ಸೋಮವಾರ, ಏಪ್ರಿಲ್ 12, 2021
29 °C
ಗ್ರಾ.ಪಂ. ಸದಸ್ಯ ಬಸವರಾಜ ಸೇವೆಗೆ ಗ್ರಾಮಸ್ಥರ ಮೆಚ್ಚುಗೆ

ಬೀದಿ ದೀಪಗಳ ದುರಸ್ತಿಗೆ ಮುಂದಾದ ಸದಸ್ಯ!

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮದ್ಲಾಪುರ (ಮಾನ್ವಿ): ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಸೋಲಾರ್ ಬೀದಿ ದೀಪಗಳನ್ನು ಖುದ್ದಾಗಿ ದುರಸ್ತಿಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮದ್ಲಾಪುರ ಗ್ರಾಮದ 1ನೇ ವಾರ್ಡಿನಿಂದ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯ ಬಸವರಾಜ ಐಟಿಐ ಪದವೀಧರ. ಎಲೆಕ್ಟ್ರಾನಿಕ್ ವಿಷಯದಲ್ಲಿ ತಮಗಿರುವ ಜ್ಞಾನ, ವೃತ್ತಿ ಅನುಭವದ ಆಧಾರದಲ್ಲಿ ಗ್ರಾಮದ ಸೋಲಾರ್ ಬೀದಿ ದೀಪಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ನಂತರ ಗ್ರಾಮದ ಬೀದಿ ದೀಪಗಳ ಅವ್ಯವಸ್ಥೆ ಬಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಗಮನಕ್ಕೆ ತಂದಿದ್ದರು. ಸೂಕ್ತ ಸ್ಪಂದನೆ ದೊರಕದ ಕಾರಣ ನಿರುಪಯುಕ್ತ ಸೋಲಾರ್ ವಿದ್ಯುದ್ದೀಪಗಳನ್ನು ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸುತ್ತಿದ್ದಾರೆ.

ಗ್ರಾಮದ ಬೀದಿಗಳಲ್ಲಿ ಕೆಟ್ಟಿರುವ 10 ಸೋಲಾರ್ ವಿದ್ಯುದ್ದೀಪಗಳ ಪೈಕಿ 3 ದೀಪಗಳನ್ನು ದುರಸ್ತಿಗೊಳಿಸಿ ಬೆಳಕು ನೀಡುವಂತೆ ಮಾಡಿದ್ದಾರೆ.

ಸೋಲಾರ್ ವಿದ್ಯುದ್ದೀಪಗಳ ಡಿಸಿ ಪರಿವರ್ತಕ, ಬ್ಯಾಟರಿ ಮತ್ತಿತರ ಸಲಕರಣೆಗಳನ್ನು ತಾವೇ ದುರಸ್ತಿ ಮಾಡಿದ್ದಾರೆ. ಗ್ರಾಮದ ಎಲ್ಲಾ ಕಡೆ ಇರುವ ಸೋಲಾರ್ ವಿದ್ಯುದ್ದೀಪಗಳನ್ನು ದುರಸ್ತಿಗೊಳಿಸುವುದಾಗಿ ಅವರು ಹೇಳಿದ್ದಾರೆ. ಗ್ರಾ.ಪಂ ಸದಸ್ಯ ಬಸವರಾಜ ಅವರ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾನ್ವಿ ಪಟ್ಟಣದ ಬಸವ ಐಟಿಐ ಕಾಲೇಜಿನಿಂದ ಎಲೆಕ್ಟ್ರಾನಿಕ್ ಮೆಕಾನಿಕ್ ವಿಭಾಗದಲ್ಲಿ ಐಟಿಐ ಪದವಿ ಪಡೆದಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಎರಡು ವರ್ಷ ಕೆಲಸ ಮಾಡಿ, ಈಗ ಗ್ರಾಮದಲ್ಲಿ ಮೊಬೈಲ್ ಫೋನ್ ದುರಸ್ತಿ ಹಾಗೂ ಮಾರಾಟದ ಅಂಗಡಿ ತೆರೆದಿದ್ದಾರೆ. ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಳೆಯರ ಒತ್ತಾಯದ ಮೇರೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಗ್ರಾಮದ ಜನತೆಗೆ ಸುಸಜ್ಜಿತ ರಸ್ತೆ, ವಿದ್ಯುತ್ ಪೂರೈಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಗುರಿ ಹೊಂದಿದ್ದಾರೆ. ತಮ್ಮ ಸಾಮಾಜಿಕ ಸೇವಾ ಕಾರ್ಯಕ್ಕೆ ಬಸವ ಐಟಿಐ ಕಾಲೇಜು ಪ್ರಾಂಶುಪಾಲ ತಿಪ್ಪಣ್ಣ ಎಂ.ಹೊಸಮನಿ ಮತ್ತು ಗ್ರಾಮದ ಗೆಳೆಯರ ಪ್ರೋತ್ಸಾಹ ಕಾರಣ ಎಂದು ಬಸವರಾಜ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು