ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಾಗಿ ರಾಜಾ ಅಮರೇಶ್ವರ ನಾಯಕ; ಬಿಜೆಪಿ ಅಲೆಗೆ ಸೋಲುಂಡ ಕಾಂಗ್ರೆಸ್‌ನಬಿ.ಬಿ.ನಾಯಕ

Last Updated 23 ಮೇ 2019, 19:30 IST
ಅಕ್ಷರ ಗಾತ್ರ

ರಾಯಚೂರು: ಕಾಂಗ್ರೆಸ್‌ ಭದ್ರಕೋಟೆ ಎಂದು ಗುರುತಿಸಿಕೊಂಡಿದ್ದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.

2009 ರ ಬಳಿಕ2019 ರಲ್ಲಿ ಮತ್ತೊಮ್ಮೆ ಬರದ ನಾಡಿನಲ್ಲಿ ಕಮಲ ಅರಳಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಬಿಜೆಪಿ ಅಭ್ಯರ್ಥಿ ಸಮಬಲ ಸ್ಪರ್ಧೆ ಒಡ್ಡಿದ್ದು, ಗೆಲುವಿನ ಅಂತರ ಕಡಿಮೆಯಾಗಬಹುದು ಎನ್ನುವ ಲೆಕ್ಕಾಚಾರವು ತಲೆಕೆಳಗಾಗಿದೆ. ನಿರೀಕ್ಷೆ ಮೀರಿದ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಪರವಾದ ಅಲೆಯು ಬಿರುಗಾಳಿಯಾಗಿ ಹೊಮ್ಮಿದೆ.

ಕಾಂಗ್ರೆಸ್‌ ಶಾಸಕರಿರುವ ರಾಯಚೂರು ಗ್ರಾಮೀಣ, ಲಿಂಗಸುಗೂರು ಹಾಗೂ ಶಹಾಪುರ ಕ್ಷೇತ್ರಗಳಲ್ಲಿಯೂ ಬಿಜೆಪಿ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿರುವುದು ಅನಿರೀಕ್ಷಿತ. ಬಿಜೆಪಿ ಶಾಸಕರಿದ್ದರೂ ದೇವದುರ್ಗ ಒಂದು ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ಪರ ಪ್ರಚಾರ ಸಮರ್ಪಕವಾಗಿಲ್ಲ ಎನ್ನಲಾಗಿತ್ತು. ಇದೊಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದೆ. ಅಲ್ಲದೆ, ಸಂಸದ ಬಿ.ವಿ. ನಾಯಕ ಪರ ಒಲವಿನ ಮತದಾರರು ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕೂಡಾ ಮುನ್ನಡೆ ಕಾಯ್ದುಕೊಳ್ಳಲು ಕಾರಣವಾಗಿದೆ.

ಕಳೆದ ಲೋಕಸಭೆ ಚುನಾವಣೆಯಿಂದ ಇವರೆಗೂ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದ ಸುಮಾರು ಮೂರು ಲಕ್ಷ ಮತದಾರರು ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ದೇಶಭಕ್ತಿ ಹಾಗೂ ದೇಶ ರಕ್ಷಣೆ ವಿಷಯವಾಗಿ ಬಿಜೆಪಿ ಪ್ರಚಾರ ಮಾಡಿದ್ದರಿಂದ ಯುವ ಮತದಾರರು ಕಮಲಕ್ಕೆ ಬೆಂಬಲ ಕೊಟ್ಟಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.

ಪರಿಶಿಷ್ಟರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಸಾಂಪ್ರದಾಯಕ ಮತದಾರರ ಬೆಂಬಲ ಸಿಗುತ್ತದೆ ಎನ್ನುವ ಲೆಕ್ಕಾಚಾರವು ಸುಳ್ಳಾಗಿದೆ. ಜಾತಿ, ಧರ್ಮಬೇಧವಿಲ್ಲದೆ ಮೋದಿ ಪರ ಅಲೆಗೆ ಮತದಾರರು ಒಲವು ತೋರಿಸಿರುವುದು ಫಲಿತಾಂಶದಲ್ಲಿ ಕಾಣಿಸಿದೆ.

ಸಂಸದ ಬಿ.ವಿ.ನಾಯಕ ಅವರು ಕಳೆದ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಯಾದಗಿರಿ ಜಿಲ್ಲೆಯತ್ತ ಅಷ್ಟೊಂದು ಗಮನ ಹರಿಸಿರಲಿಲ್ಲ. ಈ ಬಗ್ಗೆ ಸ್ವತಃ ಅವರಿಗೂ ಮನವರಿಕೆಯಾಗಿತ್ತು. ಯಾದಗಿರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಭಾರಿ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ. ಕಾಂಗ್ರೆಸ್‌ ಶಾಸಕರಿದ್ದ ಶಹಾ‍ಪುರ ಕ್ಷೇತ್ರದಲ್ಲೂ ಮುನ್ನಡೆ ಕಾಯ್ದುಕೊಳ್ಳುವುದಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗೆ ಸಾಧ್ಯವಾಗದಿರುವುದು ಗಮನಾರ್ಹ.

ಜೆಡಿಎಸ್‌ ಕ್ಷೇತ್ರದಲ್ಲೂ ಸೋಲು!

ಕಾಂಗ್ರೆಸ್‌ ಮೈತ್ರಿ ಪಕ್ಷವಾದ ಜೆಡಿಎಸ್‌ ಕ್ಷೇತ್ರ ಮಾನ್ವಿಯಲ್ಲೂ ಕಾಂಗ್ರೆಸ್‌ಗೆ ಮುನ್ನಡೆ ಸಾಧ್ಯವಾಗಿಲ್ಲ. ಮಾನ್ವಿ ವಿಧಾನಸಭೆ ಕ್ಷೇತ್ರವು ಕಾಂಗ್ರೆಸ್‌ ಭದ್ರಕೋಟೆ ಎಂದು ಗುರುತಿಸಲಾಗುತ್ತಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಇದೀಗ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ಬಿ.ವಿ. ನಾಯಕ ಅವರಿಗೆ ಮುನ್ನಡೆ ಸಿಗುತ್ತದೆ ಎನ್ನುವ ಲೆಕ್ಕಚಾರವಿತ್ತು. ಅದು ಕೂಡಾ ಮೋದಿ ಪರ ಅಲೆಗೆ ಕೊಚ್ಚಿಹೋಗಿದೆ.

ಸಾಧ್ಯವಾಗದ ಕನಸು?

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಸಂಸದರಾಗಿದ್ದ ದಿ.ವೆಂಕಟೇಶ ನಾಯಕ ರೀತಿಯಲ್ಲಿ ಅವರ ಪುತ್ರ ಬಿ.ವಿ. ನಾಯಕ ಕೂಡಾ ಗೆಲುವು ಮುಂದುವರಿಸುತ್ತಾರೆ ಎನ್ನುವ ಆಶಾಭಾವ ಕಾಂಗ್ರೆಸ್‌ ಮುಖಂಡರಲ್ಲಿತ್ತು. ಗೆಲುವು ತಂದುಕೊಳ್ಳಲು ಪಕ್ಷದ ರಾಜ್ಯ ಮುಖಂಡರು ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಯಚೂರಿಗೆ ಭೇಟಿಕೊಟ್ಟು ಪ್ರಚಾರ ಮಾಡಿದ್ದರು. ಆದರೆ, ಎರಡನೇ ಬಾರಿ ಗೆಲುವಿನ ಕನಸು ನನಸಾಗಲಿಲ್ಲ.

ಒಂಭತ್ತರ ಅದೃಷ್ಟ!

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಪಾಲಿಗೆ ಸಂಖ್ಯೆ 9 ಅದೃಷ್ಟದಾಯಕ ಎಂಬುದು ಸಾಬೀತಾಗಿದೆ.

1989 ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆನಂತರ 10 ವರ್ಷಗಳವರೆಗೆ ಅವರಿಗೆ ಗೆಲುವು ಸಾಧ್ಯವಾಗಿರಲಿಲ್ಲ. 1999 ರಲ್ಲಿ ರಾಯಚೂರಿನ ಕಲ್ಮಲಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡೂ ಬಾರಿಯೂ ಸಚಿವರಾಗಿದ್ದರು. ಇದೀಗ 20 ವರ್ಷಗಳ ಬಳಿಕ 2019 ಕ್ಕೆ ಸಂಸದರಾಗಿದ್ದಾರೆ. ರಾಜಾ ಅಮರೇಶ್ವರ ನಾಯಕ ಅವರಿಗೆ ಸಂಖ್ಯೆ 9 ಅದೃಷ್ಟದಾಯಕ. ಅವರದ್ದೆ ಗೆಲುವಾಗಲಿದೆ ಎಂದು ಕೆಲವು ಜನರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಅದೃಷ್ಟವೋ, ಕಾಕತಾಳಿಯವೋ ನಿಜವಾದಂತಾಗಿದೆ.

ಕಾಂಗ್ರೆಸ್‌ ಸೋಲಿಗೆ ಕಾರಣ?

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಲೆಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಹೀನಾಯ ಸೋಲು ಅನುಭವಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಅಲೆ ಇದ್ದರೂ ಕಡಿಮೆ ಅಂತರದ ಗೆಲುವು ಸಾಧಿಸಿದ್ದರು. ಈ ಬಾರಿ ಅದು ಸಾಧ್ಯವಾಗಿಲ್ಲ. ಮೋದಿ ಪರವಾದ ಅಲೆಗಳ ಅಂದಾಜು ಕಾಂಗ್ರೆಸ್‌ ಅಭ್ಯರ್ಥಿಗೆ ಸಿಗಲಿಲ್ಲ.

ಬಿಜೆಪಿಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಅರಿತು ಚುನಾವಣೆಯ ತಂತ್ರಗಳನ್ನು ಹೆಣೆಯುವಲ್ಲಿ ಬಿ.ವಿ.ನಾಯಕ ವಿಫಲರಾದರು. ಯಾದಗಿರಿ ಜಿಲ್ಲೆಯ ಪ್ರಚಾರ ಸಂದರ್ಭದಲ್ಲಿ ನರೇಂದ್ರಮೋದಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ಪಾಕಿಸ್ತಾನ ಮೇಲಿನ ದಾಳಿಯನ್ನು ಗುಬ್ಬಿಯ ಮೇಲಿನ ಬ್ರಹ್ಮಾಸ್ತ್ರ ಎಂದಿದ್ದ ಹೇಳಿಕೆ ಕೂಡಾ ಮುಳುವಾಯಿತು.

ಮೊದಲ ಸಲ ಅಧಿಕಾರವಿಲ್ಲ!

ರಾಯಚೂರು ಲೋಕಸಭೆ ಕ್ಷೇತ್ರಕ್ಕೆ 1998 ರಲ್ಲಿ ದಿ.ವೆಂಕಟೇಶ ನಾಯಕ ಅವರು ಸಂಸದರಾಗಿ ಆಯ್ಕೆಯಾದ ನಂತರ, ಕಳೆದ 20 ವರ್ಷಗಳಿಂದಲೂ ಅವರ ಕುಟುಂಬದಲ್ಲಿ ಒಬ್ಬರಾದರೂ ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಿದ್ದರು. ದೇವದುರ್ಗ ತಾಲ್ಲೂಕು ಅರಕೇರಾದಲ್ಲಿರುವ ಮನೆ ಎದುರು ಸರ್ಕಾರಿ ಜೀಪು ನಿಂತಿರುತ್ತಿತ್ತು. ಇದೀಗ ಬಿ.ವಿ.ನಾಯಕ ಅವರು ಸೋಲು ಅನುಭವಿಸಿದ್ದು, ಇದೇ ಮೊದಲ ಬಾರಿಗೆ ಕುಟುಂಬದಲ್ಲಿ ಯಾರಿಗೂ ಅಧಿಕಾರವಿಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT