ಕವಿತಾಳ: ಮಳೆ ಕೊರತೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ಮತ್ತು ದರ ಏರಿಕೆಯಿಂದ ಗ್ರಾಹಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿರುವ ದೃಶ್ಯ ಪಟ್ಟಣದಲ್ಲಿ ಬುಧವಾರ ನಡೆದ ವಾರದ ಸಂತೆಯಲ್ಲಿ ಕಂಡು ಬಂತು.
ಕಳೆದ ವಾರ ಒಂದು ಕೆ.ಜಿಗೆ ₹40ರಂತೆ ಮಾರಾಟವಾಗಿದ್ದ ಟೊಮೊಟೊ ದರ ಈ ವಾರ ₹100 ಆಗಿದ್ದು ಗ್ರಾಹಕರು ಕಂಗಾಲಾಗುವಂತೆ ಮಾಡಿದೆ. ಹಸಿಮೆಣಸಿನಕಾಯಿ ₹120, ಆಲೂಗಡ್ಡೆ ₹ 80, ಹಿರೇಕಾಯಿ, ಚವಳಿಕಾಯಿ, ಸೌತೆಕಾಯಿ, ಹಾಗಲಕಾಯಿ ಮತ್ತಿತರ ತರಕಾರಿ ಬೆಲೆ ಹೆಚ್ಚಳವಾಗಿದೆ.
‘ದರ ಏರಿಕೆಯಿಂದ ಮದುವೆ ಮತ್ತಿತರ ಸಮಾರಂಭಗಳಿಗೆ ಹೆಚ್ಚಿನ ಪ್ರಮಾಣದ ತರಕಾರಿ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಆದರೂ ಖರೀದಿ ಮಾಡುವುದು ಅನಿವಾರ್ಯವಾಗಿದೆ’ ಎಂದು ಬಸವರಾಜ ಹೇಳಿದರು.
‘₹300 ರಿಂದ ₹ 400 ಹಣದಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ತರಕಾರಿ ಖರೀದಿಸುತ್ತಿದ್ದೆವು. ಇದೀಗ ಅಷ್ಟೇ ಹಣದಲ್ಲಿ ಮೂರು ದಿನಗಳಿಗೆ ಸರಿಹೋಗುವಷ್ಟು ತರಕಾರಿ ಬರುತ್ತಿದೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ದುಸ್ತರವಾಗಿದೆ. ಮಳೆ ಬಾರದ ಕಾರಣ ಜಮೀನುಗಳಲ್ಲಿ ಕೆಲಸ ಇಲ್ಲ. ಹೀಗಾಗಿ ಕೂಲಿ ಕೆಲವೂ ಸಿಗುತ್ತಿಲ್ಲ. ಇದೀಗ ತರಕಾರಿ, ಬೇಳೆ ಕಾಳು ದರ ಏರಿಕೆಯಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ, ಸರ್ಕಾರ ದರ ನಿಯಂತ್ರಣದ ಬಗ್ಗೆ ಯೋಚಿಸಬೇಕು’ ಎಂದು ರೇಣುಕಾ, ನಾಗಮ್ಮ, ಪದ್ದಮ್ಮ ಮತ್ತು ಸಾಭಮ್ಮ ಹೇಳಿದರು.
‘ಮಳೆ ಕೊರತೆ ಕಾರಣ ಸುತ್ತಮುತ್ತಲಿನ ಹಳ್ಳಿಗಳಿಂದ ಸ್ಥಳೀಯ ಮಾರುಕಟ್ಟೆಗೆ ನಿಯಮಿತವಾಗಿ ತರಕಾರಿ ಬರುತ್ತಿಲ್ಲ. ದೂರದ ಬೆಳಗಾವಿ ಮತ್ತಿತರ ಪಟ್ಟಣಗಳಿಂದ ತರಕಾರಿ ಖರೀದಿಸಬೇಕಿದ್ದು ಸಗಟು ದರದಲ್ಲಿಯೂ ಏರಿಕೆಯಾದ ಕಾರಣ ಚಿಲ್ಲರೆ ಮಾರಾಟದಲ್ಲೂ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿಗಳಾದ ಗಂಗಮ್ಮ, ರಂಗಮ್ಮ, ಹನುಮಂತಿ ಮತ್ತು ರಾಜಾಸಾಬ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.