ರಾಯಚೂರು: ದಿನ ನಿತ್ಯದ ಬದುಕಿನಲ್ಲಿ ಸ್ವಲ್ಪ ಸಮಯವಾದರೂ ಮನಸ್ಸು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆರೋಗ್ಯಪೂರ್ಣವಾಗಿರಲಿ ಎಂದು ಕಲಾವಿದರು ಆಯೋಜಿಸುವ ಕಾರ್ಯಕ್ರಮಗಳಿಗೆ ಸಮಾಜವು ಸಹಕಾರ ನೀಡಬೇಕು ಎಂದು ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ರಂಗಸ್ವಾಮಿ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ‘ರಂಗಸಿರಿ’ ಪ್ರಶಸ್ತಿ ಪ್ರದಾನ ಹಾಗೂ ಕಲಾ ಪೋಷಕರಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕನಸಾಗಿ ಉಳಿದಿದ್ದವು. ಸದ್ಯಕ್ಕೆ ಸಾಂಕ್ರಾಮಿಕ ರೋಗವು ಇಳಿಮುಖವಾಗಿದ್ದರಿಂದ ಸರ್ಕಾರವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅವಕಾಶ ಮಾಡಿದೆ. ಸಾಮಾಜಿಕ ಕೆಲಸಗಳನ್ನು ಮಾಡುವವರೊಂದಿಗೆ ಸಾರ್ವಜನಿಕರು ಜೊತೆಯಲ್ಲೇ ಸಭಾಂಗಣದಲ್ಲಿ ಆಸೀನರಾಗಿ ಸಹಾಯ ಸಹಕಾರ ನೀಡಿ ಎಂದು ತಿಳಿಸಿದರು.
ಜನರ ಕೊರತೆಯಿಂದ ಧ್ವನಿ ವರ್ಧಕದ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರೆ ಒಬ್ಬ ಕಲಾವಿದ ಅದೆಷ್ಟು ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ರಾಯಚೂರಿನ ಜನರು ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ನುಡಿದರು.
ರಂಗಸ್ವಾಮಿಯವರು ನಗರವಲ್ಲದೇ ಗ್ರಾಮಾಂತರ ಪ್ರದೇಶಗಳಿಗೆ ನಿದ್ದೆ ನೀರಡಿಕೆಯ ಪರಿವಿಲ್ಲದೇ ಏಕಾಂಗಿಯಾಗಿ ತಿರುಗಾಡುತ್ತಾ ಗ್ರಾಮಾಂತರ ಪ್ರತಿಭೆಗಳನ್ನು ಗುರುತಿಸುತ್ತಿದ್ದಾರೆ. ತಮ್ಮ ವೇದಿಕೆಯ ಮೂಲಕ ’ರಂಗಸಿರಿ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ತನು, ಮನ ಹಾಗೂ ಧನಾದಿಗಳ ತ್ರೀಕರಣ ಸಹಾಯ ಸಹಕಾರ ನೀಡಿ ಕಲಾವಿದರನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಅಧ್ಯಕ್ಷ ಸಾವಿತ್ರಿ ಪುರುಶೋತ್ತಮ್ ಮಾತನಾಡಿ, ಕಲಾವಿದ ರಂಗಸ್ವಾಮಿಯವರು ಆಯೋಜಿಸಿದ ಈ ಕಾರ್ಯಕ್ರಮ ತುಂಬ ಅರ್ಥಪೂರ್ಣವಾಗಿದೆ. ಆದರೆ ಸರ್ವ ಸಾರ್ವಜನಿಕರು, ಕಲಾಭಿಮಾನಿಗಳು, ಕಲಾಪೋಷಕರ ಸಹಕಾರ ಅಗತ್ಯ ಎಂದರು.
ವಕೀಲ ದೇವಣ್ಣ ನಾಯಕ್ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ’ರಂಗಸಿರಿ’ ಪ್ರಶಸ್ತಿ ಹಾಗೂ ಕಲಾಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿಂದಪ್ಪ ಅಸ್ಕಿಹಾಳ ಪ್ರಾರ್ಥಿಸಿದರು.
ವೆಂಕಟ ನರಸಿಂಹಲು ತಂಡದವರು ಕಿರು ನಾಟಕ ಪ್ರದರ್ಶಿಸಿದರು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಮಂಜುಳಾ ಅವದೂತ, ಬಿಚ್ಚಾಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ. ರಾಮಣ್ಣ, ಶಿವಾನಂದ ಬಂಕೊಳ್ಳಿ, ಜಿಲ್ಲಾ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರ್ ಮತ್ತಿತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.