ರಾಯಚೂರು: ಜಿಲ್ಲೆಯಾದ್ಯಂತ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಮನೆ ಮಂದಿರಗಳಲ್ಲಿ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಿಗೆ ಸುಣ್ಣಬಣ್ಣ ಮಾಡಲಾಗಿದೆ.
ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಪಡುವಣ ದಿಕ್ಕಿನಲ್ಲಿ ಸೂರ್ಯ ಮುಳಗುತ್ತಿದ್ದಂತೆಯೇ ದೇವಸ್ಥಾನಗಳಲ್ಲಿ ವಿದ್ಯುತ್ ದೀಪಗಳು ಝಗಮಗಿಸಲಾರಂಭಿಸಿವೆ.
ನಗರದ ಸೇರಿದಂತೆ ಹಲವಡೆ ವಿಶೇಷ ಮಂಪಟ ನಿರ್ಮಿಸಿ ದುರ್ಗಾ ದೇವಿಯ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪೂರ್ಣಕುಂಬ ಕಳಸ ಹೊತ್ತ ಮಹಿಳೆಯರು ಮಂಗಳ ವಾದ್ಯ ಸಹಿತ ದೇವಿಯನ್ನು ಬರಮಾಡಿಕೊಂಡರು.
ಜಿಲ್ಲೆಯ ಎಲ್ಲ ದೇವಿ ಮಂದಿರಗಳಲ್ಲಿ ಸಂಜೆ ಘಟಸ್ಥಾಪನೆ ಮಾಡುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡ ಲಾಯಿತು. ಮಹಿಳೆಯರು ಮಕ್ಕಳು ಆದಿಯಾಗಿ ಮಂದಿರಗಳಲ್ಲಿ ಆಯೋಜಿ ಸಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು. ನಗರದ ಬೇರೂನ್‌ಕಿಲ್ಲಾ ಖಾಸಬಾವಿಯಲ್ಲಿ ಕ್ಷತ್ರೀಯ ಸಮಾಜದ ವತಿಯಿಂದ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಾನುವಾರ ಘಟ್ಟ ಸ್ಥಾಪನೆ ಮಾಡಲಾಯಿತು. ಒಂಬತ್ತು ದಿನ ನಿತ್ಯ ವಿಶೇಷ ಪೂಜೆ, ಅರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.
ನಗರದ ವೀರಶೈವ, ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ಬೆಳಿಗ್ಗೆ ವಾದ್ಯವೈಭವದೊಂದಿಗೆ ಅಂಬಾಭವಾನಿ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಬೇಸ್ತವಾರ ಪೇಟೆಯ ಭವಾನಿ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಸಂಜೆ ದೇವಸ್ಥಾನದಲ್ಲಿ ಘಟಸ್ಥಾಪನೆ ಮಾಡಲಾಯಿತು.
ಡ್ಯಾಡಿ ಕಾಲೊನಿಯ ಏಳುಮಕ್ಕಳ ತಾಯಿ ದೇವಿ ಮಂದಿರಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾ ಗಿದೆ. ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಘಟಸ್ಥಾಪನೆ ಮಾಡಲಾಗಿದೆ. ಮಹಿಳೆಯರು ಪೂಜೆಯ ನಂತರ ದೇವಿಗೆ ನೈವೇದ್ಯ ಸಮರ್ಪಿಸಿ ತೆಂಗಿನ ಒಡೆದು ಭಕ್ತಿಭಾವ ತೋರಿದರು.
ನಗರದ ಬಿಲ್ವ ಮಂದಿರದಲ್ಲಿ ಶರನ್ನವರಾತ್ರಿ ಪ್ರಯುಕ್ತ ಜಗನ್ಮಾತೇ ಶ್ರೀ ದುರ್ಗಾ ಪರಮೇಶ್ವರಿ ಬನ್ನಿ ಮಹಾ ಕಾಳಿಕಾಂಬ ದೇವಿಯ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಪ್ರಾಂಗಣದಲ್ಲಿ ಜಗಮಗಿಸುವ ವಿದ್ಯುತ್ ದೀಪ, ಕುಡಿಯುವ ನೀರು, ಸ್ವಚ್ಛತೆ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 20ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀದುರ್ಗಾ ಮಾತೆಯ ಚಂಡಿ ಹೋಮದ ಅಗ್ನಿ ಸ್ಪರ್ಶ ಶ್ರೀ ಶಾಂತಮಲ್ಲ ಶಿವಾಚಾರ್ಯರಿಂದ ನಡೆಯಲಿದೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 24ರಂದು ವಿಜಯ ದಶಮಿಯ ಅಂಗವಾಗಿ ಸಂಜೆ 5ಕ್ಕೆ ದೇವಸ್ಥಾನದಲ್ಲಿ ಬನ್ನಿ ಮಹಾ ಪೂಜೆಯ ನಂತರ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ.
ಮಮದಾಪೂರುದಲ್ಲಿ ನಂದಿಕೋಲು ಮೆರವಣಿಗೆ: ರಾಯಚೂರು ತಾಲ್ಲೂಕಿನ ಸುಕ್ಷೇತ್ರ ಮಮದಾಪೂರು ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ಘಟಸ್ಥಾಪನೆ ಕಾರ್ಯಕ್ರಮ ನಡೆಯಿತು.
ಕಳಸ ಕನ್ನಡಿ, ಡೊಳ್ಳು ಕುಣಿತ, ವೀರಯ್ಯ ಸ್ವಾಮಿ ಹಿರೇಮಠ ವೀರಗಾಸೆ, ಬೂದುಗುಂಪ, ಕಾರಟಗಿ, ನಂದಿಕೋಲು ಕುಣಿತದೊಂದಿಗೆ ಪಲ್ಲಕ್ಕಿ ಹಾಗೂ ನಂದಿಕೋಲು ಮೆರವಣಿಗೆ ನಡೆಯಿತು. ಸಂಜೆ ನರೇಶ ಕುಮಾರ ದುರ್ವಾ ನೇತೃತ್ವದಲ್ಲಿ ದಾಂಡಿಯಾ ನಡೆಯಿತು. ಸಣ್ಣ ಹುಲಿಗೆಮ್ಮ ಕೊನಿಂಟಿ ಮಾರೆಪ್ಪ, ಮಮದಾಪೂರು ಅನ್ನ ದಾಸೋಹ ಮಾಡಿದರು.
ಶ್ರೀದೇವಿಯ ರಜತ ಮೂರ್ತಿ ಪ್ರತಿಷ್ಠಾಪನೆ: ಮಾನ್ವಿ ಪಟ್ಟಣದ ಕಲ್ಮಠ, ಹಿರೇಕೊಟ್ನೇಕಲ್ ಗ್ರಾಮದ ತಾಯಮ್ಮ ದೇವಿ ದೇವಸ್ಥಾನ, ಕರೇಗುಡ್ಡ ಗ್ರಾಮದ ಮಹಾಂತೇಶ್ವರ ಮಠ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶ್ರೀದೇವಿ ಪುರಾಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಲ್ಮಠದಲ್ಲಿ ಬೆಳಿಗ್ಗೆ ಶ್ರೀದೇವಿಯ ರಜತ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಹಿರೇಕೊಟ್ನೇಕಲ್ ಗ್ರಾಮದ ತಾಯಮ್ಮ ದೇವಿ ದೇವಸ್ಥಾನದಲ್ಲಿ ಪುರಾಣಿಕರ ನೂತನ ಕೊಠಡಿ ಉದ್ಘಾಟಿಸಲಾಯಿತು.
ಗಂಗಾ ಪೂಜೆ, ರುದ್ರಾಭಿಷೇಕ ಹಾಗೂ ತಾಯಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಕರೇಗುಡ್ಡದ ಮಹಾಂತೇಶ್ವರ ಮಠದಲ್ಲಿ ನವರಾತ್ರಿ ಉತ್ಸವ ಹಾಗೂ ಶ್ರೀದೇವಿ ಪುರಾಣ ಆರಂಭೋತ್ದವ ಪ್ರಯುಕ್ತ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು.
ಮಂತ್ರಾಲಯದಲ್ಲಿ ವಿಶೇಷ ಪೂಜೆ: ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಮಂತ್ರಾಲಯದ ಶ್ರೀ ಮಠದಲ್ಲಿ ಘಟ ಸ್ಥಾಪನಾ ಪೂಜೆ ನೆರವೇರಿಸುವ ಮೂಲಕ ನವರಾತ್ರಿ ಉತ್ಸವ ಉದ್ಘಾಟಿಸಿದರು.
ಎಸ್‌ಜಿಎಸ್ ವಿದ್ಯಾಪೀಠದ ಪಂಡಿತರು ಮತ್ತು ವಿದ್ಯಾರ್ಥಿಗಳು ವೇದ ಮಂತ್ರಗಳು ಮತ್ತು ದುರ್ಗಾಸೂಕ್ತವನ್ನು ಪಠಿಸಿದರು. ನಂತರ ಶ್ರೀ ಮಂಚಾಲಮ್ಮ ಸನ್ನಿಧಾನಕ್ಕೆ ಶ್ರೀ ಸುಬುಧೇಂದ್ರ ತೀರ್ ಭೇಟಿ ನೀಡಿ ಶ್ರೀ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಂಚಾಲಮ್ಮನ ಪ್ರತಿಮೆಗೆ ತೆಂಗಿನಕಾಯಿಯಿಂದ ಅಲಂಕರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.