ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮೂಲ ಸೌಕರ್ಯ ವೃದ್ಧಿಗೆ ಆದ್ಯತೆ

ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ಯಾದವ್‌ ಹೇಳಿಕೆ
Last Updated 5 ಡಿಸೆಂಬರ್ 2018, 13:40 IST
ಅಕ್ಷರ ಗಾತ್ರ

ರಾಯಚೂರು: ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ ಪ್ರತಿ ವಿಭಾಗದಲ್ಲೂ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಅದ್ಯತೆ ವಹಿಸುತ್ತಿದೆ ಎಂದು ಸಿಕಂದರಾಬಾದ್‌ ದಕ್ಷಿಣ ಮದ್ಯ ರೈಲ್ವೆ ಕಚೇರಿಯ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ಯಾದವ ಹೇಳಿದರು.

ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ ಪರಿಶೀಲಿಸಲು ಬುಧವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಯಚೂರು, ಮಂತ್ರಾಲಯ, ಆದೋನಿ, ಯಾದಗಿರಿ, ಗುಂತಕಲ್‌, ಮಟಮಾರಿಯಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್‌ ಎತ್ತರಗೊಳಿಸಿ, ಮೇಲ್ಸುತುವೆಗಳನ್ನು ನಿರ್ಮಾಣ ಮಾಡಲಾಗುವುದು. ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 742 ಪಾದಚಾರಿ ಮೇಲ್ಸುತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚು ರೈಲುಗಳನ್ನು ಓಡಿಸಬೇಕೆನ್ನುವ ಬೇಡಿಕೆ ಇದ್ದರೂ ಸಾಧಕ, ಬಾಧಕಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಗುಂತಕಲ್‌– ಬಳ್ಳಾರಿ ಮಾರ್ಗದಲ್ಲಿ ವಿದ್ಯುದ್ದೀಕರಣವಾಗಿದೆ. ಕೃಷ್ಣದಿಂದ ವಿಕಾರಾಬಾದ್‌ 120 ಕಿಲೋ ಮೀಟರ್‌ ರೈಲು ಮಾರ್ಗ ನಿರ್ಮಾಣಕ್ಕೆ ₹784 ಕೋಟಿ ವೆಚ್ಚ ಮಾಡಲಾಗುತ್ತದೆ. ಮಂತ್ರಾಲಯದಿಂದ ಕರ್ನೂಲ್‌ವರೆಗೂ 110 ಕಿಲೋ ಮೀಟರ್‌, ಧರ್ಮಾವರಂನಿಂದ ಬಳ್ಳಾರಿ ರೈಲ್ವೆ ಮಾರ್ಗ ನಿರ್ಮಾಣವು 2019 ಅಂತ್ಯದೊಳಗೆ ಮುಗಿಯಲಿದೆ ಎಂದು ಹೇಳಿದರು.

ಗುಂತಕಲ್‌, ಕಲ್ಲೂರು, ಗುತ್ತಿ ಧರ್ಮಾವರಂ ಮಾರ್ಗದಲ್ಲಿ 90 ಕಿಲೋ ಮೀಟರ್‌ ದ್ವಿಪಥ ರೈಲ್ವೆ ಮಾರ್ಗ ನಿರ್ಮಾಣಕ್ಕೆ ₹634 ಕೋಟಿ ನೀಡಲಾಗುತ್ತಿದೆ. ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಾಂದೇಡ್ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ನಿಲ್ದಾಣದಲ್ಲಿ ಕೂಡಲೇ ಸ್ಲಿಪ್‌ಕಿಂಗ್‌ ವ್ಯವಸ್ಥೆ ಆರಂಭಿಸಲಾಗುವುದು ಎಂದು ತಿಳಿಸಿದರು.

ನಿಲ್ದಾಣದೊಳಗಿನ ಸೌಲಭ್ಯಗಳನ್ನು ವಿನೋದಕುಮಾರ್‌ ಪರಿಶೀಲಿಸಿದರು. ಬಳಿಕ, ಹೊರಭಾಗದಲ್ಲಿ ಅಭಿವೃದ್ಧಿ ಮಾಡಿರುವ ಉದ್ಯಾನವನ್ನು ನೋಡಿದರು. ರೈಲ್ವೆ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲಿಸಿದರು. ಹೊಸದಾಗಿ ನಿರ್ಮಿಸಿರುವ ಸೂಪರ್‌ವೈಜರ್ ವಿಶ್ರಾಂತಿ ಗೃಹ ಮತ್ತು ಅಧಿಕಾರಿಗಳ ವಿಶ್ರಾಂತಿ ಗೃಹಗಳನ್ನು ಉದ್ಘಾಟಿಸಿದರು.

ಗುಂತಕಲ್‌ ರೈಲ್ವೆ ವಿಭಾಗದ ವ್ಯವಸ್ಥಾಪಕ ವಿಜಯ ಪ್ರತಾಪ್‌ ಸಿಂಗ್‌ ಇದ್ದರು.

ವರ್ಣರಂಜಿತ ನಿಲ್ದಾಣ
ರಾಯಚೂರು ರೈಲು ನಿಲ್ದಾಣದ ಪ್ರತಿ ಗೋಡೆಯ ಮೇಲೂ ಆಕರ್ಷಕ ವರ್ಣಗಳಿಂದ ಚಿತ್ರ ಬಿಡಿಸಲಾಗಿದೆ. ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳನ್ನು ಬಿಡಿಸಿರುವುದು ಮಾತ್ರವಲ್ಲ; ಕೆಲವು ಕಡೆ ಚಿತ್ತಾಕರ್ಷಕ ಉಬ್ಬುಚಿತ್ರ ಕಲಾಕೃತಿಗಳನ್ನು ಅಳವಡಿಸಲಾಗಿದೆ.

ರೈಲ್ವೆ ನಿಲ್ದಾಣವು ಮ್ಯೂಸಿಯಂ ರೀತಿಯಲ್ಲಿ ಸಿಂಗಾರಗೊಂಡಿದೆ. ನಿಲ್ದಾಣದ ಸ್ವಾಗತ ಕಮಾನ್‌ದಿಂದ ಟಾರ್‌ ರಸ್ತೆ, ಉದ್ಯಾನದ ಪ್ರತಿ ಗೋಡೆಗೂ ವರ್ಣಗಳ ಅಲಂಕಾರ ಗಮನ ಸೆಳೆಯುತ್ತಿದೆ. ಬಣ್ಣ ಬಳಿಯುವ ಕೆಲಸ ಇನ್ನೂ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT