ಶುಕ್ರವಾರ, ಫೆಬ್ರವರಿ 26, 2021
27 °C
ಪಕ್ಕಾ ರಸ್ತೆ ನಿರ್ಮಾಣ ಮಾಡುವಂತೆ ಸಾರ್ವಜನಿಕರ ಒತ್ತಾಯ

ಸಣ್ಣ ಮಳೆಗೆ ಸವಕಳಿಯಾದ ಬಡಾವಣೆ ರಸ್ತೆಗಳು!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜೂನ್‌ನಲ್ಲಿ ಸುರಿದ ಸಣ್ಣ ಪ್ರಮಾಣದ ಮಳೆಗೆ ನಗರದ ಹಲವು ಬಡಾವಣೆ ರಸ್ತೆಗಳು ಬಾಯಿ ತೆರೆದುಕೊಂಡು ಹೊಂಡಗಳಾಗಿವೆ!

ಒಳಚರಂಡಿ ಹಾಗೂ ನಿರಂತರ ನೀರು ಸಂಪರ್ಕ ಕಲ್ಪಿಸಲು ಅಗೆದುಹಾಕಿದ್ದ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ದುಸ್ತರವಾಗಿದೆ. ಕಚ್ಚಾರಸ್ತೆಗಳಲ್ಲಿ ನೀರು ನಿಂತುಕೊಂಡು ಸಮಸ್ಯೆಯ ಅಳ ಹೆಚ್ಚವಾಗುತ್ತಿದೆ. ಆದರೂ ಹೊಂಡಗಳನ್ನು ಮುಚ್ಚಿಸಿ ವಾಹನಗಳು ಸಂಚರಿಸಲು ಮತ್ತು ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ.

ನಗರದಲ್ಲಿ ಮೂಲ ಸೌಕರ್ಯಗಳ ನಿರ್ಮಾಣ ಹಾಗೂ ನಿರ್ವಹಣೆ ಮಾಡಬೇಕಿದ್ದ ನಗರಸಭೆಯು ಈ ವರ್ಷ ಮಳೆಗಾಲಕ್ಕೆ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಚರಂಡಿಗಳು ಮತ್ತು ರಾಜಕಾಲುವೆಗೆಳ ಸ್ವಚ್ಛತೆಗೆ ಯೋಜನೆ ಮಾಡಿಕೊಳ್ಳಲಾಗಿದೆ ಎನ್ನುವ ಮಾತನ್ನು ನಗರಸಭೆಯ ಅಧಿಕಾರಿಗಳು ಈ ವರ್ಷವೂ ಪುನರಾವರ್ತನೆ ಮಾಡುತ್ತಿದ್ದಾರೆ. ಮಳೆ ನೀರಿಗೆ ಕೊಚ್ಚಿ ಹೋಗುವುದು ಗೊತ್ತಿದ್ದರೂ ಕೆಲವು ಕಡೆಗಳಲ್ಲಿ ಹೊಂಡ ಭರ್ತಿಗೆ ಮರಳು ಮಿಶ್ರಿತ ಕೆಂಪು ಮಣ್ಣು ಸುರಿದು ತೇಪೆ ಹಾಕಲಾಗಿದೆ.

ಮಳೆಗಾಲದಲ್ಲಿ ಬಡಾವಣೆ ರಸ್ತೆಗಳಲ್ಲಿ ನಿರ್ಮಾಣವಾಗುವ ಹೊಂಡಗಳನ್ನು ಮುಚ್ಚುವ ಕೆಲಸವನ್ನು ಪ್ರತಿವರ್ಷ ಚಳಿಗಾಲದಲ್ಲಿ ಮಾಡಬೇಕು. ಆದರೆ, ರಾಯಚೂರು ನಗರಸಭೆಯ ಅಧಿಕಾರಿಗಳು, ಮಳೆಗಾಲ ಮುಗಿದು ಮತ್ತೆ ಮಳೆಗಾಲ ಆರಂಭವಾದರೂ ಈ ಬಗ್ಗೆ ಯೋಜಿಸಿ ಅನುಷ್ಠಾನಗೊಳಿಸುವ ಕಾರ್ಯ ಮಾಡಿಲ್ಲ.

ನಿಜಲಿಂಗಪ್ಪ ಕಾಲೋನಿ, ವಾಸವಿ ನಗರ, ಆಶಾಪುರ ರಸ್ತೆ, ಆಫೀಸರ್ಸ್‌ ಕಾಲೋನಿ, ದೇವರ ಕಾಲೋನಿ, ಐಬಿ ಕಾಲೋನಿ, ಡ್ಯಾಡಿ ಕಾಲೋನಿಯ ಕಚ್ಚಾರಸ್ತೆಗಳಲ್ಲಿ ನೀರು ಸಂಗ್ರಹವಾಗುವ ದೃಶ್ಯ ಕಂಡುಬರುತ್ತಿದೆ. ಶಾಲಾ, ಕಾಲೇಜುಗಳಿರುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾದರೂ ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿಗೊಳಿಸುವ ವ್ಯವಸ್ಥೆಯನ್ನು ನಗರಸಭೆ ಅಳವಡಿಸಿಕೊಂಡಿಲ್ಲ.

ಜಿಲ್ಲಾ ಕಾಂಗ್ರೆಸ್‌ ಹಳೇ ಕಚೇರಿ ಎದುರಿನಿಂದ ಮಾವಿನಕೆರೆ ರಸ್ತೆಗೆ ಸಂಪರ್ಕಿಸುವ ರಸ್ತೆಯು ಅಧೋಗತಿಗೆ ತಲುಪಿದೆ. ಈ ಮಾರ್ಗದಲ್ಲಿ ಶಾಲಾ ವಾಹನಗಳು ಮತ್ತು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಸ್ವಲ್ಪ ಮಳೆಯಾದರೂ ವಾಹನಗಳು ತಗ್ಗುಗಳಲ್ಲಿ ಸಿಲುಕಿಕೊಳ್ಳುವ ಸ್ಥಿತಿ ಇದೆ. ನೀರಿನ ಪೈಪ್‌ಲೈನ್‌ ಅಳವಡಿಸುವುದಕ್ಕಾಗಿ ರಸ್ತೆ ಅಗೆದುಹಾಕಲಾಗಿದೆ. ಅದನ್ನು ಸೂಕ್ತ ರೀತಿಯಲ್ಲಿ ಮುಚ್ಚದೆ ಇರುವುದರಿಂದ ಮಣ್ಣು ದಿನದಿಂದ ದಿನಕ್ಕೆ ಒಳಗೆ ಕುಸಿಯುತ್ತಿದ್ದು, ಹೊಂಡಗಳು ನಿರ್ಮಾಣವಾಗಿವೆ.

ವಸಂತ ನಗರ ಹಾಗೂ ಜವಾಹರ ನಗರದ ಮುಖ್ಯರಸ್ತೆಗಳಲ್ಲಿ ರಸ್ತೆ ಹೊಂಡಗಳು ಚಿಕ್ಕ ಕೆರೆಗಳಂತೆ ಗೋಚರಿಸುತ್ತವೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ವಾಹನಗಳ ಓಡಾಟ ನಿಧಾನವಾಗಿ ಬಿಡುತ್ತದೆ. ರಸ್ತೆಯಲ್ಲಿರುವ ಹೊಂಡದ ಆಳಕ್ಕೆ ಚಾಲಕರು ಹೆದರಿಕೊಂಡು ವಾಹನಗಳನ್ನು ಓಡಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು