ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ‘ಜನತಾ ಕರ್ಫ್ಯೂ’ಗೆ ಸಹಕರಿಸಲು ಮನವಿ

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ, ಜನರು ಗುಂಪಾಗಿ ಬಾರದಂತೆ ಸೂಚನೆ
Last Updated 21 ಮಾರ್ಚ್ 2020, 14:16 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಕರೆಯಂತೆ ಮಾರ್ಚ್‌ 22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರಗೆ ಜನರೇ ಸ್ವಯಂ ಪ್ರೇರಿತರಾಗಿ ’ಜನತಾ ಕರ್ಪ್ಯೂ’ ವಿಧಿಸಿಕೊಂಡು ಮನೆಯಲ್ಲಿಯೇ ಸುರಕ್ಷಿತವಾಗಿ ಇರುವಂತೆ ಮನವಿ ಮಾಡಲಾಗಿದೆ.

ಈಗಾಗಲೇ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ನಾಲ್ಕು ಜನರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಏಕಕಾಲದಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಸೇರದಂತೆ ನಿರ್ಭಂಧಿಸಲಾಗಿದೆ. ಮದುವೆ ಸಮಾರಂಭಗಳನ್ನು ಮುಂದೂಡುವುದು ಹಾಗೂ ಜಾತ್ರೆ, ಸಂತೆ, ಉರುಸ್, ಉತ್ಸವಗಳು ಮತ್ತು ಮಾಲ್ಸ್, ಶಾಪಿಂಗ್ ಮಾರ್ಟ್ಸ್ ಮತ್ತು ಬಾರ್‌ಗಳು ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾರ್ಚ್‌ 31 ರವರೆಗೆ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕರ ತುರ್ತು ಅಗತ್ಯತೆಯನ್ನು ಪರಿಗಣಿಸಿ ಕಿರಾಣಿ ಸಾಮಗ್ರಿ, ರೊಟ್ಟಿ ಕೇಂದ್ರ, ತರಕಾರಿ, ಹಣ್ಣಿನ ಅಂಗಡಿ, ಹಾಲಿನ ಅಂಗಡಿ, ಔಷಧಿ ಅಂಗಡಿ, ದಿನ ಪತ್ರಿಕೆ ಮಾರಾಟ ಮಾಡುವ ಮಳಿಗೆ ತೆರೆಯಲು ಮಾತ್ರ ಅವಕಾಶವಿರುತ್ತದೆ. ಹೋಟೆಲ್‌ಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಹೋಟೆಲ್‌ನಲ್ಲಿ ತಿಂಡಿ ಬಡಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ.

ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ, ಪೋಲೀಸ್ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಜಿಲ್ಲೆಯನ್ನು ಪ್ರವೇಶಿಸುವ ಎಲ್ಲಾ ಪ್ರಮುಖ ರಸ್ತೆಗಳಿಗೆ ಚೆಕ್‌ಪೋಸ್ಟ್ ಸ್ಥಾಪಿಸಿ ಅಧಿಕಾರಿ, ಸಿಬ್ಬಂದಿ ನಿಯೋಜಿಸಿ, ಚುನಾವಣಾ ಮಾದರಿಯಲ್ಲಿ ಎಸ್.ಎಸ್.ಟಿ ತಂಡಗಳನ್ನು ಮತ್ತು ನಗರ, ಪಟ್ಟಣ ಗ್ರಾಮಗಳಲ್ಲಿ ಜನ ನಿಬಿಡ ಪ್ರದೇಶದಲ್ಲಿ ಜನರನ್ನು ಚದುರಿಸಲು ಎಫ್.ಎಸ್.ಟಿ / ಕ್ಷಿಪ್ರ ಪ್ರತಿಕ್ರೀಯೆ ತಂಡ (ರ‍್ಯಾಪಿಡ್ ರೆಸ್ಪೋನ್ಸ್)ಗಳನ್ನು ನೇಮಿಸಲಾಗಿದೆ.

ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಒಳ ಬರುವ ಮತ್ತು ಹೊರ ಹೋಗುವ ಪ್ರಯಾಣಿಕರ ಮನವೊಲಿಸಿ ಮರಳಿಸುವ ಕ್ರಮ ವಹಿಸಲಾಗಿದೆ. ಎಸ್.ಎಸ್.ಟಿ ಮತ್ತು ಎಫ್.ಎಸ್.ಟಿ ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡಲು ಕ್ರಮ ವಹಿಸಲಾಗಿದೆ.

ಸರ್ಕಾರಿ ಸೇವೆ: ಜಿಲ್ಲೆಯ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ, ಮತ್ತು ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಸರ್ಕಾರಿ ಕಚೇರಿಗಳಿಗೆ ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರು ಭೇಟಿ ನೀಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುವುದು.

ಮನೆಯಲ್ಲಿ ನಿಗಾ ವಹಿಸಿರುವ ಇಲ್ಲಿಯವರೆಗೆ ಗುರುತಿಸಿದ ವ್ಯಕ್ತಿಗಳಿಗೆ ‘ಆರೋಗ್ಯಕ್ಕಾಗಿ ದಿಗ್ಬಂಧನ’ದಲ್ಲಿ ಎಂಬ ಸೀಲ್‌ನ್ನು ಕಡ್ಡಾಯವಾಗಿ ಸೀಲ್ ಹಾಕಲು ವ್ಯವಸ್ಥೆ ಮಾಡಲಾಗಿರುತ್ತದೆ. ಇಂತಹ ವ್ಯಕ್ತಿಗಳ ಕೂಡ ಅವರ ಕುಟುಂಬ ಸದಸ್ಯರಿಗೂ ಸೀಲ್ ಹಾಕಿ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಆದಕಾರಣ ಸಾರ್ವಜನಿಕರು ಈ ರೀತಿ ಸೀಲ್ ಹೊಂದಿದ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದರೆ ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಸಂಖ್ಯೆ 1950ಗೆ ಮತ್ತು ಸಂಬಂಧಿಸಿದ ಪೋಲೀಸ್ ಸಿಬ್ಬಂದಿಗಳಿಗೆ, ಸಹಾಯಕ ಆಯುಕ್ತರಿಗೆ, ತಹಸೀಲ್ದಾರರಿಗೆ, ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT