ಬುಧವಾರ, ಸೆಪ್ಟೆಂಬರ್ 18, 2019
26 °C
ಸಾರ್ವಜನಿಕರು ಎದುರಿಸುವ ಸಮಸ್ಯೆಗೆ ದೊರೆಯದ ಸ್ಪಂದನೆ

ಗಂಜ್‌ ರಸ್ತೆ ಹಾಳುಬಿದ್ದರೂ ಕಣ್ತೆರೆಯದ ಆಡಳಿತ!

Published:
Updated:
Prajavani

ರಾಯಚೂರು: ನಗರದ ಮಧ್ಯೆಭಾಗ ಚಂದ್ರಮೌಳೇಶ್ವರ ವೃತ್ತದಿಂದ ಗಂಜ್‌ವೃತ್ತದವರೆಗಿನ ರಸ್ತೆಯು ಹಾಳುಬಿದ್ದು ವಾಹನಗಳು ಸಂಚರಿಸುವುದು ಸಂಕಷ್ಟವಾಗಿದೆ.

ಇದು ರಾಯಚೂರು–ವಾಡಿ ದ್ವಿಪಥ ಹೆದ್ದಾರಿಯಾಗಿದ್ದರೂ ನಿರ್ವಹಣೆ ಆಯೋಮಯವಾಗಿದೆ. ರಸ್ತೆ ತಗ್ಗುಗಳು ನಿರ್ಮಾಣವಾಗಿ ಹಲವು ತಿಂಗಳುಗಳಾಗಿದ್ದರೂ ಕನಿಷ್ಠ ಅವುಗಳಿಗೆ ತೇಪೆ ಹಾಕುವ ಕೆಲಸವೂ ಆಗಿಲ್ಲ. ಲಾರಿ, ಸರ್ಕಾರಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ತಗ್ಗು ನಿರ್ಮಾಣವಾದ ಕಡೆಗಳಲ್ಲಿ ವಾಹನ ದಟ್ಟಣೆ ಆಗುತ್ತಿದೆ. ಇದರಿಂದ ಬೈಕ್‌, ಕಾರು ಹಾಗೂ ಇತರೆ ಸಣ್ಣ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ.

ಗದ್ವಾಲ್‌ ಮಾರ್ಗದಿಂದ ಹೈದರಾಬಾದ್‌ನತ್ತ ಸಂಚರಿಸುವ ವಾಹನಗಳಿಗೆ ಮತ್ತು ರಾಯಚೂರು ನಗರದೊಳಗೆ ಸಂಚರಿಸುವ ವಾಹನಗಳಿಗೆ ಇದು ಪ್ರಮುಖ ರಸ್ತೆ. ಚಂದ್ರಮೌಳೇಶ್ವರ ವೃತ್ತದಿಂದ ಗದ್ವಾಲ್‌ ರಸ್ತೆವರೆಗೂ ಮಾತ್ರ ಸಿಸಿ ರಸ್ತೆ ಇದೆ. ಅಲ್ಲಿಂದ ಗಂಜ್‌ವೃತ್ತದವರೆಗಿನ ಮಾರ್ಗವು ಸುಸಜ್ಜಿತವಾಗಿಲ್ಲ. ಅಲ್ಲಲ್ಲಿ ತಗ್ಗುಗಳು ನಿರ್ಮಾಣವಾಗಿದ್ದು, ಮಳೆಯಿಂದಾಗಿ ನೀರು ಸಂಗ್ರಹಗೊಂಡು ತಗ್ಗುಗಳು ಮತ್ತಷ್ಟು ಆಳವಾಗುತ್ತಿವೆ. ಇದರಿಂದ ವಾತಾವರಣ ಕೂಡಾ ದೂಳುಮಯವಾಗಿದೆ.

ರಸ್ತೆ ಅಕ್ಕಪಕ್ಕದ ಮಳಿಗೆಗಳಿಗೂ ದೂಳು ವ್ಯಾಪಿಸಿಕೊಂಡು ತಾಪತ್ರಯವನ್ನುಂಟು ಮಾಡಿದೆ. ನಗರಸಭೆ ಅಧಿಕಾರಿಗಳಾಗಲಿ, ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳು ರಸ್ತೆ ದುರಸ್ತಿ ಕೈಗೊಳ್ಳುವ ಬಗ್ಗೆ ಇದುವರೆಗೂ ಕ್ರಮ ಜರುಗಿಸಿಲ್ಲ. ಗಂಜ್‌ ಎಪಿಎಂಸಿ ಮಾರುಕಟ್ಟೆಗೆ ವಿವಿಧ ದವಸಧಾನ್ಯಗಳನ್ನು ಮಾರಾಟಕ್ಕೆ ತರುವ ರೈತರ ವಾಹನಗಳು ತೊಂದರೆಗೆ ಸಿಲುಕುತ್ತಿವೆ.

‘ರಾಯಚೂರು ಜಿಲ್ಲಾ ಕೇಂದ್ರವಾಗಿದ್ದರೂ ಅದಕ್ಕೆ ತಕ್ಕಂತೆ ರಸ್ತೆಗಳನ್ನು ಅಭಿವೃದ್ಧಿ ಮಾಡಿಲ್ಲ. ಸ್ಥಳೀಯ ರಾಜಕಾರಣಿಗಳು ಕೂಡಾ ಉತ್ತಮ ರೀತಿಯಲ್ಲಿ ಕೆಲಸ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ರಾಯಚೂರು ಅಭಿವೃದ್ಧಿ ಬಗ್ಗೆ ಯಾರಿಗೂ ಪ್ರಶ್ನೆ ಕೇಳಿದರೂ ಉಪಯೋಗವಿಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದೇ ಒಂದು ಕಾಮಗಾರಿ ಪರಿಪೂರ್ಣವಾಗಿ ನಡೆಯುತ್ತಿಲ್ಲ’ ಎಂದು ಮಡ್ಡಿಪೇಟೆಯ ನಿವಾಸಿ ವೆಂಕಟೇಶ ಅವರು ಬೇಸರ ವ್ಯಕ್ತಪಡಿಸಿದರು.

Post Comments (+)