ಶ್ರದ್ಧಾ ಭಕ್ತಿಯ ರಂಜಾನ್‌ ಮಾಸಾಚರಣೆ

ಬುಧವಾರ, ಜೂನ್ 26, 2019
25 °C
ಮಾನ್ವಿ: ಈದ್‌ ಉಲ್‌ ಫಿತ್ರ್ ಹಬ್ಬಕ್ಕೆ ಭರದ ಸಿದ್ಧತೆ

ಶ್ರದ್ಧಾ ಭಕ್ತಿಯ ರಂಜಾನ್‌ ಮಾಸಾಚರಣೆ

Published:
Updated:
Prajavani

ಮಾನ್ವಿ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಪ್ರತಿ ವರ್ಷ ರಂಜಾನ್ ಮಾಸವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೆ.

ಹಿರಿಯರು, ಮಕ್ಕಳು ಪವಿತ್ರವಾದ ಈ ತಿಂಗಳಲ್ಲಿ ಪ್ರತಿ ದಿನ ಉಪವಾಸ ವ್ರತ ಕೈಗೊಳ್ಳುವ ಮೂಲಕ ಶ್ರದ್ಧೆ, ಭಕ್ತಿ ಮೆರೆಯುತ್ತಾರೆ. ಪಟ್ಟಣದ ಪುರಾತನ ಜಾಮಿಯಾ ಮಸೀದಿ, ಮಸ್ಜೀದ್‌–ಎ–ಹಸನಯೀನ್‌, ಖುಬಾ ಮಸ್ಜೀದ್‌ ಸೇರಿದಂತೆ 20ಕ್ಕೂ ಅಧಿಕ ಮಸೀದಿಗಳನ್ನು ತಿಂಗಳಪೂರ್ತಿ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ.

ಪ್ರತಿ ದಿನ ಸಂಜೆ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಮಸೀದಿಗಳಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ. ಪವಿತ್ರ ರಂಜಾನ್‌ ಹಬ್ಬದ ವಿಶೇಷತೆ, ಉಪವಾಸ ವ್ರತದ ಮಹತ್ವ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳ ಕುರಿತು ಧರ್ಮಗುರುಗಳಿಂದ ಉಪನ್ಯಾಸ ಕಾರ್ಯಕ್ರಮಗಳು ಜರುಗುತ್ತವೆ. ಹಬ್ಬದ ಅಂಗವಾಗಿ ಹಲವರು ಬಡವರಿಗೆ ದವಸ ಧಾನ್ಯ, ಬಟ್ಟೆಗಳನ್ನು ದಾನ ಮಾಡುವ ಮೂಲಕ ಹಬ್ಬದ ಆಚರಣೆಗೆ ನೆರವು ನೀಡುತ್ತಾರೆ.

ಪ್ರತಿ ದಿನ ಸಂಜೆ ಉಪವಾಸ ವ್ರತ ಬಿಡುವ ಸಮಯದಲ್ಲಿ ಬಂಧುಗಳು, ಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸುವ ಇಫ್ತಾರ್‌ ಕೂಟಗಳು ಇಲ್ಲಿ ನಡೆಯುತ್ತವೆ. ವಿವಿಧ ಧರ್ಮಕ್ಕೆ ಸೇರಿದ ರಾಜಕೀಯ ಪಕ್ಷಗಳ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಆಯೋಜಿಸುವ ಇಫ್ತಾರ್‌ ಕೂಟಗಳು ಸೌಹಾರ್ದ ಹಾಗೂ ಪರಸ್ಪರ ಬಾಂಧವ್ಯದ ಪ್ರತೀಕವಾಗಿರುತ್ತವೆ.

ರಂಜಾನ್‌ ಮಾಸ ಸಮೀಪಿಸುತ್ತಿದ್ದಂತೆ ಪಟ್ಟಣದ ಬಟ್ಟೆಯ ಅಂಗಡಿಗಳು, ಬಗೆ ಬಗೆಯ ಖಾದ್ಯ ತಯಾರಿಸುವ ಹೋಟೆಲ್‌ಗಳು, ಹಣ್ಣಿನ ಅಂಗಡಿಗಳಲ್ಲಿ ಮಾರಾಟದ ಭರಾಟೆ ಜೋರಾಗಿರುತ್ತದೆ. ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ ಹೆಚ್ಚಾಗಿ ಕಂಡು ಬರುತ್ತದೆ. ಕೆಲವು ಹೋಟೆಲ್‌ ಮತ್ತು ಅಂಗಡಿಗಳು ಕೂಡ ಬಣ್ಣ ಬಣ್ಣದ ವಿದ್ಯದ್ದೀಪಗಳಿಂದ ಅಲಂಕೃತಗೊಂಡು ಗ್ರಾಹಕರನ್ನು ಸೆಳೆಯುತ್ತವೆ.

ಇಷ್ಟದ ಖಾದ್ಯ ಹಲೀಮ್‌: ರಂಜಾನ್‌ ಮಾಸದಲ್ಲಿ ಮುಸ್ಲಿಮರು ಇಷ್ಟ ಪಡುವ ಖಾದ್ಯ ಹಲೀಮ್‌.  ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಇರುವ ಚಾವೂಷ್‌ ಹೋಟೆಲ್‌ ಹಲೀಮ್ ಮಾರಾಟಕ್ಕೆ ಖ್ಯಾತಿ ಪಡೆದಿದೆ. ಪ್ರತಿ ದಿನ ಸಂಜೆ ಉಪವಾಸ ವ್ರತ ಪೂರ್ಣಗೊಂಡ ನಂತರ ಮುಸ್ಲಿಂ ಬಾಂಧವರು ಹಲೀಮ್‌ ತಿನ್ನಲು ಬಯಸುವುದು ಸಾಮಾನ್ಯ. ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಚಾವೂಷ್‌ ಹೋಟೆಲ್‌ ಹಲೀಮ್‌ ದೊರೆಯುವ ಏಕೈಕ ಸ್ಥಳವಾಗಿತ್ತು. ಈ ವರ್ಷ ಮಾನ್ವಿ ದರ್ಬಾರ್‌ ಹೋಟೆಲ್‌ ಕೂಡ ‘ಹಲೀಮ್‌’ ತಯಾರಿಸಿ ಮಾರಾಟ ಮಾಡಿದೆ. ರುಚಿಕರವಾದ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಹಲೀಮ್‌ ಎಲ್ಲರಿಗೂ ಪ್ರಿಯವಾದ ಖಾದ್ಯ.

ಹಬ್ಬದ ದಿನದಂದು ಎಲ್ಲಾ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಹೊಸ ಉಡುಪುಗಳನ್ನು ಧರಿಸಿ ಪಟ್ಟಣದ ಕರಡಿಗುಡ್ಡ ರಸ್ತೆ ಸಮೀಪ ಇರುವ ಈದಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಮಿತ್ರರು, ಬಂಧುಗಳನ್ನು ಭೋಜನಕೂಟಕ್ಕೆ ತಮ್ಮ ಮನೆಗಳಿಗೆ ಆಹ್ವಾನಿಸಿ ಹಬ್ಬದ ಶುಭಾಶಯ ಹಂಚಿಕೊಳ್ಳುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !