ಮಂಗಳವಾರ, ಜುಲೈ 14, 2020
28 °C

ರಾಯಚೂರಿನಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲಾ ಕೇಂದ್ರ ಸೇರಿ ವಿವಿಧೆಡೆ ಶನಿವಾರ ಬೆಳಗಿನ ಜಾವ ಎರಡು ಗಂಟೆಗೂ ಹೆಚ್ಚು ಸಮಯ ಬಿರುಸಿನಿಂದ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ಸಂಗ್ರಹವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ರಾಯಚೂರು ನಗರದ ಮಡ್ಡಿಪೇಟೆ, ಸಿಯಾತಾಲಾಬ್‌ ಬಡಾವಣೆಯ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಎಲ್‌ಬಿಎಸ್‌ ನಗರದಲ್ಲಿ ಮನೆಯೊಂದು ಕುಸಿದಿದೆ. ಮಾನ್ವಿ ಪಟ್ಟಣದ ಕೆಲವು ಓಣಿಗಳಲ್ಲಿ ನೀರು ಕಾಲುವೆಯಂತೆ ಹರಿದಿದೆ. ಕಚ್ಚಾರಸ್ತೆಗಳು ಕೊಚ್ಚಿಹೋಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಮಾನ್ವಿ ತಹಶೀಲ್ದಾರ್‌ ಕಚೇರಿ ಜಲಾವೃತವಾಗಿದೆ.

ಸಿಂಧನೂರು, ಸಿರವಾರ ಮತ್ತು ಮಸ್ಕಿಯಲ್ಲೂ ಮಳೆಯಾಗಿದೆ. ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ತುಂತುರು ಮಳೆ ಬಿದ್ದಿದೆ.

ಇದುವರೆಗೂ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣದಲ್ಲಿ ಇದ್ದಕ್ಕಿದ್ದಂತೆ ತಂಪು ಆವರಿಸಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಮುಂಗಾರು ಬಿತ್ತನೆಗಾಗಿ ಭೂಮಿ ಹದಮಾಡಿಕೊಂಡಿರುವ ರೈತರು ಹರ್ಷಚಿತ್ತರಾಗಿದ್ದಾರೆ. ಜೂನ್‌ನಲ್ಲಿ ಮಳೆಯು ಎಡೆಬಿಡದೆ ಸುರಿದು, ಬಿಡುವು ನೀಡಿದರೆ ಬಿತ್ತನೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದು ರೈತರು ಚರ್ಚಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು