ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಸಮರ್ಪಕ ಮಳೆ ಮಧ್ಯೆ ಮುಂಗಾರು ಬಿತ್ತನೆ ಪೂರ್ಣ

ಜಿಲ್ಲೆಯಲ್ಲಿ ಜೂನ್‌ನಲ್ಲಿ 100 ಮಿಲಿ ಮೀಟರ್‌, ಜುಲೈನಲ್ಲಿ 135 ಮಿಲಿಮೀಟರ್‌ ಮಳೆ ದಾಖಲು
Last Updated 31 ಜುಲೈ 2022, 19:30 IST
ಅಕ್ಷರ ಗಾತ್ರ

ರಾಯಚೂರು: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಅಸಮರ್ಪಕವಾಗಿ ಮಳೆ ಸುರಿದಿದ್ದರಿಂದ ಮುಂಗಾರು ಬಿತ್ತನೆಯು ಆರಂಭದಲ್ಲಿ ಕುಂಠಿತವಾಗಿತ್ತು. ಅಂತು ಇಂತೂ ಜುಲೈ ಅಂತ್ಯಕ್ಕೆ ಸ್ವಲ್ಪಭಾಗ ಭತ್ತದ ಕ್ಷೇತ್ರ ಹೊರತುಪಡಿಸಿ ಬಹುತೇಕ ಎಲ್ಲ ಕಡೆಗಳಲ್ಲೂ ಬಿತ್ತನೆ ಪೂರ್ಣಗೊಂಡಿದೆ.

ಜೂನ್‌ನಲ್ಲಿ ಮುಂಗಾರು ಮಳೆ ಸುರಿಯುವ ಪೂರ್ವದಲ್ಲೇ ಮೇ ಅಂತ್ಯದಲ್ಲಿ ಕೆಲವು ಕಡೆ ಅಡ್ಡಮಳೆ ಸುರಿದಿದ್ದರಿಂದ ಕೆಲವು ರೈತರು ಮುಂಚಿತವಾಗಿ ಬಿತ್ತನೆ ಮಾಡಿದ್ದರು. ಆನಂತರದಲ್ಲಿ ಮಳೆ ಕೊರತೆ ಎದುರಾಗಿದ್ದರಿಂದ ರೈತರು ಬೆಳೆಹಾನಿ ಅನುಭವಿಸುವ ಹಂತದಲ್ಲಿದ್ದಾಗ, ಎಡಬಿಡದೆ ಸುರಿದ ತುಂತುರು ಮಳೆ ಆಸರೆಯಾಯಿತು. ಸ್ವಲ್ಪ ಪ್ರಮಾಣದ ಹಾನಿಯಾದರೂ ಬೆಳೆಗಳು ಮತ್ತೆ ಹಸಿರಾಗಿವೆ. ತುಂತುರು ಮಳೆ ಮಧ್ಯದಲ್ಲೇ ರೈತರು ಬಿತ್ತನೆಕಾರ್ಯ ಪೂರ್ಣಗೊಳಿಸಿದ್ದಾರೆ.

ಜುಲೈ ಆರಂಭದಿಂದಲೂ ತುಂತುರು ಮಳೆ ವ್ಯಾಪಕವಾಗಿತ್ತು. ಕೆಲವು ಹೋಬಳಿಗಳಲ್ಲಿ ಭಾರಿ ಮಳೆ ಸುರಿದಿದ್ದರಿಂದ ಜೂನ್ ತಿಂಗಳಲ್ಲಿ ದಾಖಲಾಗಿದ್ದ ಮಳೆ ಕೊರತೆಯು ಜುಲೈನಲ್ಲಿ ಕೊರತೆಯನ್ನು ನೀಗಿಸಿತು. ಮುಂಚಿತವಾಗಿ ಬಿತ್ತನೆ ಮಾಡಿದ್ದ ಜಮೀನುಗಳಲ್ಲಿ ಇದೀಗ ಕಳೆ ಬೆಳೆದಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಮಳೆ ಬಿಡುವು ನೀಡುತ್ತಿಲ್ಲ ಹಾಗೂ ಕೃಷಿಕಾರ್ಯಕ್ಕೆ ಕೂಲಿಗಳು ದೊರೆಯುತ್ತಿಲ್ಲ ಎನ್ನುವ ಸಂಕಷ್ಟದಲ್ಲಿ ರೈತರಿದ್ದಾರೆ.

‘ರಾಯಚೂರು ತಾಲ್ಲೂಕಿನಲ್ಲಿ ಮಾತ್ರ ಸರಿಯಾಗಿ ಮುಂಗಾರು ಮಳೆ ಸುರಿದಿಲ್ಲ. ಇನ್ನುಳಿದಂತೆ ಲಿಂಗಸುಗೂರು, ಸಿಂಧನೂರು, ಮಸ್ಕಿ, ಸಿರವಾರ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಕಳೆದ ವರ್ಷಕ್ಕಿಂತ ಮಳೆ ಉತ್ತಮವಾಗಿ ಬಿದ್ದಿದೆ. ಎಲ್ಲ ಕಡೆಯಲ್ಲೂ ಬಿತ್ತನೆ ಮುಗಿದಿದೆ. ಸದ್ಯಕ್ಕೆ ಸಮಸ್ಯೆ ಏನೂ ಇಲ್ಲ. ಆದರೆ ಕೃಷಿಕಾರ್ಯಕ್ಕೆ ಕೂಲಿಗಳು ಸಿಗುತ್ತಿಲ್ಲ‘ ಎಂದು ಕಡ್ಗಂದೊಡ್ಡಿ ರೈತ ಲಕ್ಷ್ಮಣಗೌಡ ’ಪ್ರಜಾವಾಣಿ‘ಗೆ ತಿಳಿಸಿದರು.

ಅಸಮರ್ಪಕ ಮಳೆ: ಈ ಬಾರಿ ಜಿಲ್ಲೆಯಾದ್ಯಂತ ಒಂದೇ ದಿನ ಮಳೆ ಸುರಿಯದೆ, ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಒಂದು ತಾಲ್ಲೂಕಿನಲ್ಲಿ ಮಳೆಯಾಗಿದ್ದರೆ, ಇನ್ನೊಂದು ತಾಲ್ಲೂಕಿನಲ್ಲಿ ಇರಲಿಲ್ಲ. ಹೋಬಳಿಯಿಂದ ಹೋಬಳಿಗೆ, ಗ್ರಾಮದಿಂದ ಗ್ರಾಮಕ್ಕೂ ಮಳೆ ಬಿಟ್ಟುಬಿಟ್ಟು ಸುರಿದಿದೆ. ಒಟ್ಟಾರೆ ಮುಂಗಾರು ಬಿತ್ತನೆಗೆ ರೈತರ ಗಲಿಬಿಲಿ ಅನುಭವಿಸಿದ್ದರು. ಜುಲೈ ಎರಡನೇ ವಾರ ಬಿತ್ತನೆ ವೇಗ ಪಡೆದು, ಮುಕ್ತಾಯವಾಗಿದೆ.

ಜಿಲ್ಲೆಯಲ್ಲಿ ಜೂನ್‌ನಲ್ಲಿ 100 ಮಿಲಿಮೀಟರ್‌ ಮಳೆ ದಾಖಲಾಗಿದೆ. ಜುಲೈನಲ್ಲಿ 135 ಮಿಲಿ ಮೀಟರ್‌ ಸುರಿದಿದೆ. ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆ ಬಿದ್ದಿದೆ. ಜೂನ್‌, ಜುಲೈನಲ್ಲಿ ಒಟ್ಟಾರೆ ವಾಡಿಕೆ ಮಳೆ 175 ಮಿಲಿಮೀಟರ್‌ ಇದ್ದರೂ ವಾಸ್ತವದಲ್ಲಿ ಶೇ 39ರಷ್ಟು ಅಧಿಕ ಮಳೆ ಬಿದ್ದಿದೆ ಎನ್ನುವುದು ಹವಾಮಾನ ಇಲಾಖೆ ವಿವರಣೆ.

ಗೊಬ್ಬರಕ್ಕಾಗಿ ಹುಡುಕಾಟ

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಲಾಗಿದ್ದು, ಉಪಕಾಲುವೆಗಳ ಮೇಲ್ಭಾಗದ ರೈತರು ಭತ್ತ ನಾಟಿ ಕಾರ್ಯ ಆರಂಭಿಸಿದ್ದಾರೆ. ಖುಷ್ಕಿ ಪ್ರದೇಶದಲ್ಲಿಯೂ ವಿವಿಧ ಬೆಳೆಗಳ ಬಿತ್ತನೆ ಆರಂಭವಾಗಿದೆ. ಆದರೆ ರೈತರು ತಮಗೆ ಗೊಬ್ಬರ ಸಿಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಏಕಕಾಲಕ್ಕೆ ಮಳೆ ಆರಂಭವಾಗಿದ್ದು, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೇಳಿದರೆ ಇನ್ನೂ ಗೊಬ್ಬರ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಹೀಗಾಗಿ ಯಾರನ್ನು ಕೇಳಬೇಕೋ ತಿಳಿಯದಾಗಿದೆ ಎಂದು ಜಂಗಮರಹಟ್ಟಿಯ ರೈತ ಶಂಕ್ರಪ್ಪ ಅಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹಲವಾರು ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರನ್ನು ಕೇಳಿದಾಗ ‘ಶೇ.25 ರಷ್ಟು ಗೊಬ್ಬರ ಪೂರೈಕೆಯಾಗಿದೆ. ಇನ್ನೂ ಶೇ 75ರಷ್ಟು ಮುಂದಿನ ವಾರ ಬರಬಹುದು ಎಂದು ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯಾಂಕ ಅವರನ್ನು ಸಂಪರ್ಕಿಸಿದಾಗ ‘ಗೊಬ್ಬರದ ಕೊರತೆ ಏನೂ ಇಲ್ಲ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಕಂಡು ಬಂದದ್ದು ನಿಜ. ಗೊಬ್ಬರ ಕೊರತೆಯಿದೆ ಎಂದು ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವುದರಿಂದ ಕೊರತೆಯಾಗಿದೆ ಎಂದು ಅನಿಸುತ್ತಿದೆ. ಅಗತ್ಯಗನುಗುಣವಾಗಿ ಬಳಸಿದರೆ ಯಾವುದೇ ತೊಂದರೆ ಇಲ್ಲ. ಇನ್ನೂ ಹೆಚ್ಚಿನ ಪ್ರಮಾಣದ ಗೊಬ್ಬರ ಬಿಡುಗಡೆಯಾಗಿದ್ದು, ಸೋಮವಾರದಿಂದ ರೈತರಿಗೆ ಪೂರೈಸುವುದಾಗಿ’ ಪ್ರತಿಕ್ರಿಯಿಸಿದರು.

ಡಿಎಪಿಗೆ ಹೆಚ್ಚಿದ ಬೇಡಿಕೆ

ಮಾನ್ವಿ:ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಭತ್ತದ ನಾಟಿ ಕಾರ್ಯ ನಡೆದಿದೆ. ನಿರಂತರ ಜಿಟಿಜಿಟಿ ಮಳೆಯಿಂದಾಗಿ ಸೂರ್ಯಕಾಂತಿ ಬೆಳೆ ಹಾನಿಗೀಡಾಗಿದೆ.

ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದ ಕಾರಣ ದಂಡೆಯಲ್ಲಿನ ಜಮೀನುಗಳು ಜಲಾವೃತಗೊಂಡು ರೈತರು ಬೆಳೆ ಹಾನಿ ಅನುಭವಿಸುವಂತಾಗಿದೆ. ಇತರ ಕಡೆ ಹತ್ತಿ ಮತ್ತು ತೊಗರಿ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಡಿಎಪಿ ರಸಗೊಬ್ಬರದ ಬೇಡಿಕೆ ಹೆಚ್ಚಾಗಿದೆ.

ರೈತರಿಗೆ ರಿಯಾಯಿತಿ ದರದಲ್ಲಿ ಸಹಕಾರ ಸಂಘಗಳ ಮೂಲಕ ಪ್ರತಿ ಪಹಣಿಗೆ ಅನುಗುಣವಾಗಿ 3 ಚೀಲ (150 ಕೆ.ಜಿ) ಡಿಎಪಿ ರಸಗೊಬ್ಬರ ಮಾತ್ರ ವಿತರಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಡಿಎಪಿಗೆ ಪರ್ಯಾಯವಾಗಿ ಕಾಂಪ್ಲೆಕ್ಸ್ ಹಾಗೂ ನ್ಯಾನೊ ಯರಿಯಾ ರಸಗೊಬ್ಬರ ಬಳಸುವಂತೆ ಕೃಷಿ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಆದರೆ ರೈತರು ಡಿಎಪಿ ರಸಗೊಬ್ಬರ ಪೂರೈಕೆಗೆ ಒತ್ತಾಯಿಸುತ್ತಿದ್ದಾರೆ.

ಸವಾಲಾದ ಕಳೆ

ಸಿರವಾರ: ಮುಂಗಾಳು ಮಳೆ ವಿಳಂಬವಾದ ನಂತರ ರೈತರು ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಆದರೆ ಕಳೆದ ವಾರದಿಂದ ಸತತವಾಗಿ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಹೊಲಗಳಲ್ಲಿ ಬೆಳೆಗಿಂತ ಕಸವೇ ಹೆಚ್ಚಾಗಿ ಬೆಳೆದಿದ್ದು, ಕಸ ಕೀಳಲು ಕೂಲಿಕಾರರಿಗೆ ಬೆನ್ನು ಬೀಳುವಂತಾಗಿದೆ.

ಕಳೆ ನಾಶಕವೂ ರಾಸಾಯನಿಕಕ್ಕಾಗಿ ಹೆಚ್ಚಿನ ಹಣ ಮತ್ತು ಕೂಲಿಕಾರರಿಗೆ ನೀಡುವ ಕೂಲಿ ನಾಟಿ ಮಾಡಲು ಮಾಡಿದ ಖರ್ಚಿಗಿಂತಲೂ ಅಧಿಕ ಹಣ ವ್ಯಯಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ವಿಳಂಬದ ನಂತರವೂ ರೈತರು ನಾಟಿ ಮಾಡಿದ ಬೆಳೆಗಳಿಗೆ ರಸಗೊಬ್ಬರ ಮೊದಲಿಗೆ ಕಡಿಮೆಯಾದರೂ ನಂತರ ಬೇಕಾದಷ್ಟು ರಸಗೊಬ್ಬರ ಸಿಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

–ಪೂರಕ ವರದಿಗಳು: ಡಿ.ಎಚ್‌.ಕಂಬಳಿ, ಬಸವರಾಜ ಭೋಗಾವತಿ, ಕೃಷ್ಣಾ ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT