ಮಳೆ ಕೊರತೆ: ಜಿಲ್ಲೆಯಲ್ಲಿ ಬರಗಾಲ ಭೀತಿ

7
ಭತ್ತ, ಹತ್ತಿ ಬಿತ್ತನೆಯಲ್ಲೂ ಹಿನ್ನಡೆ; ಪರ್ಯಾಯ ಬೆಳೆಗಳತ್ತ ರೈತರ ಚಿತ್ತ

ಮಳೆ ಕೊರತೆ: ಜಿಲ್ಲೆಯಲ್ಲಿ ಬರಗಾಲ ಭೀತಿ

Published:
Updated:
ರಾಯಚೂರು ನಗರ ಹೊರವಲಯದಲ್ಲಿ ಟ್ರ್ಯಾಕ್ಟರ್‌ ನೇಗಿಲು ಮೂಲಕ ರೈತರು ಭೂಮಿಯನ್ನು ಹದಗೊಳಿಸುತ್ತಿರುವುದು ಕಂಡು ಬಂತು

ರಾಯಚೂರು: ಮುಂಗಾರು ಮಳೆ ಬೀಳುವ ಭರವಸೆಯಿಂದ ಹತ್ತಿ ಹಾಗೂ ಭತ್ತ ಬಿತ್ತನೆ ಮಾಡಲು ಕಾಯುತ್ತಿದ್ದ ರೈತರೆಲ್ಲ ನಿರಾಸೆ ಅನುಭವಿಸುವಂತಾಗಿದ್ದು, ಮಳೆ ಕೊರತೆ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಈ ಸಲ ಅಧಿಕವಾಗಿದೆ.

ಹಿಂದಿನ ವರ್ಷ ಮುಂಗಾರು ಹಂಗಾಮು ಜುಲೈ ಎರಡನೇ ವಾರಕ್ಕೆ ಶೇ 51 ರಷ್ಟು ಬಿತ್ತನೆ ಆಗಿತ್ತು. ಈ ವರ್ಷ ಜುಲೈ ಮೂರನೇ ವಾರದ ಅಂಕಿ–ಅಂಶಗಳ ಪ್ರಕಾರ ಶೇ 20 ರಷ್ಟು ಮಾತ್ರ ಬಿತ್ತನೆಯಾಗಿದೆ. ಪ್ರಮುಖವಾಗಿ ಮಳೆ ನಂಬಿಕೊಂಡು ಶೇ 35 ರಷ್ಟು ಖುಷ್ಕಿ ಜಮೀನಿನಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಶೇ 5 ರಷ್ಟು ನೀರಾವರಿ ಜಮೀನುಗಳಲ್ಲಿ ಬಿತ್ತನೆ ಆಗಿದೆ. ಸರಾಸರಿ ಬಿತ್ತನೆ ಪ್ರಮಾಣವು ತುಂಬಾ ಕಡಿಮೆ ಆಗಿರುವುದರಿಂದ ಜಿಲ್ಲೆಯಲ್ಲಿ ಮತ್ತೆ ಬರಗಾಲ ಛಾಯೆ ಎದ್ದು ಕಾಣುತ್ತಿದೆ.

ಜಿಲ್ಲೆಯಲ್ಲಿ ಜೂನ್‌ ಆರಂಭದಿಂದಲೂ ವಾಡಿಕೆ ಮಳೆ ಬೀಳುತ್ತಿಲ್ಲ. ಅಲ್ಲಲ್ಲಿ ಸುರಿದ ತುಂತುರು ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿರುವ ರೈತರು ಕೂಡಾ ಭೀತಿಯಲ್ಲಿ ಮುಳುಗಿದ್ದಾರೆ. ಸಮರ್ಪಕ ತೇವಾಂಶ ಕೊರತೆ ಆಗಿರುವುದರಿಂದ ಬಿತ್ತಿರುವ ಬೀಜಗಳು ಮೊಳಕೆ ಒಡೆದಿಲ್ಲ. ಬಹುತೇಕ ಕಡೆ ಮಳೆ ಕೊರತೆ ಆಗಿರುವುದರಿಂದ ಬಿತ್ತನೆ ಮಾಡಲು ಸಾಧ್ಯವಾಗದೆ; ಬೀಜ ಹಾಗೂ ಗೊಬ್ಬರ ಖರೀದಿಸಿರುವ ರೈತರ ಮುಖದಲ್ಲಿ ಚಿಂತೆಯ ಕಾರ್ಮೋಡ ಆವರಿಸಿದೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ವಾಡಿಕೆ ಮಳೆ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಶೇ 18 ಮಳೆ ಕೊರತೆ ಪ್ರಮಾಣವು ಕಡಿಮೆ ಇರುವುದರಿಂದ ಬಿತ್ತನೆಯು ಅಧಿಕವಾಗಿದೆ. ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರದ ವಿಶ್ಲೇಷಣೆಯ ಪ್ರಕಾರ ಶೇ 18 ರಷ್ಟು ಮಳೆ ಕೊರತೆಯನ್ನು ‘ಸಾಮಾನ್ಯ’ ಎಂದು ಗುರುತಿಸಲಾಗಿದೆ. ಆದರೆ ಬೇರೆ ತಾಲ್ಲೂಕುಗಳಲ್ಲಿ ಬಿದ್ದಿರುವ ಮಳೆಯನ್ನು ಕೊರತೆ ಎಂದು ಗುರುತಿಸಲಾಗುತ್ತದೆ.

ಬಿತ್ತನೆಗೊಂಡ ಜಮೀನುಗಳಲ್ಲಿ ತೊಗರಿ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹೆಸರು ಬಿತ್ತನೆಯು 5,515 ಹೆಕ್ಟೇರ್‌ಗಳಲ್ಲಿ ಆಗುತ್ತದೆ ಎನ್ನುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 283 ಹೆಕ್ಟೇರ್ ಶೇ 5 ರಷ್ಟು ಮಾತ್ರ ಬಿತ್ತನೆಯಾಗಿದೆ. ಏಕದಳ ಧಾನ್ಯಗಳಾದ ಹೈಬ್ರಿಡ್‌ ಜೋಳ, ಮೆಕ್ಕೆಜೋಳ, ಹೈಬ್ರಿಡ್‌ ಸಜ್ಜೆ, ನವಣೆ ಬಿತ್ತನೆಯು ಒಟ್ಟಾರೆ ಗುರಿ 1,87,182 ಹೆಕ್ಟೇರುಗಳ ಪೈಕಿ 26,967 ಹೆಕ್ಟೇರ್‌ಗಳಲ್ಲಿ ಶೇ 14 ರಷ್ಟು ಮಾತ್ರ ಬಿತ್ತನೆಯಾಗಿದೆ. ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಉದ್ದು, ಹುರುಳಿ, ಆಲಸಂದಿ ಬಿತ್ತನೆಯು 53,765 ಹೆಕ್ಟೇರುಗಳಲ್ಲಿ ಆಗುತ್ತದೆ ಎನ್ನುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೂ 25,991 ಹೆಕ್ಟೇರುಗಳು ಶೇ 48 ರಷ್ಟು ಬಿತ್ತನೆಯಾಗಿದೆ.

ಪರ್ಯಾಯ ಬೆಳೆ: ಈಗಾಗಲೇ ಮುಂಗಾರು ತಡವಾಗಿರುವುದರಿಂದ ಪರ್ಯಾಯ ಬೆಳೆ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ ಎನ್ನುವ ಸಲಹೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಜುಲೈ ಕೊನೆಯವರೆಗೂ ಹತ್ತಿ ಬಿತ್ತನೆ ಮಾಡಬಹುದು. ಆದರೆ, ಆಗಸ್ಟ್‌ ತಿಂಗಳು ಹತ್ತಿ ಬಿತ್ತನೆಗೆ ಸೂಕ್ತವಲ್ಲ. ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದರೆ ಗುಲಾಬಿ ಕಾಯಿಕೊರಕದ ಹಾವಳಿ ಹೆಚ್ಚಾಗುತ್ತದೆ. ಆಗಸ್ಟ್‌ 10 ರವರೆಗೂ ಟಿಎಸ್‌–3ಆರ್‌ ತೊಗರಿ ಬಿತ್ತಬಹುದು. ಬಿಎಸ್‌ಎಂಆರ್–736 ಅಧಿಕ ಅವಧಿ ತಳಿ ಆಗಿರುವುದರಿಂದ ನೀರಾವರಿ ಸೌಲಭ್ಯ ಇರುವ ಕಡೆಗಳಲ್ಲಿ ಮಾತ್ರ ಬಿತ್ತಬೇಕು. ಮೂರು ಬಾರಿ ನೀರು ಕೊಡುವ ಸೌಲಭ್ಯ ಇರುವ ಕಡೆಗಳಲ್ಲಿ ಜಿಆರ್‌ಜಿ–811 ತಳಿ ಬೆಳೆಯಬಹುದು. ಲಿಂಗಸುಗೂರು ತಾಲ್ಲೂಕಿನಲ್ಲಿ ಆಗಸ್ಟ್‌ ತಿಂಗಳು ಸಜ್ಜೆ ಬಿತ್ತನೆ ಮಾಡಬಾರದು; ಅದರ ಬದಲು ಸೂರ್ಯಕಾಂತಿ ಬೆಳೆಯುವುದು ಸೂಕ್ತ ಎಂದು ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಮಳೆ ಹಾಗೂ ಬಿತ್ತನೆ ಮಾಹಿತಿಯನ್ನು ನಿಯಮಾನುಸಾರ ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಕಳುಹಿಸುತ್ತಿದ್ದೇವೆ
– ಚೇತನಾ ಪಾಟೀಲಕೃಷಿ ಇಲಾಖೆಯ ಜಂಟಿ ನಿರ್ದೇಶಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !