ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಕೋವಿಡ್‌  ಸೆಂಟರ್‌ನಲ್ಲಿ ಯೋಗ ತರಬೇತಿ

Last Updated 24 ಆಗಸ್ಟ್ 2020, 15:13 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿರುವ ‘ಕೋವಿಡ್‌ ಕೇರ್‌ ಸೆಂಟರ್‌’ನಲ್ಲಿ ಯೋಗಗುರು ಮಲ್ಲಣ್ಣ ಎಚ್‌. ನವಲಿ ಅವರು ಕೊರೊನಾ ಪಾಸಿಟಿವ್‌ ಇರುವವರಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.

ಮಲ್ಲಣ್ಣ ಅವರಿಗೆ ಕೊರೊನಾ ಸೋಂಕು ಇಲ್ಲ. ಆದರೆ, ಸೋಂಕಿತರಲ್ಲಿರುವ ಆತಂಕವನ್ನು ಯೋಗದಿಂದ ದೂರ ಮಾಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. 20 ದಿನಗಳಿಂದ ಯೋಗ ತರಬೇತಿ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

‘ಕೋವಿಡ್‌ ರೋಗಿಗಳು ಆಸ್ಪತ್ರೆಯಲ್ಲಿ ಲವಲವಿಕೆಯಿಂದ ಯೋಗದಲ್ಲಿ ಪಾಲ್ಗೊಳ್ಳುತ್ತಿದ್ದು, ಯೋಗದಿಂದ ಆರೋಗ್ಯ ಸುಧಾರಣೆ ಆಗಿದೆ ಎನ್ನುವ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಮಲ್ಲಣ್ಣ ತಿಳಿಸಿದರು.

‘ಕೊರೊನಾ ಮಾತ್ರವಲ್ಲ, ಯಾವುದೇ ಆನಾರೋಗ್ಯದ ಸಮಸ್ಯೆಯನ್ನು ಯೋಗದಿಂದ ದೂರ ಮಾಡಬಹುದು. ದೇಶದಲ್ಲಿರುವ ಪ್ರತಿಯೊಂದು ಕೋವಿಡ್‌ ಸೆಂಟರ್‌ನಲ್ಲಿ ಯೋಗ ಹೇಳಿಕೊಡುವ ವ್ಯವಸ್ಥೆ ಮಾಡಬೇಕು. ಇದರಿಂದ ಕೊರೊನಾ ಮಹಾಮಾರಿಯನ್ನು ಇನ್ನೂ ಸುಲಭವಾಗಿ ಜಯಿಸಬಹುದು’ ಎನ್ನುತ್ತಾರೆ ಮಲ್ಲಣ್ಣ.

ಸಿಂಧನೂರು ತಾಲ್ಲೂಕಿನ ಎಲೆಕುಡಲಿಕ್ಯಾಂಪ್‌ ನಿವಾಸಿ ಮಲ್ಲಣ್ಣ ನವಲಿ ಅವರು ಬೆಂಗಳೂರಿನಲ್ಲಿ ಎಂಎಸ್‌ಸಿ ಇನ್‌ ಯೋಗ ಮುಗಿಸಿದ್ದಾರೆ. 26 ವರ್ಷದ ಯುವಕ ಮಲ್ಲಣ್ಣ ಅವರು ಯಲಹಂಕದಲ್ಲಿ ವಿಶ್ವಭಾರತಿ ಫೌಂಡೇಷನ್‌ ಆರಂಭಿಸಿ, ಯೋಗ ತರಬೇತಿ ನೀಡುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಸಿಂಧನೂರಿಗೆ ಹಿಂತಿರುಗಿದ್ದು, ಇತ್ತೀಚೆಗೆ ಕೋವಿಡ್‌ ಸೆಂಟರ್‌ ಯೋಗ ಹೇಳಿಕೊಡುವ ಸೇವೆ ಪ್ರಾರಂಭಿಸಿ ಗಮನ ಸೆಳೆಯುತ್ತಿದ್ದಾರೆ.

‘ತಾಲ್ಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರ್‌ ಅವರು ಯೋಗ ಹೇಳಿಕೊಡಲು ಸಹಕಾರ ನೀಡಿದ್ದಾರೆ. ಕೊರೊನಾ ಸೋಂಕು ತಡೆಗೆ ನಿಯಮಾನುಸಾರ ಅಂತರ ಪಾಲನೆ, ಮಾಸ್ಕ್‌ ಧರಿಸುವ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ’ ಎಂದು ಮಲ್ಲಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರರಾಷ್ಟ್ರೀಯ ಯೋಗಪಟು
ಯೋಗದಲ್ಲಿ ಪಳಗಿರುವ ಮಲ್ಲಣ್ಣ ಅವರು 2019 ರಲ್ಲಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಯೋಗ ಸ್ಪರ್ಧೆ’ಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ದುಬೈ, ಶ್ರೀಲಂಕಾ ಹಾಗೂ ನೇಪಾಳ ದೇಶಗಳಿಗೆ ಹೋಗಿ ಯೋಗ ಪ್ರದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT