ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ತಾಸಿನಲ್ಲಿ ಸಿ.ಟಿ ಸ್ಕ್ಯಾನಿಂಗ್‌ ವರದಿ

ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ನೂತನ ಉಪಕರಣ, ಸೇವೆಗೆ ಸಮರ್ಪಿಸಿದ ಸಚಿವ ಮಲ್ಲಿಕಾರ್ಜುನ
Last Updated 1 ಮಾರ್ಚ್ 2018, 10:25 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರಿಗೂ ಸುಲಭ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬ ಸದುದ್ದೇಶದಿಂದ ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.

ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನಿಂಗ್‌ ಉಪಕರಣವನ್ನು ಬುಧವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

ಉಚಿತ ಡಯಾಲಿಸಿಸ್ ಸೌಲಭ್ಯ, ತೀವ್ರ ನಿಗಾ ಘಟಕಗಳ ಸ್ಥಾಪನೆ, ಸಿ.ಟಿ / ಎಂಆರ್‌ಐ ಸೌಲಭ್ಯ, ಆರೋಗ್ಯ ವಿಸ್ತರಣಾ ಕೇಂದ್ರಗಳು, ಜನೌಷಧ ಮಳಿಗೆಗಳು, ಕ್ಯಾಂಟೀನ್ ಸೌಲಭ್ಯವುಳ್ಳ ವಾಣಿಜ್ಯ ಸಂಕೀರ್ಣಗಳ ಸ್ಥಾಪನೆ, ಶುದ್ಧ ಕುಡಿಯವ ನೀರು, ರಕ್ತ ವಿದಳನಾ ಘಟಕಗಳು, ಗಣಕೀಕೃತ ಎಕ್ಸ್ ರೇ ಹಾಗೂ ಅಲ್ಟ್ರಾಸೋನೋಗ್ರಫಿ ಮೊದಲಾದ ಆರೋಗ್ಯ ಸೇವೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಅದೇ ರೀತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಹ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತೆರೆಯುತ್ತಿದ್ದು, ದಾವಣಗೆರೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ. ಶೀಘ್ರ ನೂತನ ಕಟ್ಟಡದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿ.ಟಿ ಸ್ಕ್ಯಾನ್ ಸೆಂಟರ್‌ಗಳು ಆರಂಭಗೊಂಡಿದ್ದು, ಈ ಕೇಂದ್ರದ ಮೂಲಕ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತವಾಗಿ ಸೇವೆ ಒದಗಿಸಲಾಗುವುದು. ಹೊರರೋಗಿಗಳಿಗೆ ₹ 1,800 ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಸುಮಾರು ₹ 2 ಕೋಟಿ ವೆಚ್ಚದಲ್ಲಿ ಈ ಸಿ.ಟಿ ಸ್ಕ್ಯಾನ್ ಸೆಂಟರ್ ಆರಂಭವಾಗಿದ್ದು, ಸಾರ್ವಜನಿಕರು ಅವಶ್ಯಕತೆಗನುಣವಾಗಿ ಈ ಸೌಲಭ್ಯ ಸದುಪಯೋಗಪಡಿಸಿ ಕೊಳ್ಳಬೇಕು. ಇಲ್ಲಿ ಒಂದೇ ಗಂಟೆಯಲ್ಲಿ ವರದಿ ಸಿಗಲಿದೆ. ಖಾಸಗಿಯಾಗಿ ಸಿ.ಟಿ ಸ್ಕ್ಯಾನ್ ಸೆಂಟರ್‌ನಲ್ಲಿ ₹ 2 ರಿಂದ ₹ 3 ಸಾವಿರ ಹಣ ತೆರಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ಡಾ. ರಾಘವೇಂದ್ರ ಸ್ವಾಮಿ, ಡಾ.ರವಿಕುಮಾರ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಕೇರಂ ಗಣೇಶ್, ಮುಮ್ತಾಜ್, ಸಿಟಿ ಸ್ಕ್ಯಾನ್ ಸೆಂಟರ್‌ನ ನಿಲೇಶ್ ಪಟೇಕಾರ್ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT