ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ನೀರು ಪೂರೈಕೆ: ಆತಂಕ

ಶುದ್ಧೀಕರಣ ಘಟಕಗಳು ಸ್ಥಗಿತ: ಎಂಟು ಗ್ರಾಮಗಳ ಜನರಿಗೆ ಸಂಕಷ್ಟ
Last Updated 12 ಜೂನ್ 2022, 5:42 IST
ಅಕ್ಷರ ಗಾತ್ರ

ಕವಿತಾಳ: ಮಸ್ಕಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಶುದ್ಧೀಕರಣ ಘಟಕ ಸ್ಥಗಿತಗೊಂಡ ಕಾರಣ ಗ್ರಾಮಸ್ಥರಿಗೆ ಇದೇ ನೀರು ಸೇವಿಸುವ ಅನಿವಾರ್ಯತೆ ಎದುರಾಗಿದೆ.

ವಿಶ್ವ ಬ್ಯಾಂಕ್‍ ನೆರವಿನ ಹೆಚ್ಚುವರಿ ಅನುದಾನದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು ಜಲ ನಿರ್ಮಲ ಯೋಜನೆಯಡಿ ನಿರ್ಮಿಸಿದ ಕೆರೆಯಿಂದ ಶುದ್ಧೀಕರಿಸದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲಲ್ಲಿ ಪೈಪ್‌ಗಳು ಒಡೆದಿದ್ದು ತಗ್ಗುಗಳಲ್ಲಿ ಜಾನುವಾರುಗಳು ಮಲಗುತ್ತವೆ. ಹೀಗಾಗಿ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗುತ್ತಿದೆ.ತೋರಣದಿನ್ನಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಣದಿನ್ನಿ ಕ್ರಾಸ್, ಗೂಗೆಬಾಳ, ಮಲ್ಕಾಪುರ, ನಾಗಪ್ಪ ಕ್ಯಾಂಪ್, ತಾಯಮ್ಮ ಕ್ಯಾಂಪ್, ಚಿಕ್ಕದಿನ್ನಿ ಮತ್ತು ಬಸಾಪುರ ಸೇರಿದಂತೆ ಎಂಟು ಗ್ರಾಮಗಳಿಗೆ ಇದೇ ಕೆರೆಯಿಂದ ನೀರು ಪೂರೈಕೆಯಾಗುತ್ತಿದೆ.

‘ಕೆರೆ ಸುತ್ತಮುತ್ತ ಮುಳ್ಳು–ಗಿಡಗಳು ಹಾಗೂ ಅದರ ಒಡಲಲ್ಲಿ ಪಾಚಿ ಬೆಳೆದು ನೀರು ಮಲೀನಗೊಂಡಿದೆ. ಕೆರೆ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಶಿವಕುಮಾರ ಸಾಹುಕಾರ ಮಿಟ್ಟಿಮನಿ ಆರೋಪಿಸಿದರು. ‘ಬಸಾಪುರ ಗ್ರಾಮದಲ್ಲಿ ಶುದ್ಧೀಕರಣ ಘಟಕ ಸ್ಥಗಿತಗೊಂಡು ವರ್ಷಗಳು ಕಳೆದರೂ ದುರಸ್ತಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೆರೆಯಿಂದ ಪೂರೈಕೆಯಾಗುವ ಅಶುದ್ಧ ನೀರು ಕುಡಿಯುವುದು ಅನಿವಾರ್ಯವಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದರು.

‘ಮನೆಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಒಂದೇ ದಿನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಬಳಕೆಗೂ ಯೋಗ್ಯವಿಲ್ಲ. ಕೆರೆ ಸ್ವಚ್ಛತೆ ಮತ್ತು ಒಡೆದ ಪೈಪ್‍ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ ನಾಯಕ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT