲ್ ನೋಡಿ ವೈದ್ಯರು ಖ್ಯಾತಿ ಪಡೆದುಕೊಂಡಿರುವುದನ್ನು ಖಾತರಿ ಪಡಿಸಿಕೊಂಡಿದ್ದರು. ಇವರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಆಸ್ಪತ್ರೆಯ ನಂಬರ್ ಹಾಗೂ ವೈದ್ಯರ ಮೊಬೈಲ್ ನಂಬರ್ ಸಹ ಪಡೆದಿದ್ದರು. ವೈದ್ಯರ ಮೊಬೈಲ್‌ಗೆ ಕರೆ ಮಾಡಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದರು. ಆದರೆ, ವೈದ್ಯರು ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಅವರನ್ನು ಹೆದರಿಸಲು ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮೂರು ತಂಡಗಳನ್ನು ರಚಿಸಿದ್ದರು. ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೆಲ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ, ಪಿಎಸ್‌ಐಗಳಾದ ಮಂಜುನಾಥ ಹಾಗೂ ನಾಗರಾಜ ಇದ್ದರು.
ಅಪರಾಧ ಜಗತ್ತಿಗೆ ಸಾಮಾಜಿಕ ಜಾಲತಾಣ ಬಳಕೆ ಮೊಬೈಲ್ ನಂಬರ್ ಮೂಲಕ ಆರೋಪಿಗಳ ಸುಳಿವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.