ಆಂಧ್ರದಿಂದ ಕಾಲುವೆ ನಿರ್ಮಾಣಕ್ಕೆ ತೆಲಂಗಾಣ, ಕರ್ನಾಟಕದ ವಿರೋಧ

ಮಾನ್ವಿ: ತಾಲ್ಲೂಕಿನಲ್ಲಿ ತುಂಗಭದ್ರಾ ನದಿಗೆ ಕಟ್ಟಿರುವ ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆ (ಆರ್‌ಡಿಎಸ್)ಯ ಮೇಲ್ಭಾಗದಲ್ಲಿ ಆಂಧ್ರಪ್ರದೇಶದಿಂದ ನಿರ್ಮಿಸುತ್ತಿರುವ ಕಾಲುವೆಗೆ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ.
ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆಯಿಂದ ಕರ್ನಾಟಕದ 5,879 ಎಕರೆ ಹಾಗೂ ತೆಲಂಗಾಣದ 87,500 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ. ಆಂಧ್ರಪ್ರದೇಶದಿಂದ ಕಾಲುವೆ ನಿರ್ಮಿಸಿದರೆ ಈ ನೀರಾವರಿ ಪ್ರದೇಶಕ್ಕೆ ಹೊಡೆತ ಬೀಳಲಿದೆ ಎನ್ನುವ ಆತಂಕ ಶುರುವಾಗಿದೆ.
ಆಂಧ್ರಪ್ರದೇಶ ಸರ್ಕಾರವು ಜಲವಿವಾದ ನ್ಯಾಯಮಂಡಳಿಯ ಆದೇಶ ಉಲ್ಲಂಘಿಸಿದೆ ಎಂದು ತೆಲಂಗಾಣದ ಗಡಿ ಜಿಲ್ಲೆಗಳ ಜನಪ್ರತಿನಿಧಿಗಳು, ರೈತರು ಅಣೆಕಟ್ಟೆಯ ಸ್ಥಳದಲ್ಲಿ ಈಚೆಗೆ ಪ್ರತಿಭಟನೆ ನಡೆಸಿದ್ದರು. ಈ ಹೋರಾಟವನ್ನು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಸಹ ಬೆಂಬಲಿಸಿದ್ದರು.
‘ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ಅಣೆಕಟ್ಟೆಯ ಕೆಳಭಾಗದಿಂದ ನೀರು ಪಡೆಯುವ ಬದಲಾಗಿ ಮೇಲ್ಭಾಗದಲ್ಲಿ ಬಲದಂಡೆಯ ಕಾಲುವೆ ನಿರ್ಮಿಸುತ್ತಿರುವುದು ಕಾನೂನುಬಾಹಿರ’ ಎಂದು ಶಾಸಕ ಬಸನಗೌಡ ದದ್ದಲ ದೂರಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಆಂಧ್ರಪ್ರದೇಶ ಸರ್ಕಾರದ ಕಾಲುವೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶ ವಿಭಜನೆ ನಂತರ 2014ರಲ್ಲಿ ಕೃಷ್ಣಾ ಕೊಳ್ಳದ ಜಲವಿವಾದ ನ್ಯಾಯ ಮಂಡಳಿಯು ಆರ್‌ಡಿಎಸ್ ಕೆಳಭಾಗದಲ್ಲಿ ನದಿಯಿಂದ 4 ಟಿಎಂಸಿ ಅಡಿ ನೀರು ಬಳಕೆಗೆ ಸೂಚಿಸಿತ್ತು. ಆದರೆ, ಮೇಲ್ಭಾಗದಲ್ಲಿ ಆಂಧ್ರ ಸರ್ಕಾರ ಕಾಲುವೆ ನಿರ್ಮಿಸುತ್ತಿರುವುದು ಪ್ರತಿಭಟನೆಗೆ ಕಾರಣವಾಗಿದೆ.
1956ರಲ್ಲಿ ನಿರ್ಮಾಣವಾದ ಆರ್‌ಡಿಎಸ್ ಯೋಜನೆಯಡಿ ಕರ್ನಾಟಕಕ್ಕೆ 1.2 ಟಿಎಂಸಿ ಅಡಿ ನೀರು ಹಾಗೂ ಆಗಿನ ಅವಿಭಜಿತ ಆಂಧ್ರಪ್ರದೇಶಕ್ಕೆ 15.90ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿತ್ತು. ರಾಜ್ಯಗಳು ವಿಭಜನೆಯಾದ ಬಳಿಕ ಆಂಧ್ರಪ್ರದೇಶ ಇದುವರೆಗೂ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಪಡೆಯುತ್ತಿತ್ತು.
***
ರಾಜೋಳ್ಳಿಬಂಡಾ ಅಣೆಕಟ್ಟೆಯ ಮೇಲ್ಭಾಗದಲ್ಲಿ ಕಾಲುವೆ ನಿರ್ಮಾಣ ನ್ಯಾಯಮಂಡಳಿಯ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಅದನ್ನು ತಡೆಯಬೇಕು.
-ಚಾಮರಸ ಮಾಲಿಪಾಟೀಲ, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
***
ಆಂಧ್ರ ಸರ್ಕಾರದಿಂದ ಆರ್‌ಡಿಎಸ್ ಅಣೆಕಟ್ಟೆಯ ಮೇಲ್ಭಾಗದಲ್ಲಿ ಕಾಲುವೆ ಅಕ್ರಮ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ನಮ್ಮ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
-ಬಸನಗೌಡ ದದ್ದಲ, ಶಾಸಕ, ರಾಯಚೂರು ಗ್ರಾಮೀಣ ಕ್ಷೇತ್ರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.