ಮಂಗಳವಾರ, ಫೆಬ್ರವರಿ 25, 2020
19 °C
ಗ್ರ್ರಾಮ ಪಂಚಾಯಿತಿ ಇರುವ ಗ್ರಾಮದಲ್ಲೇ ಅವ್ಯವಸ್ಥೆಯ ಆಗರ

ರಾಯಚೂರು| ಜೇಗರಕಲ್‌ನಲ್ಲಿ ಕೊಳಚೆಯಿಂದ ದಿಗ್ಬಂಧನ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತಾಲ್ಲೂಕಿನ ಜೇಗರಕಲ್‌ ಗ್ರಾಮದಲ್ಲಿ ಕೊಳಚೆ ನೀರಿಗೆ ಚಲನೆಯಿಲ್ಲದೆ ಜನಸಂಚಾರ ಮಾರ್ಗಗಳು ಹೊಂಡಗಳಾಗಿ ಬದಲಾಗಿದ್ದು, ಅನಾರೋಗ್ಯ ಆವರಿಸಿಕೊಳ್ಳುತ್ತಿದೆ.

ಮುಖ್ಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರು ವಾಸಿಸುವ ಬಡಾವಣೆಗಳಲ್ಲಿ ಚರಂಡಿಗಳಿಲ್ಲದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅಶುಚಿತ್ವದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಮಕ್ಕಳು ಹಾಗೂ ವಯೋವೃದ್ಧರು ನಡೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಮನೆಗಳಿಂದ ಹರಿದು ಬರುವ ಮಲೀನ ನೀರು ಸಂಗ್ರಹವಾಗುತ್ತಿದೆ. ಆರು ವರ್ಷಗಳ ಹಿಂದೆ ನಿರ್ಮಿಸಿರುವ ರಸ್ತೆಗಳು ಕಿತ್ತುಹೋಗಿವೆ.

ಶಾಲಾ ಮಕ್ಕಳು ಕೊಳಚೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದು, ಜ್ವರದ ಬಾಧೆಗೆ ಈಡಾಗುತ್ತಿದ್ದಾರೆ. ದುರ್ನಾತ ಹೆಚ್ಚಾಗುತ್ತಿದೆ. ಬೈಕ್‌ ಹಾಗೂ ಇತರೆ ವಾಹನ ಸವಾರರನ್ನು ಹೊರತುಪಡಿಸಿ ಮೂಗು ಮುಚ್ಚಿಕೊಂಡು ನಡೆದುಕೊಂಡು ಹೋಗುವ ಸ್ಥಿತಿ ಇದೆ. ರಸ್ತೆಗೆ ಕೊಳಚೆ ಹರಿದು ಬಿಡುವವರ ವಿರುದ್ಧ ಪಂಚಾಯಿತಿಯಿಂದ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಕನಿಷ್ಠ ಪಕ್ಷ, ಕೊಳಚೆ ಹರಿದು ಹೊರ ಬಿಡದಂತೆ ಸೂಚನೆಯನ್ನೂ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆರೋಪಿಸುತ್ತಿದ್ದಾರೆ.

‘‍ಪರಿಶಿಷ್ಟರು ವಾಸಿಸುವ ಮನೆಗಳಿಗೆ ಮೂಲ ಸೌಕರ್ಯ ಮಾಡುವುದಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಬರುತ್ತದೆ ಎಂದು ಹೇಳುತ್ತಿದ್ದಾರೆ ವಿನಾ, ಮನವಿ ಸಲ್ಲಿಸಿದರೂ ಕೆಲಸ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗೂ ದೂರು ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳುವಂತೆ ಕೆಳಗಿನ ಅಧಿಕಾರಿಗೆ ಬರೆದು ಕೊಡುತ್ತಿದ್ದಾರೆ. ವಾಸ್ತವದಲ್ಲಿ ಏನೂ ಕೆಲಸ ಆಗುತ್ತಿಲ್ಲ’ ಎಂದು ಗ್ರಾಮಸ್ಥ ಜಿಂದಪ್ಪ ಅಳಲು ವ್ಯಕ್ತಪಡಿಸಿದರು.

‘ಗ್ರಾಮದ ಕೆಲವು ಭಾಗದಲ್ಲಿ ರಸ್ತೆಗಳು ಆಗಬೇಕಿದೆ. ಪ್ರಮುಖವಾಗಿ ಪರಿಶಿಷ್ಟರ ಓಣಿಯಲ್ಲಿ ಒಂದು ಕಿಲೋ ಮೀಟರ್‌ನಷ್ಟು ರಸ್ತೆ ಹಾಳಾಗಿದೆ. ಕೊಳಚೆ ತುಂಬಿಕೊಂಡಿದ್ದು, ಅದನ್ನು ತೆಗೆಸಿ ಹಾಕುವುದಕ್ಕೆ ಅನುದಾನದ ಅಗತ್ಯವಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚರ್ಚಿಸಿದ್ದಾರೆ. ಸಮಸ್ಯೆ ಪರಿಹರಿಸಲು ನೆರವು ಒದಗಿಸುವುದಾಗಿ ಶಾಸಕರು ಭರವಸೆ ಕೊಟ್ಟಿದ್ದಾರೆ. ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸುವ ತಯಾರಿ ಮಾಡಿಕೊಂಡಿದ್ದಾರೆ’ ಎಂದು ಜೇಗರಕಲ್‌ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)