ಬುಧವಾರ, ನವೆಂಬರ್ 20, 2019
27 °C
ಸಿಂಧನೂರು: ಸಾಮೂಹಿಕ ರಜೆ ಹಾಕಿ ಪ್ರತಿಭಟನೆ

ನಿಯಮಿತ ವೇತನ ಬಿಡುಗಡೆಗೆ ಆಗ್ರಹ

Published:
Updated:
Prajavani

ಸಿಂಧನೂರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದೆ 4 ಅಥವಾ 6 ತಿಂಗಳಿಗೊಮ್ಮೆ ವೇತನ ಕೊಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ಮತ್ತು ಸಹಾಯಕಿಯರ ಸಂಘದ ಸದಸ್ಯರು ಸೋಮವಾರ ಒಂದು ದಿನ ಸಾಂಕೇತಿಕವಾಗಿ ಸಾಮೂಹಿಕ ರಜೆ ಹಾಕಿ ಆಸ್ಪತ್ರೆಯ ಎದುರು ಧರಣಿ ನಡೆಸಿದರು.

‘ಪ್ರತಿ ತಿಂಗಳು 1ನೇ ತಾರೀಖಿಗೆ ಸಂದಾಯವಾಗಬೇಕಾದ ವೇತನ ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆಯಲ್ಲಿ ವೇತನ ಬಟವಾಡೆ ಮಾಡಲು ಅನುದಾನದ ತೊಂದರೆಯಿದ್ದ ಕಾರಣ ವೇತನ ಬಿಡುಗಡೆಗೆ ವಿಳಂಬವಾಗುತ್ತಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ನೌಕರರು ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಹಲವಾರು ಬಾರಿ ಸಮಸ್ಯೆ ಕುರಿತು ಲಿಖಿತ ರೂಪದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ. ಪ್ರಸ್ತುತ ನಾಲ್ಕು ತಿಂಗಳಿನಿಂದ ವೇತನ ಸಂದಾಯವಾಗದ ಕಾರಣ ತೀವ್ರ ತೊಂದರೆಯಾಗಿದೆ’ ಎಂದು ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಂಗನಾಥಗುಡಿ ಹೇಳಿದರು.

‘ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಮಳೆ-ಬಿಸಿಲು, ಹಗಲು-ರಾತ್ರಿ ಎನ್ನದೆ ಸಾಂಕ್ರಾಮಿಕ ರೋಗ ಹಾಗೂ ಪ್ರಾಣಾಂಕಿತ ರೋಗಗಳಾದ ಕಾಲರಾ, ಮಲೇರಿಯಾ, ಡೆಂಗೆ, ಚಿಕುನ್‌ಗುನ್ಯ, ಕ್ಷಯ, ಕುಷ್ಠರೋಗ, ಆನೆಕಾಲು ರೋಗ ಹೀಗೆ ಹತ್ತಾರು ಕಾರ್ಯಕ್ರಮಗಳ ಯಶಸ್ವಿಗೆ ಶ್ರಮಿಸುತ್ತಿರುವ ನೌಕರರಿಗೆ ವೇತನ ಬಿಡುಗಡೆಗೆ ನಿರ್ಲಕ್ಷ್ಯ ತೋರು ತ್ತಿರುವುದು ಸರಿಯಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಶಿವನಗೌಡ ಗೊರೆಬಾಳ, ಬಸವರಾಜ ಹಿರೇಗೌಡರ್ ಇದ್ದರು.

ಪ್ರತಿಕ್ರಿಯಿಸಿ (+)