ರಾಯರ ವರ್ಧಂತಿ ಉತ್ಸವ: ನವರತ್ನ ರಥೋತ್ಸವ

ಭಾನುವಾರ, ಮಾರ್ಚ್ 24, 2019
32 °C
ನಾದಹಾರ, ಶೇಷವಸ್ತ್ರ ಸಮರ್ಪಣೆ: ಶ್ರೀ ಗುರು ವೈಭವೋತ್ಸವ ಸಂಪನ್ನ

ರಾಯರ ವರ್ಧಂತಿ ಉತ್ಸವ: ನವರತ್ನ ರಥೋತ್ಸವ

Published:
Updated:
Prajavani

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 398ನೇ ಪಟ್ಟಾಭಿಷೇಕ ಮಹೋತ್ಸವದೊಂದಿಗೆ ಆರಂಭವಾಗಿದ್ದ ಶ್ರೀ ಗುರು ರಾಯರ ವೈಭವೋತ್ಸವ ಧಾರ್ಮಿಕ ಕಾರ್ಯಕ್ರಮಗಳು, ಒಂದು ವಾರದ ಬಳಿಕ ಬುಧವಾರ ನಡೆದ ಸಂಭ್ರಮದ 424ನೇ ವರ್ಧಂತಿ ಉತ್ಸವದೊಂದಿಗೆ ಸಂಪನ್ನವಾದವು.

ವರ್ಧಂತಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಮತ್ತು ಭಕ್ತಿ ಸಮರ್ಪಿಸಿ ಪುಣಿತರಾಗಲು ದೇಶದ ವಿವಿಧ ರಾಜ್ಯಗಳಿಂದ ನೂರಾರು ಭಕ್ತರು ಭಾಗಿಯಾಗಿದ್ದರು. ಪ್ರಮುಖವಾಗಿ, ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಟ್ರಸ್ಟ್‌ನ 400 ಕಲಾವಿದರು ನುಡಿಸಿದ ವಾದ್ಯಗಳು ಮತ್ತು ಗಾಯನದಿಂದ ಮಂತ್ರಾಲಯದಲ್ಲಿ ಹೊಸದೊಂದು ಭಾವಲೋಕ ಸೃಷ್ಟಿಯಾಗಿತ್ತು. ಪ್ರತಿ ದಿಕ್ಕಿನಲ್ಲೂ ಸಂಗೀತ ನೀನಾದ ಮೊಳಗಿ ಸಂಗೀತ ಸ್ವರಕ್ಕೆ ತಲೆದೂಗಿದಂತಿತ್ತು.

ಸಮೂಹ ಗಾಯನದ ಸುಸ್ವರದಲ್ಲಿ ಹೊಮ್ಮಿದ ಝೇಂಕಾರಕ್ಕೆ ಇಡೀ ಪರಿಸರ ನಾದಮಯವಾಗಿತ್ತು. ವೀಣೆಗಳ ಮಂದ ಸ್ವರ, ಮೃದಂಗಗಳಿಂದ ಹೊಮ್ಮಿದ ಥಕ್‌ ಥೈ ತಾಳ, ಸುಮಂಗಲಿಯರ ಗಾಯನಕ್ಕೆ ಎಲ್ಲರೂ ಮೈಮನ ಮರೆತು ರಾಯರ ಆರಾಧನೆಯಲ್ಲಿ ಲೀನರಾಗಿದ್ದರು.

ನಾದಹಾರ ಟ್ರಸ್ಟ್‌ ಭಕ್ತರು ರಾಯರ ಪೂಜೆಗಾಗಿ ಚಿನ್ನದ ಬಟ್ಟಲು, ರಜತ ತಂಬಿಗೆ ಹಾಗೂ ಮಂಚಾಲಮ್ಮ ದೇವಿಗೆ ಬೆಳ್ಳಿಯ ವೀಲ್ಯದೆಲೆ ಮಾಲೆ ಸಮರ್ಪಣೆ ಮಾಡಿದರು.

ಅನುಗ್ರಹ ಸಂದೇಶ ನೀಡಿದ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ‘ತಿರುಪತಿ ತಿರುಮಲದ ತಿಮ್ಮಪ್ಪನಿಗೂ ಮಂತ್ರಾಲಯಕ್ಕೂ ಅವಿನಾಭಾವ ನಂಟು ಪ್ರಾಚೀನ ಕಾಲದ್ದು. ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಅಲ್ಲಿಂದಲೇ ಶೇಷವಸ್ತ್ರಗಳನ್ನು ಕಳುಹಿಸುವ ಸಂಪ್ರದಾಯ ಮೊದಲಿನಿಂದ ನಡೆದುಕೊಂಡು ಬಂದಿದೆ. ಶ್ರೀ ರಾಘವೇಂದ್ರ ಸ್ವಾಮಿಗಳೊಂದಿಗೆ ಶ್ರೀನಿವಾಸ ದೇವರು ಭಕ್ತರಿಗೆ ಅನುಗ್ರಹಿಸುವ  ಶುಭದಿನ ಇದಾಗಿದೆ’ ಎಂದರು.

‘ತಿರುಪತಿಯಲ್ಲಿ ಗುರುನಿವಾಸ ನಿರ್ಮಿಸಲು ಮತ್ತೊಂದು ಈ ಹಿಂದೆ ಒಂದು ಸ್ಥಳ ನೀಡಲಾಗಿತ್ತು. ಆಗಿನ ಸ್ವಾಮೀಜಿಗಳು 33 ಕೋಣೆಗಳ ಛತ್ರ ನಿರ್ಮಿಸಿದ್ದರು. ಈಗ ಅದನ್ನು ಸಂಪೂರ್ಣ ನವೀಕರಣ ಮಾಡಲಾಗಿದ್ದು, ಮಾರ್ಚ್‌ 31 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಈಗ ದೇವಸ್ಥಾನ ಸಮಿತಿಯಿಂದ ಮೂರನೇ ಸ್ಥಳವನ್ನೂ ನೀಡಿದ್ದು, ಅಲ್ಲಿ ದೊಡ್ಡ ಛತ್ರ, ಕಲ್ಯಾಣ ಮಂಟಪ, ಭಕ್ತರ ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಅದೂ ಪೂರ್ಣಗೊಳ್ಳಿದೆ ಎಂದರು.

ರಥೋತ್ಸವ: ನವರತ್ನ ಖಚಿತ ರಥದಲ್ಲಿ ರಾಘವೇಂದ್ರ ಸ್ವಾಮಿಗಳ ಪ್ರಭಾವಳಿಯನ್ನಿಟ್ಟು ಮಠದ ಪ್ರಾಂಗಣದಲ್ಲಿ ರಥೋತ್ಸವ ಜರುಗಿಸಲಾಯಿತು. ರಾಯರ ಬೃಂದಾವನ ಹಾಗೂ ಮೂಲ ರಾಮದೇವರಿಗೆ ಶ್ರೀಗಳು ಲಕ್ಷ ಪುಷ್ಪಾರ್ಚನೆ ಪೂಜೆ ನೆರವೇರಿಸಲಾಯಿತು.

ಮತದಾನ ಮಾಡಿ

‘ಮತದಾನ ದೇಶದ ಪ್ರತಿಯೊಬ್ಬರಿಗೆ ಸಂವಿಧಾನ ನೀಡಿದ ಹಕ್ಕು. ಪ್ರತಿಯೊಬ್ಬರು ಮತದಾನ ಮಾಡಬೇಕು. ಮತದಾರರು ಯಾವುದೇ ಒತ್ತಡ ಆಮಿಷಗಳಕ್ಕೊಳ ಗಾಗದೇ ನಿರ್ಭಿತರಾಗಿ ಮತದಾನ ಮಾಡಬೇಕು’ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

ವರ್ಧಂತಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶ ಅಭಿವೃದ್ಧಿ, ಭದ್ರತೆ ಕುರಿತು ಮತದಾರರು ತಿಳಿದುಕೊಳ್ಳಬೇಕು. ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪ ಮಾಡಬಾರದು. ಉತ್ತಮ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆಯನ್ನು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !